ಅಸಾಧ್ಯವಾಗಿದ್ದನ್ನು ಸಾಧ್ಯ ಮಾಡಿದೆ ಟಗರು: ಚಿತ್ರ ನೋಡಿ ವಿಮರ್ಶೆ ಬರೆದ ಸುದೀಪ್

Public TV
2 Min Read

ಬೆಂಗಳೂರು: ಟಗರು ಸಿನಿಮಾ ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ಸು ಕಾಣುತ್ತಿದ್ದು ಕಿಚ್ಚ ಸುದೀಪ್ ಪ್ರೇಕ್ಷಕರಂತೆ ಟಗರು ಚಿತ್ರವನ್ನು ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲದೇ ಸಿನಿಮಾದ ಬಗ್ಗೆ ಕಿರು ಬರಹವನ್ನು ಬರೆದು ಟ್ವೀಟ್ ಮಾಡಿದ್ದಾರೆ.

ಕಿಚ್ಚ ಸುದೀಪ್ ಟಗರು ಸಿನಿಮಾ ನೋಡಿ ಚಿತ್ರವನ್ನು ತಮ್ಮದೇ ಸ್ಟೈಲ್‍ನಲ್ಲಿ ವಿಮರ್ಶಿಸಿದ್ದಾರೆ. ಟಗರು ಸಿನಿಮಾದ ನಿರೂಪಣೆ ತುಂಬಾ ವಿಶೇಷವಾಗಿದೆ ಹಾಗೂ ಚೆನ್ನಾಗಿದೆ. ತೆರೆ ಮೇಲೆ ಬರುವ ಪ್ರತಿಯೊಂದು ಪಾತ್ರವೂ ಪ್ರೇಕ್ಷಕರನ್ನು ಕನ್ ಫ್ಯೂಸ್ ಮಾಡಿಸುತ್ತದೆ. ಕನ್ನಡ ಚಿತ್ರರಂಗದಲ್ಲಿ ಪ್ರೇಕ್ಷಕರ ಕನ್ ಫ್ಯೂಸ್ ದೂರ ಮಾಡುವ ಪ್ರಯತ್ನ ಅದ್ಭುತವಾಗಿ ಮಾಡಿದ್ದಾರೆ ಎಂದು ಸುದೀಪ್ ಹೇಳಿದ್ದಾರೆ.

ಟಗರು ಅಂತಹ ಸಿನಿಮಾವನ್ನು ಮಾಡಲು ಸೂರಿಯಿಂದ ಮಾತ್ರ ಸಾಧ್ಯ. ಚಿತ್ರದಲ್ಲಿ ವಿಭಿನ್ನ ಪಾತ್ರ, ಪಾತ್ರಕ್ಕೆ ತಕ್ಕಂತೆ ಲೋಕೇಶನ್ ಆಯ್ಕೆ ಮಾಡಿಕೊಳ್ಳುವುದು ಅವರಿಂದ ಮಾತ್ರ ಸಾಧ್ಯ. ಸಿನಿಮಾ ನೋಡಿ ಚಿತ್ರಮಂದಿರದಿಂದ ಹೊರಬರುತ್ತಿದ್ದಂತೆ ಕೆಲವರಿಗೆ ಪಾತ್ರಗಳ ಹೆಸರು ನೆನಪಿರುವುದ್ದೀಲ್ಲ. ಆದರೆ ಸೂರಿ ತಮ್ಮ ಚಿತ್ರದ ಪಾತ್ರಗಳಿಗೆ ಚಿಟ್ಟೆ, ಜಿರಳೆ ಹೀಗೆ ವಿಭಿನ್ನ ಹೆಸರನ್ನು ನೀಡಿ ಜನರು ಆ ಪಾತ್ರವನ್ನು ನೆನಪು ಮಾಡಿಕೊಳ್ಳುವಂತೆ ಮಾಡುತ್ತಾರೆ ಎಂದು ಸುದೀಪ್ ಸೂರಿ ನಿರ್ದೇಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿತ್ರದ ನಾಯಕ ಶಿವರಾಜ್ ಕುಮಾರ್ ಬಗ್ಗೆ ನಿಜ ಹೇಳಬೇಕೆಂದರೆ ಶಿವಣ್ಣ ತಮ್ಮ ಎನರ್ಜಿಯನ್ನು ಈ ಚಿತ್ರದಲ್ಲಿ ಒಟ್ಟುಗೂಡಿಸಿದ್ದಾರೆ. ಅವರ ಎನರ್ಜಿ ಎಂದಿಗೂ ಅಂತ್ಯವಾಗುವುದಿಲ್ಲ ಎಂಬುದು ಈ ಚಿತ್ರದಲ್ಲಿ ಗೊತ್ತಾಗುತ್ತದೆ. ಇನ್ನೂ ಈ ಚಿತ್ರದಲ್ಲಿ ಡಾಲಿ ಪಾತ್ರದಲ್ಲಿ ಕಾಣಿಸಿಕೊಂಡ ಧನಂಜಯ್ ಅಭಿನಯವೂ ಚೆನ್ನಾಗಿದೆ. ಅವರ ಸ್ಕ್ರೀನ್ ಅಪಿಯರೆನ್ಸ್ ಅದ್ಭುತವಾಗಿದೆ ಎಂದು ಸುದೀಪ್ ಬಣ್ಣಿಸಿದ್ದಾರೆ.

ಚಿತ್ರದಲ್ಲಿ ಚಿಟ್ಟೆ ಪಾತ್ರದಲ್ಲಿ ಕಾಣಿಸಿಕೊಂಡ ನಟ ವಸಿಷ್ಠ ಸಿಂಹ ಅವರ ಧ್ವನಿಯನ್ನು ಸುದೀಪ್ ಮೆಚ್ಚಿಗೊಂಡಿದ್ದಾರೆ. ಚಿತ್ರದ ಕೆಲ ಸೀನ್‍ಗಳಲ್ಲಿ ವಸಿಷ್ಠ ಧ್ವನಿ ಎಲ್ಲರ ಗಮನ ಅವರತ್ತ ಸೆಳೆಯುವ ಹಾಗೇ ಮಾಡುತ್ತದೆ. ಅವರ ಧ್ವನಿ ಅದ್ಭುತವಾಗಿದ್ದು, ಅವರ ಸೂಕ್ಷ್ಮ ನಟನೆ ಎಲ್ಲರನ್ನೂ ಸೆಳೆಯುತ್ತದೆ ಎಂದು ಕಿಚ್ಚ ಹೇಳಿದ್ದಾರೆ.

ಟಗರು ಚಿತ್ರದಲ್ಲಿ ಸಂಗೀತ ಕೂಡ ಮುಖ್ಯ ಪಾತ್ರ ವಹಿಸುತ್ತದೆ. ಈ ಚಿತ್ರದ ಸೀನ್‍ಗಳಿಗೆ ತಕ್ಕಂತೆ ಅದಕ್ಕೆ ಹಿನ್ನಲೆ ಸಂಗೀತ ನೀಡಿರುವುದು ಚೆನ್ನಾಗಿದೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸುಕೊಳ್ಳುತ್ತಿರುವ ಹೊಸ ಸಂಗೀತ ನಿರ್ದೇಶಕರಿಗೆ ಸುದೀಪ್ ಶುಭ ಕೋರಿದ್ದಾರೆ.

ಟಗರು ಚಿತ್ರ ವೀಕ್ಷಿಸಿದ ಸುದೀಪ್ ಇಡೀ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ. ಅಸಾಧ್ಯವಾಗಿದ್ದನ್ನು ಸಾಧ್ಯ ಮಾಡಿ ತೋರಿಸಿದ ಚಿತ್ರದ ಪ್ರತಿಯೊಬ್ಬ ಸದಸ್ಯರಿಗೂ ನನ್ನ ಶುಭಾಶಯ ಎಂದು ಸುದೀಪ್ ಟಗರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಗೂಗಲ್ ಪ್ಲಸ್ ನಲ್ಲಿ ಬರೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *