ಸೋಶಿಯಲ್ ಮೀಡಿಯಾದಲ್ಲಿ ಲವ್, ದೆಹಲಿಯಲ್ಲಿ ಮದ್ವೆ, ಭಾರತದಲ್ಲಿ ವಾಸ- ಈಗ ಕಲಬುರಗಿಯಲ್ಲಿ ಬ್ರೇಕಪ್!

Public TV
2 Min Read

– ಇದು ಅರ್ಜೆಂಟೀನಾದ ಯವತಿ ಹಾಗೂ ಅಫ್ಘಾನಿಸ್ತಾನದ ಯುವಕನ ಲವ್ ಕಹಾನಿ

ಕಲಬುರಗಿ: ಅರ್ಜೆಂಟೀನಾ ದೇಶದ ಯವತಿ ಹಾಗೂ ಅಫ್ಘಾನಿಸ್ತಾನ ದೇಶದ ಯುವಕನ ಪ್ರೀತಿ ಮತ್ತು ಮದುವೆ ಈಗ ಕಲಬುರಗಿ ನಗರದಲ್ಲಿ ಬ್ರೇಕಪ್ ಆಗಿದೆ.

ಅರ್ಜೆಂಟಿನಾದ ಯುವತಿ ಡೇನಿಯಲ್ ಹಾಗೂ ಅಫ್ಘಾನಿಸ್ತಾನ ದೇಶದ ಯುವಕ ಅಹ್ಮದ್ ಜರೀಫ್ ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯವಾಗಿದ್ದರು. ಪರಿಚಯವಾದ ನಂತರ ಪರಸ್ಪರ ಇಬ್ಬರು ಸ್ನೇಹ ಬೆಳೆಸಿದ್ದು, ಸ್ನೇಹವೂ ಪ್ರೀತಿಗೆ ತಿರುಗಿದೆ. ಹಲವು ದಿನಗಳ ಕಾಲ ಚಾಟಿಂಗ್ ಮತ್ತು ವಿಡಿಯೋ ಕಾಲಿಂಗ್ ಮಾಡುವ ಮೂಲಕ ಪ್ರೀತಿ ಮಾಡಿದ್ದರು.

ಬಳಿಕ ಒಪ್ಪಿಗೆ ಮೇರೆಗೆ ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದು ಮುಂದಿನ ಜೀವನಕ್ಕಾಗಿ ಭಾರತ ದೇಶವನ್ನೇ ಆಯ್ಕೆ ಮಾಡಿಕೊಂಡಿದ್ದರು. ಹೀಗಾಗಿ ಇಬ್ಬರು ತಮ್ಮ-ತಮ್ಮ ದೇಶಗಳಲ್ಲಿ ಭಾರತಕ್ಕೆ ಹೋಗುವ ವೀಸಾ ಮಾಡಿಸಿಕೊಂಡು ದೆಹಲಿಗೆ ಬಂದು ಭೇಟಿಯಾಗಿ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಮದುವೆಯಾಗಿದ್ದರು. ಮದುವೆಯಾದ ನಂತರ ಭಾರತದ ವಿವಿಧೆಡೆ ಸುತ್ತಾಡಿ ಕರ್ನಾಟಕಕ್ಕೆ ಬಂದಿದ್ದಾರೆ. ಐದು ದಿನಗಳ ಹಿಂದೆ ಕಲಬುರಗಿ ನಗರಕ್ಕೆ ಬಂದು ಹಾಗರಗಾ ರಸ್ತೆಯ ಮೆಕ್ಕಾ ಕಾಲೋನಿಯಲ್ಲಿ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದರು.

ಯುವಕ ಅಹ್ಮದ್ ಜರೀಫ್ ಕುರಾನ್ ಕುರಿತು ಮಕ್ಕಳಿಗೆ ಟ್ಯೂಷನ್ ಹೇಳುವ ಕಲಸದಲ್ಲಿ ತೊಡಗಿಸಿಕೊಂಡಿದ್ದಾನೆ. ಹೀಗೆ ಇಬ್ಬರೂ ಅನ್ಯೋನ್ಯವಾಗಿ ಜೀವನ ನಡೆಸುತ್ತಿರುವಾಗಲೇ ಅಹ್ಮದ್ ಜರೀಫ್ ತನ್ನ ಪತ್ನಿ ಡೇನಿಯಲ್ ಮೇಲೆ ಧಾರ್ಮಿಕ ಆಚರಣೆ ಆಚರಿಸುವ ಕುರಿತು ಒತ್ತಡ ಹೇರಲು ಶುರು ಮಾಡಿದ್ದಾನೆ. ನನ್ನ ಜೊತೆ ನೀನು ನಮಾಜ್ ಪಠಣ ಮಾಡಬೇಕು, ಕುರಾನ್ ಓದಬೇಕು ಎಂದು ದಿನನಿತ್ಯ ಕಿರುಕುಳ ಕೊಡಲು ಶುರು ಮಾಡಿದ್ದಾನೆ. ನಾನ್ಯಾಕೆ ನಮಾಜ್ ಮಾಡಲಿ ನನ್ನ ತಾಯಿ ಮುಸ್ಲಿಂ. ಆದರೆ ನಾನು ಮುಸ್ಲಿಂ ಅಲ್ಲ ಎಂದು ಆಕೆ ನಮಾಜ್‍ಗೆ ಒಪ್ಪಿಗೆ ಸೂಚಿಸದ ಹಿನ್ನೆಲೆಯಲ್ಲಿ ಮತ್ತಷ್ಟು ಕಿರುಕುಳ ಕೊಡಲು ಶುರು ಮಾಡಿದ್ದಾನೆ. ಇದರಿಂದ ಬೇಸತ್ತ ಆಕೆ ಮುಂಬೈನಲ್ಲಿರುವ ಅರ್ಜೆಂಟೀನಾ ರಾಯಭಾರಿ ಕಚೇರಿಗೆ ದೂರು ನೀಡಿದ್ದಾಳೆ.

ತಕ್ಷಣವೇ ಅಲ್ಲಿನ ಅಧಿಕಾರಿ ಕಲಬುರಗಿ ನಗರದ ಎಸ್‍ಪಿ ಕಚೇರಿಗೆ ಬಂದು ವಿಚಾರಿಸಿ ಆಕೆಯನ್ನ ಕಚೇರಿಗೆ ಕರೆಸಿಕೊಂಡು ಕೌನ್ಸಿಲಿಂಗ್ ನಡೆಸಿದ್ದಾರೆ. ನಂತರ ಮನವೊಲಿಸಿ ಡೇನಿಯಲ್‍ಳನ್ನ ಅರ್ಜೆಂಟಿನಾ ದೇಶಕ್ಕೆ ಸೇಫ್ ಆಗಿ ವಾಪಾಸ್ ಕಳುಹಿಸಿಕೊಟ್ಟಿದ್ದಾರೆ.

ಒಟ್ಟಿನಲ್ಲಿ ಅರ್ಜೆಂಟಿನಾ ಮತ್ತು ಅಫ್ಘಾನಿಸ್ತಾನ ಪ್ರೇಮ ಪ್ರಕರಣ ಸುಖ್ಯಾಂತಗೊಂಡಿದ್ದು, ಈ ಕುರಿತು ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *