8 ತಿಂಗಳ ಕಂದಮ್ಮನನ್ನ ಅತ್ಯಾಚಾರಗೈದಿದ್ದ ಕಾಮುಕನನ್ನು ಹಿಗ್ಗಾ ಮುಗ್ಗಾ ಥಳಿಸಿದ ಸಾರ್ವಜನಿಕರು-ವಿಡಿಯೋ ನೋಡಿ

Public TV
1 Min Read

ಇಂದೋರ್: 8 ತಿಂಗಳ ಕಂದಮ್ಮನ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ಆರೋಪಿಯನ್ನು ಸಾರ್ವಜನಿಕರು ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಮಧ್ಯ ಪ್ರದೇಶದ ಇಂದೋರ್ ಜಿಲ್ಲಾ ನ್ಯಾಯಾಲಯದ ಮುಂದೆ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಳನ್ನು ಆಧರಿಸಿ ಆರೋಪಿಯನ್ನು ಪತ್ತೆ ಮಾಡಿದ್ದ ಪೊಲೀಸರು ಕಾಮುಕನನ್ನು ನ್ಯಾಯಾಲಯದ ಮುಂದೇ ಹಾಜರು ಪಡಿಸಲು ಕರೆತಂದಿದ್ದರು.

ಕಾಮುಕನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ಕುರಿತು ಮಾಹಿತಿ ಪಡೆದ ಸಾರ್ವಜನಿಕರು ಆ ವೇಳೆ ಕೋರ್ಟ್ ಆವರಣದಲ್ಲಿ ಜಮಾವಣೆಗೊಂಡಿದ್ದರು. ಆರೋಪಿಯನ್ನು ಪೊಲೀಸರು ವಾಹನದಿಂದ ಕೆಳಗಿಳಿಸುತ್ತಿದಂತೆ ಸಾರ್ವಜನಿಕರು ಏಕಾಏಕಿ ಮನಸ್ಸಿಗೆ ಬಂದಂತೆ ಥಳಿಸಿದ್ದಾರೆ. ಈ ವೇಳೆ ಬೆರಳೆಣಿಕೆ ಸಂಖ್ಯೆಯಲ್ಲಿದ್ದ ಪೊಲೀಸರು ಆರೋಪಿಯನ್ನು ರಕ್ಷಿಸಲು ಹರಸಾಹಸ ಪಟ್ಟಿದ್ದಾರೆ.

ಘಟನೆಯ ವಿವರ: ಪುಟ್ಟ ಕಂದಮ್ಮನ ಹೆತ್ತವರು ಬಲೂನ್ ಮಾರಿ ಜೀವನ ನಡೆಸುತ್ತಿದ್ದು, ನಗರದ ರಾಜ್ ವಾಡ ಕೋಟೆಯ ರಸ್ತೆ ಬದಿಯಲ್ಲಿ ನಿದ್ದೆ ಮಾಡುತ್ತಿದ್ದರು. ಇದನ್ನು ಗಮನಿಸಿದ 21 ವರ್ಷದ ಕಾಮುಕ ನವೀನ್ ಎಂಬಾತ ಮುಗ್ದ ಕಂದಮ್ಮನನ್ನು ಹೆತ್ತವರ ಬಳಿಯಿಂದ ಅಪಹರಿಸಿ 200 ಮೀಟರ್ ದೂರದಲ್ಲಿರೋ ಕಟ್ಟಡಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಬಳಿಕ ಕೊಲೆಗೈದಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದೇವೆ. ಆರೋಪಿ ಅತ್ಯಾಚಾರಕ್ಕೊಳಗಾದ ಮಗುವಿನ ಹೆತ್ತವರಿಗೆ ತಿಳಿದವನಾಗಿದ್ದು, ಹೀಗಾಗಿ ಆತನನ್ನು ಬೇಗ ಬಂಧಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.

ಪ್ರಕರಣ ಬೆಳಕಿಗೆ: ಕಟ್ಟಡದ ನೆಲ ಮಾಳಿಗೆಯಲ್ಲಿರುವ ತನ್ನ ಅಂಗಡಿಯ ಬಾಗಿಲು ತೆರೆಯಲು ಮಾಲೀಕ ಬಂದಾಗ, ಒಂದು ಬದಿಯಲ್ಲಿ ಪುಟ್ಟ ಕಂದಮ್ಮ ಶವವಾಗಿ ಬಿದ್ದಿರುವುದು ಕಂಡು ಬಂದಿತ್ತು. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ರವಾನಿಸಿದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು.

ಸದ್ಯ ಪೊಲೀಸರು ದ್ವಿ-ಚಕ್ರ ವಾಹನದ ಜೊತೆಗೆ ರಕ್ತಸಿಕ್ತವಾದ ಬಟ್ಟೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯನ್ನು ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಖಂಡಿಸಿದ್ದರು. ಪ್ರಕರಣದ ವಿಚಾರಣೆಯನ್ನು ವೇಗವಾಗಿ ನಡೆಸಲು ಸೂಚಿಸಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *