ದೇಶಾದ್ಯಂತ ಎಟಿಎಂನಲ್ಲಿ ನೋ ಕ್ಯಾಶ್: ದಿಢೀರ್ ನೋಟುಗಳ ಬೇಡಿಕೆ ಹೆಚ್ಚಾಯ್ತು!

By
2 Min Read

ನವದೆಹಲಿ: ದೇಶದ ಬಹಳಷ್ಟು ರಾಜ್ಯಗಳಲ್ಲಿನ ಹಲವಾರು ಎಟಿಎಂ ಗಳಲ್ಲಿ ಹಣ ಇಲ್ಲದೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಬಹಳಷ್ಟು ಎಟಿಎಂ ಗಳಲ್ಲಿ ಹಣ ಇಲ್ಲ ಎಂಬ ಬೋರ್ಡ್ ಹಾಕಲಾಗಿದೆ.

500, 1 ಸಾವಿರ ರೂ. ನೋಟು ನಿಷೇಧಗೊಳ್ಳುವ ಮೊದಲು 17.64 ಲಕ್ಷ ಕೋಟಿ ರೂ. ನಷ್ಟು ನಗದು ಚಲಾವಣೆಯಲ್ಲಿತ್ತು. ಅಪನಗದೀಕರಣದ ಬಳಿಕ 17.97 ಲಕ್ಷ ಕೋಟಿ ರೂ. ಅಷ್ಟು ನಗದು ಚಲಾವಣೆಯಲ್ಲಿದೆ. ಅಪನಗದೀಕರಣದ ಬಳಿಕ 2000 ರೂ ಮುಖಬೆಲೆಯ 5 ಲಕ್ಷ ಕೋಟಿ ನೋಟುಗಳು ಮುದ್ರಣಗೊಂಡಿದೆ ಎಂದು ಆರ್ ಬಿ ಐ ಸ್ಪಷ್ಟಪಡಿಸಿದೆ.

ಸಾಕಷ್ಟು ನೋಟುಗಳು ಮುದ್ರಣವಾಗಿದ್ದರೂ ಎಟಿಎಂ ಗಳಲ್ಲಿ ಹಣ ಇಲ್ಲದಿರುವುದಕ್ಕೆ ಕಾರಣ 2000 ರೂ ನೋಟುಗಳ ಅಕ್ರಮ ಸಂಗ್ರಹಣೆ ಕಾರಣವಾಗಿರಬಹುದು ಎಂದು ಬ್ಯಾಂಕ್ ಗಳು ಶಂಕೆ ವ್ಯಕ್ತಪಡಿಸಿವೆ.

ಚುನಾವಣಾ ಸಂಧರ್ಭದಲ್ಲಿ ಈ ರೀತಿ ನೋಟುಗಳ ಕೊರತೆ ಉಂಟಾಗುತ್ತದೆ. ಮೇ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಕಾರಣ ಕರ್ನಾಟಕ ಸೇರಿದಂತೆ ಹತ್ತಿರದ ರಾಜ್ಯಗಳಲ್ಲಿ ನೋಟುಗಳ ಬೇಡಿಕೆ ದಿಢೀರ್ ಏರಿಕೆಯಾಗಿರಬಹುದು ಎನ್ನುವ ಸಂದೇಹವನ್ನು ಬ್ಯಾಂಕ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿನ ನಗದು ಚಲಾವಣೆಯ ಸ್ಥಿತಿಯನ್ನು ಗಮನಿಸಿದ್ದೇನೆ. ಸಾಕಷ್ಟು ನಗದು ಹಣ ಚಲಾವಣೆಯಲ್ಲಿ ಇದೆ ಹಾಗೂ ಬ್ಯಾಂಕ್ ಗಳಲ್ಲೂ ಲಭ್ಯವಿದೆ. ಕೆಲವು ಪ್ರದೇಶಗಳಲ್ಲಿ ಬೇಡಿಕೆ ದಿಢೀರ್ ಏರಿಕೆಯಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸಮಸ್ಯೆ ಉಂಟಾಗಿದೆ. ತ್ವರಿತವಾಗಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *