ಫೇಕ್ ಅಕೌಂಟ್ ಪಾಠದ ವಿಡಿಯೋ ಬಗ್ಗೆ ರಮ್ಯಾ ಮೇಡಂ ಹೀಗಂದ್ರು

Public TV
2 Min Read

ಬೆಂಗಳೂರು: ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಹಾಗೂ ಮಾಜಿ ಸಂಸದೆ ರಮ್ಯಾ ಫೇಕ್ ಖಾತೆಗಳ ಬಗ್ಗೆ ಮಾಡಿದ ಪಾಠದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ರಮ್ಯಾ ಟ್ವಿಟ್ಟರ್‍ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ತಮ್ಮ ಅನುಕೂಲಕ್ಕೆ ತಕ್ಕಂತೆ ವಿಡಿಯೋವನ್ನ ಎಡಿಟ್ ಮಾಡಿಕೊಂಡಿದ್ದಾರೆ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ. ಸಂಸದ ರಾಜೀವ್ ಚಂದ್ರಶೇಖರ್ ಅವರಿಗೆ ಪ್ರಶ್ನೆಗಳ ಸಂಪೂರ್ಣ ಪಟ್ಟಿ ಹಾಕಿದ್ದರಿಂದ ಅದರಿಂದ ಗಮನ ಬೇರೆಡೆ ಸೆಳೆಯಲು ಹೀಗೆ ಮಾಡಿದ್ದಾರೆ ಎಂದು ರಮ್ಯಾ ಹೇಳಿದ್ದಾರೆ.

ಕಳೆದ ಭಾನುವಾರ ಬೆಂಗಳೂರಿನಲ್ಲಿ ಮೋದಿ ಭಾಷಣದ ನಂತರ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ, ಪ್ರಧಾನಿ ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ಸಂತೋಷ. ಹಾಗೇ ಇನ್ನೂ ಕೆಲವು ವಿಷಯಗಳ ಬಗ್ಗೆ ಮಾತನಾಡಲು ಆಹ್ವಾನಿಸುತ್ತೇನೆ ಎಂದು ಹೇಳಿ ಪ್ರಶ್ನೆಗಳ ಪಟ್ಟಿ ಹಾಕಿದ್ದರು. ಲೋಕ್ ಪಾಲ್ ನೇಮಕ, ಜಡ್ಜ್ ಲೋಯಾ ಸಾವಿನ ತನಿಖೆ, ಕಳಂಕವಿಲ್ಲದ ವ್ಯಕ್ತಿಯನ್ನ ಸಿಎಂ ಅಭ್ಯರ್ಥಿಯಾಗಿ ನೇಮಕ ಮಾಡ್ತೀರಾ? ಎಂದು 4 ಪ್ರಶ್ನೆಗಳನ್ನ ಹಾಕಿದ್ದರು. ಇದಕ್ಕೆ ವ್ಯಕ್ತಿಯೊಬ್ಬರು ಕಮೆಂಟ್ ಮಾಡಿ, ಇದಕ್ಕೆ ಇನ್ನೂ ಕೆಲವು ವಿಷಯಗಳನ್ನ ಸೇರಿಸಬೇಕು. ಸ್ಟೀಲ್ ಫ್ಲೈಓವರ್, ಡಿಕೆ ರವಿ ಸಾವಿನ ಪ್ರಕರಣ, ಡಿವೈಎಸ್‍ಪಿ ಗಣಪತಿ ಸಾವಿನ ಪ್ರಕರಣ, 70 ಲಕ್ಷದ ವಾಚ್, ಮೇಟಿ ವಿಡಿಯೋ ಇತ್ಯಾದಿ ಎಂದು ಬರೆದು ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಸಂಸದ ರಾಜೀವ್ ಚಂದ್ರಶೇಖರ್ ಗೆ ಟ್ಯಾಗ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ರಾಜೀವ್ ಚಂದ್ರಶೇಖರ್, ಹೌದು ಸಿದ್ದರಾಮಯ್ಯ ಅವರೇ ಸಂಪೂರ್ಣ ಪಟ್ಟಿ ಬಗ್ಗೆ ಮಾತನಾಡೋಣ ಎಂದಿದ್ದರು.

ಇದಕ್ಕೆ ಮತ್ತೆ ರಮ್ಯಾ ಪ್ರತಿಕ್ರಿಯೆ ನೀಡಿ, ರಾಜೀವ್ ಅವರಿಂದ ಉತ್ತರ ಬೇಕಿರುವ ಸಂಪೂರ್ಣ ಪ್ರಶ್ನೆಗಳ ಪಟ್ಟಿ ಇಲ್ಲಿದೆ ಎಂಟು ಟ್ವೀಟ್ ಮಾಡಿ ಪ್ರಶ್ನೆಗಳನ್ನ ಹಾಕಿದ್ದರು. ಹೀಗಾಗಿ ಸಂಪೂರ್ಣ ಪಟ್ಟಿ ಬಗ್ಗೆ ಗಮನ ಬೇರೆಡೆ ಸೆಳೆಯಲು ವಿಡಿಯೋ ಬಳಸಿದ್ದಾರೆ. ಇದು ಡಿಸ್ಟ್ರಾಕ್ಷನ್ ಟ್ಯಾಕ್ಟಿಸ್ ಎಂದು ರಮ್ಯಾ ಹೇಳಿದ್ದಾರೆ.

ಏನದು ಫೇಕ್ ಅಕೌಂಟ್ ಪಾಠ?: ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ರಮ್ಯಾ ಕಳೆದ ವಾರ ನಕಲಿ ಖಾತೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರಿಗೆ ಪಾಠ ಮಾಡಿದ್ದರು. ಈ ಸಂದರ್ಭದಲ್ಲಿ ಕಾರ್ಯಕರ್ತರೊಬ್ಬರು ಫೇಸ್‍ಬುಕ್ ಫೇಕ್ ಅಕೌಂಟ್ ಬಗ್ಗೆ ಕೇಳಿದ ಪ್ರಶ್ನೆಗೆ ರಮ್ಯಾ, ಒಬ್ಬರಿಗೆ ಮೂರು ನಾಲ್ಕು ಅಕೌಂಟ್ ಗಳಿದ್ದರೆ ತಪ್ಪೇನಿಲ್ಲ. ಆದರೆ ಫೇಕ್ ಅಕೌಂಟ್ ಅಂದ್ರೆ ರೋಬಾಟ್ಸ್. ಅದು ಮಷೀನ್, ಮನುಷ್ಯ ಅಲ್ಲ. ಆದ್ರೆ ಒಬ್ಬರಿಗೆ ಹಲವು ಅಕೌಂಟ್ ಇದ್ರೆ ತಪ್ಪಿಲ್ಲ ಎಂದು ಉತ್ತರಿಸಿದ್ದರು.

ಈ ಪಾಠದ ವಿಡಿಯೋ ವೈರಲ್ ಆಗಿದ್ದೆ ತಡ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಅಭಿಮಾನಿಗಳು ನಕಲಿ ಖಾತೆಗಳಿಗೆ ರಮ್ಯಾ ಕುಮ್ಮಕ್ಕು ಎಂದು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾಂಪೇನ್ ಆರಂಭಿಸಿದ್ದಾರೆ.

https://www.youtube.com/watch?v=FPbeaJ04p7o

Share This Article
Leave a Comment

Leave a Reply

Your email address will not be published. Required fields are marked *