ಮೌಂಟ್ ಮೌಂಗನೂಯಿ: ಫೈನಲ್ ನಲ್ಲಿ ಆಸ್ಟ್ರೇಲಿಯಾವನ್ನು 8 ವಿಕೆಟ್ ಗಳಿಂದ ಬಗ್ಗು ಬಡಿದು ಭಾರತ ನಾಲ್ಕನೇಯ ಬಾರಿ ಅಂಡರ್ 19 ವಿಶ್ವಕಪ್ ಜಯಿಸಿದೆ. ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಮುನ್ನಡೆಸಿದ್ದ ಪೃಥ್ವಿ ಶಾ, ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ.
ಅಂಡರ್ 19 ತಂಡದ ನಾಯಕರಾಗಿ ಪೃಥ್ವಿ ಶಾ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉನ್ಮುಕ್ತ್ ಚಾಂದ್ ದಾಖಲೆಯನ್ನು ಮುರಿದಿದ್ದಾರೆ. ಐಸಿಸಿ ಅಂಡರ್ 19 ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಪೃಥ್ವಿ ಶಾ 6 ಪಂದ್ಯಗಳಲ್ಲಿ 65.25ರ ಸರಾಸರಿಯಲ್ಲಿ 261 ರನ್ ಸಿಡಿಸುವ ಮೂಲಕ ಅಂಡರ್ 19 ವಿಶ್ವಕಪ್ ನಲ್ಲಿ ಭಾರತದ ಪರ ಗರಿಷ್ಠ ರನ್ ಗಳಿಸಿದ ನಾಯಕ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಈ ಮೊದಲು 2008ರ ಅಂಡರ್ 19 ವಿಶ್ವಕಪ್ ನಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದ ವಿರಾಟ್ ಕೊಹ್ಲಿ 6 ಪಂದ್ಯಗಳಲ್ಲಿ 47 ರ ಸರಾಸರಿಯಲ್ಲಿ 235 ರನ್ ಸಿಡಿಸಿದ್ದರು. ಇನ್ನು 2012ರಲ್ಲಿ ಉನ್ಮುಕ್ತ್ ಚಾಂದ್ 6 ಪಂದ್ಯಗಳಲ್ಲಿ 49.20 ಸರಾಸರಿಯಲ್ಲಿ 246 ರನ್ ಕಲೆ ಹಾಕಿದ್ದರು. ನಂತರದ ಸ್ಥಾನದಲ್ಲಿ 2002ರಲ್ಲಿ ಪಾರ್ಥಿವ್ ಪಟೇಲ್ 7 ಪಂದ್ಯಗಳಲ್ಲಿ 184 ರನ್ ಗಳಿಸಿದ್ದರು.
ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ 29 ರನ್ ಕಲೆ ಹಾಕಿ ಔಟ್ ಆದ ಪೃಥ್ವಿ ಶಾ ಟೂರ್ನಿಯಲ್ಲಿ 261 ರನ್ ಕಲೆಹಾಕುವ ಮೂಲಕ ಕೊಹ್ಲಿ ಹಾಗೂ ಚಾಂದ್ ದಾಖಲೆ ಮುರಿದಿದ್ದಾರೆ.

 
			
 
		 
		










 
                                
                              
		