ಪುಟ್ಟಣ್ಣಯ್ಯರ ಕೊನೆ ಕ್ಷಣಗಳನ್ನ ನೆನೆದು ಕಣ್ಣೀರು ಹಾಕಿದ ಪತ್ನಿ, ಮಗ

Public TV
1 Min Read

ಮಂಡ್ಯ: ರೈತ ಬಂಧು ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ಪತ್ನಿ ಸುನೀತ ಪುಟ್ಟಣ್ಣಯ್ಯ ಹಾಗೂ ಮಗ ದರ್ಶನ್ ಅವರು ಪುಟ್ಟಣ್ಣಯ್ಯ ಅವರೊಂದಿಗಿನ ಕೊನೆ ಕ್ಷಣಗಳನ್ನು ನೆನೆದು ಕಣ್ಣೀರಾಗುತ್ತಿದ್ದಾರೆ.

ಮಗ ದರ್ಶನ್ ತಂದೆಗೆ ಚುನಾವಣೆಯಲ್ಲಿ ಸಹಾಯ ಮಾಡಲು ಅಮೇರಿಕಾದಿಂದ ಬಂದು ಕೆಲವೇ ದಿನಗಳಾಗಿತ್ತು. ಕೊನೆಯ ಬಾರಿಗೆ ದರ್ಶನ್ ತಂದೆಯೊಂದಿಗೆ ಫೋನಿನಲ್ಲಿ ಮಾತನಾಡಿದ್ದರು. ಇದೀಗ ತನ್ನ ತಂದೆಯ ಕಾಲುಚೀಲವನ್ನು ಕೈಯಾರೆ ಬಿಚ್ಚಿದ್ದನ್ನು ನೆನೆದು ಮಗ ದರ್ಶನ್ ಕಣ್ಣೀರು ಹಾಕಿದ್ರು.

ಪತ್ನಿ ಸುನೀತ ಅವರು ಇಡೀ ದಿನ ಪುಟ್ಟಣ್ಣಯ್ಯ ಅವರ ಜೊತೆಯಿದ್ದರಂತೆ. ಬೇಬಿ ಬೆಟ್ಟದಲ್ಲಿ ನಡೆದ ಕಾರ್ಯಕ್ರಮಕ್ಕೂ ಜೊತೆಯಲ್ಲೇ ಹೋಗಿದ್ರಂತೆ. ಆದ್ರೆ ಚೆನ್ನಾಗಿಯೇ ಇದ್ದ ಪುಟ್ಟಣ್ಣಯ್ಯ ಅವರು ಸಾವನ್ನಪ್ಪಿದ್ದು ಸಂಕಟ ತಂದಿದೆ ಎಂದು ದುಃಖಿಸಿದ್ರು.

ಅಮೇರಿಕಾದಲ್ಲಿರಿರುವ ಹೆಣ್ಣಮಕ್ಕಳು ಮತ್ತು ಕುಟುಂಬಸ್ಥರು ಬರಬೇಕಾಗಿರುವುದರಿಂದ ಅಂತ್ಯಕ್ರಿಯೆ ಬುಧವಾರ ನಡೆಯುತ್ತದೆ. ತಡವಾಗಿ ಅಂತ್ಯಕ್ರಿಯೆ ನಡೆಯುತ್ತಿರುವುದಕ್ಕೆ ಅಭಿಮಾನಿಗಳು ಕ್ಷಮಿಸಬೇಕು ಪುಟ್ಟಣ್ಣಯ್ಯ ಪತ್ನಿ ಸುನೀತ ಮನವಿ ಮಾಡಿಕೊಂಡ್ರು.

ವೇದಿಕೆಯಲ್ಲಿಯೇ ಹೃದಯಾಘಾತ: ರೈತ ಬಂಧು, ಅಭಿಮಾನಿಗಳಲ್ಲಿ ಮೇಲುಕೋಟೆ ಮಾಣಿಕ್ಯ ಎಂದೇ ಖ್ಯಾತರಾಗಿದ್ದ ಕೆ.ಎಸ್.ಪುಟ್ಟಣ್ಣಯ್ಯ ಅವರು ಓರ್ವ ಕಬಡ್ಡಿ ಹಾಗೂ ಕುಸ್ತಿ ಪಟುವಾಗಿದ್ದರು. ಮಂಡ್ಯ ಜಿಲ್ಲೆಯ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಕಬಡ್ಡಿ ಪಂದ್ಯ ವೀಕ್ಷಣೆಗೆ ಆಗಮಿಸಿದ್ದರು. ಈ ಪಂದ್ಯದಲ್ಲಿ ಪುಟ್ಟಣ್ಣಯ್ಯ ಬೆಂಬಲಿತ ಪಾಂಡವಪುರ ಟೀಂ ಗೆದ್ದಿತ್ತು. ಹೀಗಾಗಿ ಗೆದ್ದ ತಂಡವನ್ನು ಸನ್ಮಾನಿಸಲು ಪುಟ್ಟಣ್ಣಯ್ಯ ವೇದಿಕೆ ಮೇಲೆ ಆಸೀನರಾಗಿದ್ದರು.

ಅಭಿಮಾನಿಗಳು, ಸ್ಥಳೀಯ ಮುಖಂಡರೊಂದಿಗೆ ಕುಳಿತು ಖುಷಿಯಾಗಿಯೇ ಪಂದ್ಯ ವೀಕ್ಷಿಸಿದ್ದ ಪುಟ್ಟಣ್ಣಯ್ಯರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ ವೇದಿಕೆಯಲ್ಲೇ ಕುಸಿದು ಬಿದ್ದ ಅವರನ್ನು ಕೂಡಲೇ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯ್ತು. ಆದ್ರೆ ವಿಧಿ ಅದಾಗಲೇ ಪುಟ್ಟಣ್ಣಯ್ಯ ಬದುಕಿನ ಹೋರಾಟವನ್ನು ಕಿತ್ತುಕೊಂಡು ಬಿಟ್ಟಿತ್ತು. ಬಳಿಕ ಪುಟ್ಟಣ್ಣಯ್ಯ ಮೃತದೇಹವನ್ನು ಹುಟ್ಟೂರು ಕ್ಯಾತನಹಳ್ಳಿಗೆ ರವಾನಿಸಲಾಯಿತು. ಈ ವೇಳೆ ಸಾವಿರಾರು ಅಭಿಮಾನಿಗಳು ಅಗಲಿದ ನಾಯಕನ ಅಂತಿಮ ದರ್ಶನಕ್ಕೆ ಮುಗಿಬಿದ್ದರು. ಇನ್ನು ನಟ ದರ್ಶನ್ ರಾತ್ರೋರಾತ್ರಿ ಪುಟ್ಟಣ್ಣಯ್ಯರ ಅಂತಿಮ ದರ್ಶನ ಪಡೆದರು. ಈ ವೇಳೆ ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.

Share This Article
Leave a Comment

Leave a Reply

Your email address will not be published. Required fields are marked *