ಶಾಸಕ ಹ್ಯಾರಿಸ್ ಮಗನಿಂದ ಹಲ್ಲೆ ಪ್ರಕರಣ- ಹಲ್ಲೆಗೊಳಗಾದ ಯುವಕನ ಮೇಲೂ ಎಫ್‍ಐಆರ್

Public TV
2 Min Read

ಬೆಂಗಳೂರು: ಶಾಂತಿನಗರ ಎಂಎಲ್‍ಎ ಹ್ಯಾರಿಸ್ ಮಗ ಮಹಮ್ಮದ್ ನಲಪಾಡ್ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿದ್ದು, ಇದೀಗ ಹಲ್ಲೆಗೊಳಗಾದ ವಿದ್ವತ್ ಮೇಲೆಯೂ ಪೊಲೀಸರು ಎಫ್‍ಐ ಆರ್ ದಾಖಲಿಸಿದ್ದಾರೆ.

ಯುವಕನ ಮೇಲೆ ಕಬ್ಬನ್‍ಪಾರ್ಕ್ ಪೊಲೀಸರು ಎಫ್‍ಐಆರ್ ದಾಖಲು ಮಾಡಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ವಿದ್ವತ್- ಹಲ್ಲೆಗೊಳಗಾದ ಯುವಕ.

ಫೆ.17ರಂದು ವಿದ್ವತ್ ತನ್ನ ಸ್ನೇಹಿತರೊಂದಿಗೆ ಊಟ ಮಾಡಲು ಬಂದಿದ್ದರು. ಈ ವೇಳೆ ವಿದ್ವತ್ ಕಾಲು ನಾಲಪ್ಪಾಡ್ ಸ್ನೇಹಿತನಿಗೆ ತಗುಲಿದ್ದಕ್ಕೆ ಜಗಳವಾಗಿತ್ತು. ಜಗಳದ ಸಮಯದಲ್ಲಿ ನಾನು ಯಾರು ಗೊತ್ತಾ..? ನನ್ನನ್ನು ಕೇಳಲು ನೀನು ಯಾರು ನನ್ನಪ್ಪ ಯಾರು ಗೊತ್ತಾ ಎಂದು ವಿದ್ವತ್ ಪ್ರಶ್ನಿಸಿದ್ದರು. ಅಲ್ಲದೇ ವಿದ್ವತ್ ಹಾಗೂ ಸ್ನೇಹಿತರು ಏಕಾಏಕಿ ಅರುಣ್ ಬಾಬು ಮೇಲೆ ಹಲ್ಲೆ ಮಾಡಿದ್ದರು. ಅವಾಚ್ಯ ಶಬ್ದಗಳಿಂದ ಕೂಡ ನಿಂದನೆ ಮತ್ತು ಜೀವ ಬೆದರಿಕೆ ಆರೋಪ ಮಾಡಲಾಗಿದೆ.

ಉದ್ಯಮಿ ಲೋಕಿ ಅಲಿಯಾಸ್ ಲೋಕನಾಥನ್ ಪುತ್ರ ವಿದ್ವತ್, ಅತಿಯಾಗಿ ಕುಡಿದಿದ್ದರಿಂದ ಸ್ವತಃ ಬಿದ್ದು ಮುಖಕ್ಕೆ ಗಾಯವಾಗಿದೆ ಎಂದು ಅರುಣ್ ಬಾಬು ದೂರು ನೀಡಿದ್ದರು. ಆದ್ರೆ ಮಲ್ಯ ಆಸ್ಪತ್ರೆಯಲ್ಲಿ ವಿದ್ವತ್ ವೈದ್ಯಕೀಯ ತಪಾಸಣೆ ನಡೆಸಿರೋ ವೈದ್ಯರು, ವಿದ್ವತ್ ಮದ್ಯ ಸೇವನೆ ಮಾಡಿಲ್ಲ ಎಂದು ಹೇಳಿದ್ದರು.

ಸದ್ಯ ಪ್ರಕರಣ ಸಂಬಂಧಿಸಿದಂತೆ ಎ1 ಆರೋಪಿ ಮಹಮ್ಮದ್ ನಲಪಾಡ್ ಕಬ್ಬನ್ ಪಾರ್ಕ್ ಪೊಲೀಸರಿಗೆ ಶರಣಾಗಿದ್ದು, ಈತನ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 307(ಕೊಲೆ ಯತ್ನ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಎಲ್ಲಿದ್ದ ನಲಪಾಡ್?: ಹ್ಯಾರಿಸ್ ಪುತ್ರನ ಗೂಂಡಾಗಿರಿ ಪ್ರಕರಣ ಸಂಬಂಧ ಕೇಸ್ ದಾಖಲಾಗುತ್ತಿದ್ದಂತೆ ನಲಪಾಡ್ ಎಸ್ಕೇಪ್ ಆಗಿದ್ದು, ಕಬ್ಬನ್‍ಪಾರ್ಕ್ ಠಾಣೆ ಕೂಗಳತೆಯಲ್ಲೇ ಅಡಗಿಕೊಂಡಿದ್ದನು. ಯುಬಿ ಸಿಟಿ ಪಕ್ಕದಲ್ಲಿರುವ ಐಷಾರಾಮಿ 7 ಸ್ಟಾರ್ ಹೋಟೆಲ್‍ನ ರೂಂ ನಂಬರ್ 882 ನಲ್ಲಿ ಯಾವುದೇ ಭಯವಿಲ್ಲದೇ ಪಾರ್ಟಿಯೊಂದಲ್ಲಿ ಪಾಲ್ಗೊಂಡಿದ್ದನು. ಇದೀಗ ಅಪ್ಪ ಮಾಧ್ಯಮದ ಮುಂದೆ ಮಾತನಾಡಿದ ಕೇವಲ ಒಂದು ಗಂಟೆಯಲ್ಲಿಯೇ ಕಬ್ಬನ್ ಪಾರ್ಕ್ ಪೊಲೀಸರಿಗೆ ಶರಣಾಗಿರೋ ನಲಪಾಡ್ ವಿರುದ್ಧ ಸೆಕ್ಷನ್ 307 ಅಡಿ (ಕೊಲೆ ಯತ್ನ) ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ಇಂದು ಆರೋಪಿ ನಲಪಾಡ್ ನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *