ಹೈದರಾಬಾದ್: ಇಬ್ಬರು ಹೆಣ್ಣು ಮಕ್ಕಳೊಂದಿಗೆ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾಕಾಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಕಂಡೋಜಿ ಬಜಾರ್ ನಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದ ಘೋಷ್ಪಾರಾ ಗ್ರಾಮದ ಸ್ವರೂಪ್ (37), ಪತ್ನಿ ದೀಪಾ (30) ಥಿತ್ಲಿ ದಾಸ್(5) ಮತ್ತು 5 ತಿಂಗಳ ಮಗು ಆತ್ಮಹತ್ಯೆಗೆ ಶರಣಾದವರು. ಸ್ವರೂಪ್ ಸಿಕಂದರಾಬಾದ್ನ ಜನರಲ್ ಬಜಾರ್ ನಲ್ಲಿ ಚಿನ್ನದ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದರು. ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ಕಂಡೋಜಿ ಬಜಾರ್ ನಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಡೆದಿದ್ದೇನು?
ಶುಕ್ರವಾರ ಸ್ವರೂಪ್ ಮಧ್ಯಾಹ್ನ ಸುಮಾರು 1.30 ಗಂಟೆಗೆ ತನ್ನ ಗ್ರಾಹಕರಿಗೆ ಕರೆ ಮಾಡಿ ನಾನು ಊಟ ಮಾಡಿ ಬರುವವರೆಗೂ ಅಂಗಡಿಯನ್ನು ನೋಡಿಕೊಳ್ಳುವಂತೆ ಹೇಳಿದ್ದಾರೆ. ಆದರೆ ತುಂಬಾ ಸಮಯವಾದರೂ ಸ್ವರೂಪ್ ಬಂದಿರಲಿಲ್ಲ. ಗ್ರಾಹಕರು ಸ್ವರೂಪ್ ಮನೆಗೆ ಹೋಗಿ ನೋಡಿದ್ದಾರೆ. ಆದರೆ ಮನೆಯ ಬಾಗಿಲು ಹೊರಗಿನಿಂದ ಲಾಕ್ ಮಾಡಲಾಗಿತ್ತು.
ಗ್ರಾಹಕ ನಂತರ ಅವರು ಮತ್ತೆ ರಾತ್ರಿ 8 ಗಂಟೆಗೆ ಮನೆಯ ಬಳಿ ಹೋಗಿ ನೋಡಿದ್ದಾರೆ. ಆಗಲೂ ಬಾಗಿಲು ತೆರೆದಿರಲಿಲ್ಲ. ಆದರೆ ಮನೆಯಿಂದ ಟಿವಿ ಶಬ್ದ ಕೇಳಿಸುತ್ತಿತ್ತು. ಕೊನೆಗೆ ಅನುಮಾನಗೊಂಡು ಅವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಕೂಡಲೆ ಧಾವಿಸಿದ್ದು, ಮನೆಯ ಬಾಗಿಲುಗಳನ್ನು ಮುರಿದು ಒಳಗೆ ಹೋಗಿದ್ದಾರೆ. ಆದರೆ ಕುಟುಂಬದ ಎಲ್ಲಾ ಸದಸ್ಯರು ನೆಲದ ಮೇಲೆ ಬಿದ್ದಿದ್ದನ್ನು ನೋಡಿ ಆಘಾತಗೊಂಡಿದ್ದಾರೆ.
ನಾವು ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಿದ್ದೇವು. ಆದರೆ ವೈದ್ಯರು ಪರೀಕ್ಷೆ ಮಾಡಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಸದ್ಯಕ್ಕೆ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ವರದಿ ಬಂದ ಮೇಲೆ ಸಾವಿಗೆ ನಿಖರ ಕಾರಣ ತಿಳಿಯುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.