ನನ್ನ ಅರೆಸ್ಟ್ ಮಾಡಿ, ಎನ್‍ಕೌಂಟರ್ ನಲ್ಲಿ ಸಾಯಲು ಇಷ್ಟವಿಲ್ಲ- ಯುಪಿ ಪೊಲೀಸರಿಗೆ ಕೊಲೆ ಆರೋಪಿ ಶರಣು

Public TV
2 Min Read

ಲಕ್ನೋ: ಕೊಲೆ ಆರೋಪಿಯೊಬ್ಬ ಎನ್‍ಕೌಂಟರ್‍ಗೆ ಹೆದರಿ ಪೊಲೀಸರಿಗೆ ಶರಣಾಗಿರೋ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಮುನ್ಶದ್ ಅಲಿ(22) ಪೊಲೀಸರಿಗೆ ಶರಣಾಗಿರೋ ಆರೋಪಿ. ಭಾನುವಾರ ಮಧ್ಯಾಹ್ನ ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯ ಜಿಂಜಿನಾ ಪೊಲೀಸ್ ಠಾಣೆಗೆ ಹೋದ ಮುನ್ಶದ್, ಠಾಣೆಯಲ್ಲಿ ಕುಳಿತಿದ್ದ ಎಸ್‍ಹೆಚ್‍ಓ ಸಂದೀಪ್ ಬಾಲ್ಯನ್ ಅವರ ಮುಂದೆ ಕೈಜೋಡಿಸಿ, ನನಗೆ ಪೊಲೀಸರ ಗುಂಡೇಟಿನಿಂದ ಸಾಯುವ ಬಗ್ಗೆ ಭಯವಿದೆ. ನನ್ನನ್ನು ಬಂಧಿಸಿ ಎಂದು ಹೇಳಿ ಶರಣಾಗಿದ್ದಾನೆ.

ಮುನ್ಶದ್ ತನ್ನ ಹಳ್ಳಿಯಲ್ಲಿ ತೈಯ್ಯಬ್ ಎಂಬವರನ್ನ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಇದೀಗ ಈತ ಶರಣಾಗಿದ್ದು, ಇನ್ಮುಂದೆ ಅಪರಾಧ ಕೃತ್ಯಗಳನ್ನ ಮಾಡಲ್ಲ. ಅಪರಾಧ ಜೀವನ ಬಿಟ್ಟುಬಿಡುತ್ತೇನೆ. ಈಗಾಗಲೇ ಮಾಡಿರುವ ತಪ್ಪುಗಳಿಗೆ ಶಿಕ್ಷೆ ಅನುಭವಿಸುತ್ತೇನೆ ಅಂತ ಹೇಳಿದ್ದಾನೆ ಎಂದು ಸಂದೀಪ್ ಬಾಲ್ಯನ್ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇತರೆ 6 ಆರೋಪಿಗಳನ್ನ ಬಂಧಿಸಿ ಜೈಲಿಗೆ ಕಳಿಸಲಾಗಿದೆ. 7ನೇ ಆರೋಪಿಯಾಗಿದ್ದ ಮುನ್ಶದ್ ತಲೆಮರೆಸಿಕೊಂಡಿದ್ದ. ಈಗ ಆತನನ್ನು ಶಾಮ್ಲಿ ಜಿಲ್ಲೆಯ ಜೈಲಿಗೆ ಕಳಿಸಲಾಗಿದ್ದು, ಶೀಘ್ರದಲ್ಲೇ ವಿಚಾರಣೆಗಾಗಿ ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ಸಂದೀಪ್ ಹೇಳಿದ್ದಾರೆ.

ರಾಜ್ಯದಲ್ಲಿ ಈ ರೀತಿ ಎನ್‍ಕೌಂಟರ್‍ಗೆ ಭಯಪಟ್ಟು ಅರೋಪಿ ಪೊಲೀಸರಿಗೆ ಶರಣಾಗಿರುವುದು ಇದೇ ಮೊದಲೇನಲ್ಲ. ಕಳೆದ ವಾರ ಶಾಮ್ಲಿಯ ಕೈರಾನಾದಲ್ಲಿ ಕೊಲೆ ಆರೋಪಿಯಾದ ಸಲ್ಮಾನ್ ಬಾಬಾ ಎಂಬ ವ್ಯಕ್ತಿ ಪೊಲೀಸರಿಗೆ ಶರಣಾಗಿದ್ದ. ಅಪರಾಧ ಜೀವನವನ್ನ ಬಿಟ್ಟುಬಿಡ್ತೀನಿ ಎಂದು ಮಾತು ಕೊಟ್ಟಿದ್ದ.

ಅಧಿಕೃತ ಅಂಕಿಅಂಶದ ಪ್ರಕಾರ ರಾಜ್ಯದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರದ ಮೊದಲ 10 ತಿಂಗಳಲ್ಲಿ 1100 ಕ್ಕೂ ಹೆಚ್ಚು ಪೊಲೀಸ್ ಎನ್‍ಕೌಂಟರ್‍ಗಳು ನಡೆದಿವೆ. ಇದರಲ್ಲಿ 34 ಅಪರಾಧಿಗಳು ಸಾವನ್ನಪ್ಪಿದ್ದು, 265 ಮಂದಿ ಗಾಯಗೊಂಡಿದ್ದರು. ಹಾಗೂ 2744 ರೌಡಿ ಶೀಟರ್‍ಗಳ ಬಂಧನಕ್ಕೆ ನೆರವಾಗಿದೆ. ಹಾಗೇ ಇದೇ 10 ತಿಂಗಳಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದು, 247 ಮಂದಿ ಗಾಯಗೊಂಡಿದ್ದರು ಎಂದು ವರದಿಯಾಗಿದೆ.

ರೌಡಿಗಳ ಕಾಟ ಜಾಸ್ತಿಯಾಗಿದ್ದ ಹಿನ್ನೆಲೆಯಲ್ಲಿ ಯೋಗಿ ಅದಿತ್ಯನಾಥ್ ಅವರು ಪೊಲೀಸರಿಗೆ, ಪಿಸ್ತೂಲ್ ಪಾಕೆಟ್ ನಲ್ಲಿ ಇಡಲು ಕೊಟ್ಟಿರುವುದಲ್ಲ. ಗೂಂಡಾಗಳನ್ನು ಎನ್‍ಕೌಂಟರ್ ಮಾಡಲು ಕೊಡಲಾಗಿದೆ. ಹೀಗಾಗಿ ನಿಮಗೆ ಕೊಟ್ಟಿರುವ ಅಧಿಕಾರವನ್ನು ಚಲಾಯಿಸಿ ರೌಡಿಗಳನ್ನು ಮಟ್ಟ ಹಾಕಿ ಎಂದು ಸೂಚಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *