ಮಂಗಳೂರು: ವಿಗ್ರಹ ಕಳ್ಳತನ ಪ್ರಕರಣದಲ್ಲಿ ಮಂಗಳೂರಿನ ಕಾಂಗ್ರೆಸ್ ಮುಖಂಡ, ಶಾಸಕ ಜೆ.ಆರ್.ಲೋಬೋ ಆಪ್ತನನ್ನು ಪೊಲೀಸರು ಬಂಧಿಸಿದ್ದಾರೆ.
ಎನ್ಎಸ್ಯುಐ ಜಿಲ್ಲಾ ಕಾರ್ಯದರ್ಶಿ, ಮಂಗಳೂರಿನ ಕುಲಶೇಖರ ನಿವಾಸಿ ಆಸ್ಟಿನ್ ಪಿರೇರಾ ಬಂಧಿತ ಆರೋಪಿ. ಎರಡು ದಿನಗಳ ಹಿಂದೆ ಕುಂದಾಪುರದ ಕೋಟೇಶ್ವರ ಬಳಿ ನಾಲ್ಕು ಪಂಚಲೋಹದ ಜೈನ ತೀರ್ಥಂಕರರ ವಿಗ್ರಹಗಳನ್ನು ಕಳ್ಳತನ ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಈತ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದರು.
ಆ ಪೈಕಿ ಆಸ್ಟಿನ್ ಮಂಗಳೂರಿನ ಯುವ ಕಾಂಗ್ರೆಸ್ ಘಟಕದಲ್ಲಿ ಪ್ರಭಾವಿಯಾಗಿದ್ದು ಶಾಸಕ ಜೆ.ಆರ್ ಲೋಬೋ, ಮೊಯ್ದೀನ್ ಬಾವಾಗೆ ಆಪ್ತನಾಗಿದ್ದ. ಹೀಗಾಗಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮಂಗಳೂರಿಗೆ ಬಂದಾಗ ಜೊತೆಗೆ ನಿಂತು ತೆಗೆಸಿಕೊಂಡಿದ್ದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಆರೋಪಿಗಳಿಂದ ನೋಟು ಎಣಿಸುವ ಯಂತ್ರ, 40 ಸಾವಿರ ರೂ. ನಗದು ಹಾಗೂ ಎರ್ಟಿಗಾ ಕಾರು ವಶಕ್ಕೆ ಪಡೆಯಲಾಗಿದೆ. ಇದೀಗ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆಸ್ಟಿನ್ ಪಿರೇರಾನನ್ನು ಎನ್ಎಸ್ಯುಐ ನಿಂದ ತೆಗೆದುಹಾಕಲು ಚಿಂತನೆ ನಡೆದಿದೆ.