ರಾಮನಗರ, ಚನ್ನಪಟ್ಟಣ ಎರಡೂ ಕಡೆಯಿಂದ ಎಚ್‍ಡಿಕೆ ಸ್ಪರ್ಧೆ

Public TV
1 Min Read

ರಾಮನಗರ: ರಾಮನಗರ, ಚನ್ನಪಟ್ಟಣ ಎರಡೂ ಕಡೆಯಿಂದ ಎಚ್‍ಡಿ ಕುಮಾರಸ್ವಾಮಿಯವರು ಸ್ಪರ್ಧೆ ಮಾಡಲಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಹೇಳಿದ್ದಾರೆ.

ರಾಮನಗರದಲ್ಲಿ ನಡೆದ ಜೆಡಿಎಸ್ ವಿಕಾಸ ಪರ್ವ ಸಮಾವೇಶದಲ್ಲಿ ಮಾತನಾಡಿದ ಮಾಜಿ ಪ್ರಧಾನಿಗಳು ರಾಮನಗರ, ಚನ್ನಪಟ್ಟಣ ಎರಡು ಕಣ್ಣಿದ್ದಂತೆ. ನಿಮ್ಮೆಲ್ಲರ ಒತ್ತಡಕ್ಕೆ ತಲೆ ಬಾಗಿ ರಾಮನಗರ, ಚನ್ನಪಟ್ಟಣ ಎರಡೂ ಕಡೆ ಎಚ್‍ಡಿ ಕುಮಾರಸ್ವಾಮಿಯವರು ಸ್ಪರ್ಧಿಸುವ ನಿರ್ಣಯ ಮಾಡಿದ್ದಾರೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್, ಬಿಜೆಪಿ ವಿರುದ್ಧ ಕುಮಾರಸ್ವಾಮಿಯವರು ಹೋರಾಟ ಮಾಡಲಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳೂ ಪರಸ್ಪರ ವಾಕ್ಸಮರಕ್ಕಿಳಿದಿವೆ. ಭ್ರಷ್ಟತೆಯನ್ನ ಜನರ ಮುಂದೆ ಸಾರಿ ಸಾರಿ ಹೇಳಿದ್ದಾರೆ. ಎರಡೂ ಪಕ್ಷಗಳು ಶಾಂತಿಭಂಗ ಮಾಡುತ್ತಿವೆ. ಬಿಜೆಪಿ ಜೊತೆ ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಕರಾವಳಿ ಹತೋಟಿಯಲ್ಲಿತ್ತು ಎಂದರು.

ಯಾರದೇ ಹಂಗಿಲ್ಲದೇ ಜೆಡಿಎಸ್ ಅಧಿಕಾರಕ್ಕೆ ಬರಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಾದ್ಯಂತ ಕುಮಾರಸ್ವಾಮಿಯವರ ಪ್ರವಾಸ ಅನಿವಾರ್ಯವಾಗಿದೆ. ಎರಡೂ ಕ್ಷೇತ್ರದ ಜನ ಇದೇ ಪ್ರೀತಿ ವಿಶ್ವಾಸವನ್ನ ತೋರ್ಪಡಿಸಿ, ಎರಡೂ ಕ್ಷೇತ್ರದ ಜನ ಪ್ರತಿಜ್ಞೆ ಮಾಡಬೇಕು ಎಂದು ಹೇಳಿದರು.

ಬಿಜೆಪಿಯ ‘ಬಿ’ ಟೀಂ ಜೆಡಿಎಸ್ ಅಂತಾ ನಮಗೆ ಹೇಳುತ್ತಾರೆ. ಹಾಗಂದು ಅದನ್ನು ಬರೆದುಕೊಟ್ಟು ಹೇಳಿಸುತ್ತಾರೆ. ಎಚ್‍ಡಿ ಕುಮಾರಸ್ವಾಮಿಯವರ ಬಗ್ಗೆ ಹತ್ತು ಹಲವು ಸಂಶಯ ವ್ಯಕ್ತಪಡಿಸ್ತಾರೆ. ಅವರ ಶ್ರೇಯಸ್ಸನ್ನು ನೋಡಲಾರದೇ ಸಂಶಯ ಪಡುತ್ತಾರೆ ಎಂದು ಕಿಡಿಕಾರಿದರು.

ಕನಕಪುರ, ಚನ್ನಪಟ್ಟಣ ನೀರಾವರಿಗೆ ಅರ್ಜಿ ಇಲ್ಲದೇ ಇಗ್ಗಲೂರು ಡ್ಯಾಂ ಕಟ್ಟಿಸಿದ್ದು ಯಾರು? ಕುಮಾರಸ್ವಾಮಿಯವರನ್ನು ಆಧುನಿಕ ಭಗೀರಥ ಅಂತ ಹೇಳುತ್ತಾರೆ. ನೀರಾವರಿ ವಿಚಾರ ಎತ್ತಿಕೊಂಡು ಜೆಡಿಎಸ್‍ಗೆ ಮತ ಕೊಡಬೇಡಿ ಅಂತ ಹೇಳುವವರಿಗೆ ಪಾಠ ಕಲಿಸಿ ಎಂದು ಎಚ್‍ಡಿಡಿ ಕರೆಕೊಟ್ಟರು.

ಕಾವೇರಿ ವಿಚಾರದಲ್ಲಿ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದೆ ತಮಿಳುನಾಡಿನ ಸಂಸದರು ಒತ್ತಡ ಹಾಕುತ್ತಿದ್ದಾರೆ. ಒಂದು ವೇಳೆ ಬಿಜೆಪಿ, ಇಲ್ಲವೇ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾನು ಹೇಗೆ ಲೋಕಸಭೆಯಲ್ಲಿ ಮುಖ ತೋರಿಸಲಿ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *