ಬೆಂಗಳೂರು: ಬುಧವಾರ ಅಕ್ಷಯ ತೃತೀಯ ಆಗಿದ್ದರಿಂದ ಹೆಚ್ಚಿನ ಮಹಿಳೆಯರು ಚಿನ್ನ ಖರೀದಿಯಲ್ಲಿ ಬ್ಯುಸಿ ಆಗಿದ್ದರು. ಸದ್ಯ ರಾಜ್ಯದಲ್ಲಿ ಚುನಾವಣೆ ರಣಕಣ ರಂಗೇರುತ್ತಿದ್ದು, ಅಕ್ಷಯ ತೃತೀಯವನ್ನ ರಾಜಕಾರಣಿಗಳು ಬಹು ಚಾಲಾಕಿತನದಿಂದ ಬಳಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆ ಪಬ್ಲಿಕ್ ಟಿವಿ ರಾಜಕಾರಣಿಗಳು ಮತದಾರರಿಗೆ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ನೀಡಲು ಮುಂದಾಗುತ್ತಿದ್ದಾರೆ ಎಂಬ ಸುದ್ದಿಯನ್ನು ಬಿತ್ತರಿಸಿತ್ತು.
ಚುನಾವಣಾ ಆಯೋಗದ ಹದ್ದಿನ ಕಣ್ಣು ತಪ್ಪಿಸಿ ಕೆಲ ರಾಜಕೀಯ ಮುಖಂಡರು ಮತದಾರರಿಗೆ ಫ್ರೀಯಾಗಿ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ನೀಡಿದ್ದಾರೆ ವಿಷಯ ರಿವೀಲ್ ಆಗಿದೆ. ಈ ಬಾರಿ ಚುನಾವಣೆ ಆಯೋಗ ಎಲ್ಲ ಚಿನ್ನದ ಮಳಿಗೆಗಳಿಗೆ ಬಲ್ಕ್ ಗೋಲ್ಡ್ ಖರೀದಿಯ ಡೀಟೈಲ್ಸ್ ಹಾಗೂ ಅಭರಣದಂಗಡಿಯಲ್ಲಿ ಸಿಸಿಟಿವಿ ಫೋಟೇಜ್ ನೀಡುವಂತೆ ಹೇಳಿದೆ. ಆದ್ರೆ ಮುಖಂಡರು ಚಿನ್ನದಂಗಂಡಿ ಮಾಲೀಕರ ಜೊತೆ ಹೊರಗಡೆಯೇ ಡೀಲ್ ಮಾಡಿದ್ದಾರೆ.
ಏನದು ಡೀಲ್?: ರಾಜಕೀಯ ನಾಯಕರು ಟೋಕನ್ ಕೊಟ್ಟು ಚಿನ್ನವನ್ನು ತಾವಿದ್ದ ಸ್ಥಳಕ್ಕೆ ತರಿಸಿಕೊಂಡು ಜನರಿಗೆ ಹಂಚಿದ್ದಾರೆ ಎನ್ನಲಾಗಿದೆ. ನೀಲಿ ಟೋಕನ್ ಕೊಟ್ರೆ ಚಿನ್ನದ ಒಡವೆ, ಕೆಂಪು ಟೋಕನ್ ಕೊಟ್ರೆ ಬೆಳ್ಳಿ ಅಂತಾ ಮೊದಲೇ ಡೀಲ್ ಮಾಡಿಕೊಂಡು ಆಭರಣದಂಗಡಿಗೆ ಜನರನ್ನು ಕಳುಹಿಸಿ ಪ್ರತ್ಯೇಕವಾಗಿ ವಹಿವಾಟು ನಡೆದಿದೆ. ಇನ್ನು ದೇವಸ್ಥಾನದಲ್ಲಿ ನಿನ್ನೆ ಮಹಿಳೆಯರಿಗೆ ಬಾಗಿನ ಕೊಟ್ಟು ಅದ್ರಲ್ಲಿ ಚಿನ್ನದ ಒಡವೆ ಇಟ್ಟು ಯಾರಿಗೂ ತಿಳಿಸದಂತೆ ರಾಜಕೀಯ ಮುಖಂಡರು ದೇವರ ಮೇಲೆ ಪ್ರಮಾಣ ಮಾಡಿಸಿಕೊಂಡಿದ್ದಾರೆ ಅಂತಾ ತಿಳಿದು ಬಂದಿದೆ.
ರಾಜ್ಯದಲ್ಲಿ ಒಂದೇ ದಿನದಲ್ಲಿ ದಾಖಲೆಯ ಚಿನ್ನ ಮಾರಾಟವಾಗಿದೆ. ಈ ವರ್ಷ 3,495 ಕೆಜಿ ಚಿನ್ನ ಸೇಲ್ ಆಗಿದೆ. ಒಟ್ಟಾರೆಯಾಗಿ ಹಿಂದಿನ ವರ್ಷಕ್ಕಿಂತ ಈ ಬಾರಿ ಶೇ.25ರಷ್ಟು ವ್ಯಾಪಾರ ಹೆಚ್ಚಳವಾಗಿದೆ. ವ್ಯಾಪಾರದಲ್ಲಿ ಬೆಂಗಳೂರು ನಂಬರ್ ಒನ್ ಆದ್ರೆ, ಹುಬ್ಬಳ್ಳಿ, ಬೆಳಗಾವಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.