ಬ್ಲೇಡ್ ನಿಂದ ಕತ್ತು ಕೊಯ್ದುಕೊಂಡು ಜೈಲಿನಲ್ಲೇ ಸೈಕೋ ಜೈಶಂಕರ್ ಆತ್ಮಹತ್ಯೆ

Public TV
1 Min Read

ಬೆಂಗಳೂರು: ಅತ್ಯಾಚಾರಿ, ಸೈಕೋ ಕಿಲ್ಲರ್ ಜೈಶಂಕರ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬ್ಲೇಡ್ ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

24 ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಸೈಕೋ ಜೈಶಂಕರ್, 2013ರ ಸೆಪ್ಟೆಂಬರ್‍ನಲ್ಲಿ ಜೈಲಿನಿಂದ ಪರಾರಿಯಾಗಿದ್ದನು. ಕಾಲಿಗೆ ಗಾಯ ಮಾಡಿಕೊಂಡಿದ್ದ ಆತ, ನಂತರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಜೈಲಿನಿಂದ ಸ್ವಲ್ಪ ದೂರದಲ್ಲೇ ನಡುಮುರಿದುಕೊಂಡು ಬಿದ್ದಿದ್ದ ಜೈಶಂಕರನನ್ನ ಬಂಧಿಸಲಾಗಿತ್ತು. ಬಳಿಕ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಶಂಕರನಿಗೆ ಪ್ರತ್ಯೇಕ ಸೆಲ್ ನೀಡಲಾಗಿದ್ದು, ಜೈಲಿನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದನು.

ಇದೀಗ ನಿನ್ನೆ ರಾತ್ರಿ 2 ಗಂಟೆ ಸುಮಾರಿಗೆ ಬ್ಲೆಡ್ ನಿಂದ ಕತ್ತು ಕೊಯ್ದುಕೊಂಡು ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಕೂಡಲೇ ವಿಕ್ಟೋರಿಯಾ ಅಸ್ಪತ್ರಗೆ ಕರೆತರಲಾಗುತಿತ್ತು. ಈ ವೇಳೆ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ.

ಪ್ರಕರಣಗಳು: ತುಮಕೂರಿನ ಗಿರಿಯನಹಳ್ಳಿಯಲ್ಲಿ ದೊಡ್ಡಯ್ಯ, ಪುಟ್ಟಮ್ಮ ದಂಪತಿಗಳು ಹಾಗೂ ಅವರ ಪುತ್ರಿ ರಾಜಮ್ಮ ಕೊಲೆ ಮಾಡಿದ ಆರೋಪ ಸೈಕೋ ಜಯಶಂಕರ್ ಮೇಲಿತ್ತು. 2011ರ ಮಾರ್ಚ್ 29ರಂದು ಈ ತ್ರಿವಳಿ ಕೊಲೆ ಪ್ರಕರಣದಲ್ಲಿ ಜೈಶಂಕರ್ ಖುಲಾಸೆಗೊಂಡಿದ್ದನು. ಸೂಕ್ತ ಸಾಕ್ಷಿಗಳು ದೊರೆಯದ ಹಿನ್ನೆಲೆಯಲ್ಲಿ ಖುಲಾಸೆಗೊಳಿಸಲಾಗಿದೆ ಎಂದು ಹೇಳಲಾಗಿತ್ತು.

2011ರ ಏಪ್ರಿಲ್ 27ರಂದು ಚಿತ್ರದುರ್ಗದ ಎಂ.ಕೆ.ಹಟ್ಟಿಯಲ್ಲಿ ಚಂದ್ರಮ್ಮ ಎಂಬವರ ಮೇಲೆ ಜೈಶಂಕರ್ ಅತ್ಯಾಚಾರ ನಡೆಸಿದ್ದನು. ಈ ವೇಳೆ ಅಲ್ಲಿಗೆ ಆಕೆಯ ಪತಿ ಹನುಮಂತಪ್ಪ ಬಂದಿದ್ದರು. ಇಬ್ಬರನ್ನು ಕೊಲೆ ಮಾಡಿದ ಆರೋಪ ಜೈಶಂಕರ್ ಮೇಲಿತ್ತು. ಈ ಜೋಡಿ ಕೊಲೆ ಪ್ರಕರಣವನ್ನೂ 2017ರ ಸೆಪ್ಟೆಂಬರ್‍ನಲ್ಲಿ ಬೆಂಗಳೂರು ಗ್ರಾಮಾಂತರ ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿತ್ತು.


ವಿಜಯಪುರದಲ್ಲಿ ಜೈ ಶಂಕರ್ ನನ್ನು ಪೊಲೀಸರು ಬಂಧಿಸಿದಾಗ ಹಲವು ಕೊಲೆ ಪ್ರಕರಣಗಳು ಹೊರಬಂದಿದ್ದವು. ಕರ್ನಾಟಕದ ಮೂರು ಪ್ರಕರಣಗಳಲ್ಲಿ ಜೈ ಶಂಕರ್ ಈಗಾಗಲೇ ಖುಲಾಸೆಗೊಂಡಿದ್ದು, ಇನ್ನೂ 2 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ತಮಿಳುನಾಡಿನಲ್ಲಿಯೂ ಜೈ ಶಂಕರ್ ಮೇಲೆ ಹಲವು ಕೇಸುಗಳಿವೆ ಎಂಬುದಾಗಿ ತಿಳಿದುಬಂದಿತ್ತು.

ಸದ್ಯ ಶಂಕರ್ ಆತ್ಮಹತ್ಯೆ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಮಾಡಿಕೊಳ್ಳಲಾಗಿದೆ.

https://www.youtube.com/watch?v=MdCVv0MV_Fc&feature=youtu.be

Share This Article
Leave a Comment

Leave a Reply

Your email address will not be published. Required fields are marked *