ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸಿಂಗ್ ಕಚೇರಿಗೆ ಬೀಗ!

Public TV
1 Min Read

ಬಳ್ಳಾರಿ: ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸಿಂಗ್ ಅವರ ಕಚೇರಿಗೆ ಹೊಸಪೇಟೆ ಎಸಿ ಗಾರ್ಗಿಜೈನ್ ಬೀಗ ಮುದ್ರೆ ಜಡಿದಿದ್ದಾರೆ.

ಭಾನುವಾರ ಸಂಜೆ ದಾಳಿ ನಡೆಸಿದ ಎಸಿ ಗಾರ್ಗಿ ಜೈನ್ ಅಲ್ಲಿದ್ದ ಪುಸ್ತಕ, ನೋಟ್‍ಬುಕ್, ಕುರ್ಚಿ, ಸ್ಪೀಕರ್ ಗಳನ್ನು ವಶಪಡಿಸಿಕೊಂಡು ಕಚೇರಿಗೆ ಬೀಗ ಮುದ್ರೆ ಹಾಕಿದ್ದಾರೆ. ಈ ವೇಳೆ ಸ್ಥಳದಲ್ಲಿಯೇ ಇದ್ದ ಆನಂದ್ ಸಿಂಗ್, ನಾವಿಲ್ಲಿ ಯಾವುದೇ ಪಕ್ಷದ ಚಿಹ್ನೆಯಡಿ ಸೇರಿಲ್ಲ. ಜನರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ಬಂದಿದ್ದು, ಚುನಾವಣೆಗೆ ಸಂಬಂಧಿಸಿದ ಚಟುವಟಿಕೆಗಳು ಇಲ್ಲಿ ನಡೆದಿಲ್ಲ ಎಂದು ಗಾರ್ಗಿ ಅವರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದ್ದಾರೆ.

ಆದ್ರೆ ಗಾರ್ಗಿ ಅವರು ಆನಂದ್ ಸಿಂಗ್ ಅವರಿಗೆ ನೀವು ಕಾನೂನು ಉಲ್ಲಂಘಿಸಿ, ಧ್ವನಿವರ್ಧಕಗಳನ್ನು ಬಳಸಿ ಸಭೆ ನಡೆಸಿದ್ದೀರಿ. ಈ ರೀತಿ ನೂರಾರು ಜನ ಒಂದು ಕಡೆ ಸೇರಿದ್ದು, ಸರಿಯಲ್ಲ ಎಂದು ಹೇಳಿ ಬೀಗಮುದ್ರೆ ಹಾಕಿದ್ದಾರೆ. ಅಷ್ಟೇ ಅಲ್ಲದೇ ಪ್ರಕರಣ ದಾಖಲಿಸಿಕೊಂಡು ಎಫ್.ಐ.ಆರ್ ಪ್ರತಿಯನ್ನು ತಮಗೆ ತೋರಿಸಬೇಕೆಂದು ಗಾರ್ಗಿ ಜೈನ್ ಪೊಲೀಸರಿಗೆ ಸೂಚಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಗಾರ್ಗಿ ಅವರು, ಪಕ್ಷದ ಚಟುವಟಿಕೆ ನಡೆಸುವುದಕ್ಕೆ ಅನುಮತಿ ಕೋರಿ ಕೆಲವು ದಿನಗಳ ಹಿಂದೆ ನನಗೆ ಪತ್ರ ಬರೆದಿದ್ದರು. ಆದರೆ ಸಮೀಪದಲ್ಲಿಯೇ ಶಾಲೆ ಇದೆ. ಶಾಲೆಯಿಂದ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಪಕ್ಷದ ಚಟುವಟಿಕೆ ನಡೆಸುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಹಾಗಾಗಿ ಅನುಮತಿ ಕೊಡಲು ಬರುವುದಿಲ್ಲ ಎಂದು ತಿಳಿಸಿದ್ದೆ. ಆದರೂ ಅವರು ಕಾನೂನು ಮೀರಿ ಸಭೆ ನಡೆಸುತ್ತಿದ್ದರು. ಹೀಗಾಗಿ ಐ.ಪಿ.ಸಿ. ಕಾಲಂ 188ರ ಅಡಿ ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *