ಸಿಲಿಕಾನ್ ಸಿಟಿ ಜನರಿಗೆ ಗುಡ್ ನ್ಯೂಸ್- ಭಾರತದಲ್ಲೇ ಫಸ್ಟ್, ಇಂದಿನಿಂದ ಬೆಂಗ್ಳೂರಲ್ಲಿ ಹೆಲಿ ಟ್ಯಾಕ್ಸಿ ಸೇವೆ ಆರಂಭ

Public TV
2 Min Read

ಬೆಂಗಳೂರು: ಟ್ರಾಫಿಕ್ ಸಮಸ್ಯೆ ತಪ್ಪಿಸಲು ಹಾಗೂ ಪ್ರಯಾಣ ಸಮಯವನ್ನ ಕಡಿಮೆ ಮಾಡಲು ನೆರವಾಗುವಂತೆ ಭಾರತದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಹೆಲಿ ಟ್ಯಾಕ್ಸಿ ಸೇವೆ ಇಂದಿನಿಂದ ಆರಂಭವಾಗಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಎಲೆಕ್ಟ್ರಾನಿಕ್ ಸಿಟಿ ನಡುವೆ ಇಂದು ಹೆಲಿ ಟ್ಯಾಕ್ಸಿ ಸೇವೆ ಆರಂಭವಾಗಿದೆ. ಇಂದು ಬೆಳಗ್ಗೆ 6.30ಕ್ಕೆ ಎಲೆಕ್ಟ್ರಾನಿಕ್ ಸಿಟಿಯಿಂದ ಮೊದಲ ಹೆಲಿ ಟ್ಯಾಕ್ಸಿ ಟೇಕ್ ಆಫ್ ಆಗಿದೆ. ಐವರು ಗ್ರಾಹಕರು ಮುಂಗಡವಾಗಿ ತಮ್ಮ ಸೀಟ್ ಬುಕ್ ಮಾಡಿದ್ದರು. ದಿನಕ್ಕೆ ಮೂರು ಟ್ರಿಪ್‍ನಂತೆ ಈ ಸೇವೆ ಇರಲಿದ್ದು, ಕೊಚ್ಚಿ ಮೂಲದ ತಂಬಿ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಈ ಸೇವೆ ಒದಗಿಸುತ್ತಿದೆ. ಮುಂದೆ ಹೆಚ್‍ಎಎಲ್ ವಿಮಾನ ನಿಲ್ದಾಣಕ್ಕೂ ಸೇವೆಯನ್ನ ವಿಸ್ತರಿಸಲಿದ್ದಾರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಎಲೆಕ್ಟ್ರಾನಿಕ್ ಸಿಟಿ ನಡುವೆ ರಸ್ತೆ ಮಾರ್ಗವಾಗಿ ಪ್ರಯಾಣ ಮಾಡಲು 1 ರಿಂದ 3 ಗಂಟೆ ಸಮಯ ಬೇಕು. ಆದ್ರೆ ಹೆಲಿಕಾಪ್ಟರ್ ನಿಂದ ಪ್ರಯಾಣ ಸಮಯ 15 ನಿಮಿಷಗಳಿಗೆ ಇಳಿಯಲಿದೆ. ಗ್ರಾಹಕರು ‘ಹೆಲಿಟ್ಯಾಕ್ಸಿ.ಕ್ಯಾಬ್’ ಆ್ಯಪ್ ಮೂಲಕ ಹೆಲಿ ಟ್ಯಾಕ್ಸಿಯನ್ನ ಬುಕ್ ಮಾಡಿಕೊಳ್ಳಬಹುದು. ಒಬ್ಬರಿಗೆ 4 ಸಾವಿರ ರೂ.(ತೆರಿಗೆ ಸೇರಿ) ದರ ನಿಗದಿಪಡಿಸಲಾಗಿದೆ. ಈ ಎರಡು ನಿಲ್ದಾಣಗಳ ನಡುವೆ ಕ್ಯಾಬ್ ನಲ್ಲಿ ಹೋದರೆ ಸುಮಾರು 1500 ರಿಂದ 2000 ರೂ. ಖರ್ಚಾಗುತ್ತದೆ.

ಮೊದಲ ಹಂತದಲ್ಲಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿದ್ದು, ಇದು ಮುಂಬರುವ ಮಟ್ರೋ ನಿಲ್ದಾಣ ಹಾಗೂ ಬಸ್ ನಿಲ್ದಾಣಕ್ಕೆ ಸಮೀಪದಲ್ಲೇ ಇದೆ. ಎರಡನೇ ಹಂತದಲ್ಲಿ ವಿಮಾನ ನಿಲ್ದಾಣದಿಂದ ಕಂಠೀರವ ಸ್ಟೇಡಿಯಂ ಬಳಿ ಇರುವ ಐಟಿಸಿ ಗಾರ್ಡೇನಿಯಾ ಸೇರಿದಂತೆ ಐಷಾರಾಮಿ ಹೋಟೆಲ್‍ಗಳಿಗೆ ಸೇವೆ ಒದಗಿಸಲಾಗುತ್ತದೆ. ಈ ಹೋಟೆಲ್‍ಗಳಲ್ಲಿ ಎಲ್ಲಾ ಸುರಕ್ಷತೆ ಹಾಗೂ ಲ್ಯಾಂಡಿಂಗ್ ಮತ್ತು ಟೇಕ್ ಆಫ್‍ಗೆ ಬೇಕಾದ ವಿಮಾನಯಾನ ಅಗತ್ಯತೆಗಳಿವೆ ಎಂದು ತಂಬಿ ಏವಿಯೇಷನ್ ಅಧ್ಯಕ್ಷರು ಹಾಗೂ ಎಂಡಿ ಆಗಿರುವ ಕ್ಯಾಪ್ಟರ್ ಕೆಎನ್‍ಜಿ ನಾಯರ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಗ್ರಾಹಕರು ಹೆಲಿಕಾಪ್ಟರ್ ನಲ್ಲಿ 15 ಕೆಜಿ ತೂಕದಷ್ಟು ಲಗೇಜ್ ಹೊತ್ತಯ್ಯಬಹುದಾಗಿದ್ದು, ಅದಕ್ಕಿಂತ ಹೆಚ್ಚಿನ ತೂಕದ ಲಗೇಜ್‍ಗೆ ಹೆಚ್ಚಿನ ಶುಲ್ಕ ನೀಡಬೇಕಾಗುತ್ತದೆ ಎಂದು ನಾಯರ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *