ಹೈದರಾಬಾದ್: ಬೋರ್ಡ್ ಪರೀಕ್ಷೆ ಬರೆಯಲು ಹೋಗುತ್ತಿದ್ದ 17 ವರ್ಷದ ಯುವಕನನ್ನ ಹಾಡಹಗಲೇ ಕೊಲೆ ಮಾಡಿರುವ ಘಟನೆ ಇಂದು ಹೈದರಾಬಾದ್‍ನಲ್ಲಿ ನಡೆದಿದೆ.
ಮೃತ ಯುವಕನನ್ನು ಸುಧೀರ್ ಎಂದು ಗುರುತಿಸಲಾಗಿದೆ. ಕುಕಟ್‍ಪಲ್ಲಿ ಸಂಚಾರಿ ಪೊಲೀಸ್ ಠಾಣೆಯ ಎದುರಿನಲ್ಲೇ ಇರುವ ಮೆಟ್ರೋ ನಿಲ್ದಾಣದ ಬಳಿ ಇಂದು ಬೆಳಗ್ಗೆ 8.20ರ ವೇಳೆಗೆ ಈ ಘಟನೆ ನಡೆದಿದೆ.
ಸುಧೀರ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ನಾಲ್ವರು ದುಷ್ಕರ್ಮಿಗಳ ತಂಡ ಅವರನ್ನು ತಡೆದಿದೆ. ಚಾಕು ಹಿಡಿದಿದ್ದ ತಂಡವನ್ನ ನೋಡಿದ ಬಳಿಕ ಸುಧೀರ್ ತನ್ನ ಪ್ರಾಣ ಉಳಿಸಿಕೊಳ್ಳಲು ಮುಖ್ಯರಸ್ತೆಯಲ್ಲೇ ಓಡಿದ್ದಾನೆ. ಈ ವೇಳೆ ಆತ ಶಾಲಾ ಬಸ್‍ವೊಂದನ್ನ ಏರಿದ್ದಾನೆ. ಆದ್ರೆ ದುಷ್ಕರ್ಮಿಗಳು ಆತನನ್ನ ಬಸ್‍ನಿಂದ ಹೊರಗೆಳೆದು ಮೆಟ್ರೋ ನಿಲ್ದಾಣದ ಬಳಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
ಘಟನೆ ಬಳಿಕ ಮೂವರು ದುಷ್ಕರ್ಮಿಗಳು ಪರಾರಿಯಾಗಿದ್ದು, ಓರ್ವನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆಸಿದ್ದಾರೆ.
ವರದಿಗಳ ಪ್ರಕಾರ ಮೃತ ಯುವಕ ಕೆಲವು ದಿನಗಳ ಹಿಂದೆ ತನ್ನ ಸ್ನೇಹಿತರ ಜೊತೆ ಜಗಳ ಮಾಡಿಕೊಂಡಿದ್ದ. ಇದೇ ಕಾರಣಕ್ಕೆ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಸುಧೀರ್ ಸ್ನೇಹಿತರಾದ ನವೀನ್, ಕೃಷ್ಣ, ಮಹಿ, ತೇಜಾ ಹಾಗೂ ಇನ್ನಿತರರ ಮೇಲೆ ಅನುಮಾನ ವ್ಯಕ್ತವಾಗಿದೆ. ಘಟನೆಯಿಂದಾಗಿ ಕುಕಟ್‍ಪಲ್ಲಿ ಪ್ರದೇಶದ ನಿವಾಸಿಗಳು ಹಾಗೂ ಅಂಗಡಿ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.
ಯುವಕನ ಮೃತದೇಹವನ್ನು ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ.