ಪರಿವರ್ತನಾ ಯಾತ್ರೆ ಸಮಾರೋಪಕ್ಕೆ ಮುತ್ತಿಗೆ ಎಚ್ಚರಿಕೆ-ಬಿಜೆಪಿ ಹೈಕಮಾಂಡ್ ಕರೆದ ತುರ್ತು ಸಭೆಯಲ್ಲಿ ಸಖತ್ ಪ್ಲ್ಯಾನ್

Public TV
2 Min Read

ಬೆಂಗಳೂರು: ಮಹದಾಯಿ ಮುಜುಗರ, ಬೆಂಗಳೂರು ಬಂದ್ ನಡುವೆಯೇ ಶತಯಗತಾಯವಾಗಿ ಪರಿವರ್ತನಾ ಯಾತ್ರೆ ಸಮಾರೋಪ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ. ದೆಹಲಿಯಲ್ಲಿ ಗುಪ್ತ ಸಭೆಗಳನ್ನು ನಡೆಸುವ ಮೂಲಕ ಬಿಜೆಪಿ ನಾಯಕರು ಕಾರ್ಯಕ್ರಮ ಯಶಸ್ವಿಗೆ ತಂತ್ರಗಳನ್ನು ರೂಪಿಸುತ್ತಿದ್ದಾರೆ.

ಯಡಿಯೂರಪ್ಪ-ಅಮಿತ್ ಶಾ ಸಭೆಯ ಬೆನ್ನಲ್ಲೆ, ಸೋಮವಾರ ರಾತ್ರಿ ನವದೆಹಲಿಯಲ್ಲಿ ಕಾರ್ಯಕ್ರಮ ಜವಾಬ್ದಾರಿ ಹೊತ್ತಿರುವ ಕೇಂದ್ರ ಸಚಿವ ಅನಂತ್ ಕುಮಾರ್ ನೇತೃತ್ವದಲ್ಲಿ ರಾಜ್ಯ ಬಿಜೆಪಿ ನಾಯಕರ ಸಭೆ ನಡೆಸಲಾಯಿತು. ಸಭೆಯಲ್ಲಿ ವಿಪಕ್ಷ ನಾಯಕ ಜಗದೀಶ ಶೆಟ್ಟರ್, ಕೆ.ಎಸ್ ಈಶ್ವರಪ್ಪ, ಆರ್.ಅಶೋಕ್, ಅರವಿಂದ್ ಲಿಂಬಾವಳಿ, ಬಿಎಲ್ ಸಂತೋಷ್ ಭಾಗಿಯಾಗಿದ್ರು.

ಸಭೆಯುದ್ದಕ್ಕೂ ಮಹದಾಯಿಯಿಂದ ಆಗಿರುವ ಡ್ಯಾಮೇಜ್ ಕಂಟ್ರೊಲ್ ಹಾಗೂ ಪರಿವರ್ತನಾ ಯಾತ್ರೆ ಸಮಾರೋಪ ಕಾರ್ಯಕ್ರಮಕ್ಕೆ ಸಿದ್ಧತೆ ಕುರಿತು ಚರ್ಚಿಸಲಾಗಿದೆ ಎಂದು ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಪರಿವರ್ತನಾ ಯಾತ್ರೆ ಸಮಾರೋಪ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದು, ಅಂದೇ ಬೆಂಗಳೂರು ಬಂದ್‍ಗೆ ಕರೆ ನೀಡಲಾಗಿದೆ. ಹೀಗಾಗಿ ಬಿಜೆಪಿ ನಾಯಕರು ಸಾಕಷ್ಟು ಎಚ್ಚರಿಕೆಯಿಂದ ಕಾರ್ಯಕ್ರಮ ಆಯೋಜಿಸಲು ಪ್ಲಾನ್ ರೂಪಿಸುತ್ತಿದ್ದಾರೆ ಎನ್ನಲಾಗಿದೆ.

ಪ್ರತಿಭಟನಾನಿರತರು ಪ್ರಧಾನಿ ಮೋದಿ ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ ಅನಾಹುತ ಸೃಷ್ಟಿಸಬಹುದಾದ ಭಯ ಬಿಜೆಪಿ ನಾಯಕರಿಗೆ ಶುರುವಾಗಿದೆ ಎಂದು ತಿಳಿದು ಬಂದಿದೆ. ಭದ್ರತೆ ಹಾಗೂ ಅಚಾತುರ್ಯ ಗಳಾದಂತೆ ವ್ಯವಸ್ಥೆ ಮಾಡಿಕೊಳ್ಳಲು ಅಮಿತ್ ಶಾ ಸೂಚನೆಯಂತೆ ಕ್ರಿಯಾಯೋಜನೆ ಕುರಿತು ರಾಜ್ಯ ನಾಯಕರೊಂದಿಗೆ ಅನಂತ ಕುಮಾರ್ ಚರ್ಚಿಸಿದ್ದಾರೆ.

ಬಿಜೆಪಿ ಮೀಟಿಂಗ್‍ನ ಹೈಲೈಟ್ಸ್:
1. ರಾಜ್ಯದಲ್ಲಿ ಕಾವೇರುತ್ತಿರುವ ಮಹದಾಯಿ ಹೋರಾಟದ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.
2. ಕರ್ನಾಟಕ ಬಂದ್ ಹಾಗೂ ಬೆಂಗಳೂರು ಬಂದ್ ಸಿದ್ಧತೆ ಕುರಿತು ವರದಿ ಪಡೆದ ಹೈಕಮಾಂಡ್.
3. ರಾಜ್ಯಕ್ಕೆ ಪ್ರಧಾನಿ ಭೇಟಿ ವೇಳೆ ವಿವಿಧ ಸಂಘಟನೆಗಳಿಂದ ತಡೆ ಉಂಟಾಗುವ ವರದಿ ಹೈಕಮಾಂಡ್ ಕೈ ಸೇರಿದೆ.
4. ಕಾರ್ಯಕ್ರಮಕ್ಕೆ ಹೆಚ್ಚಿನ ಭದ್ರತಾ ವ್ಯವಸ್ಥೆ ಕುರಿತು ಗಮನ ಹರಿಸಬೇಕು.
5. ಯಾವುದೇ ಕಾರಣಕ್ಕೂ ಪರಿವರ್ತನಾ ಯಾತ್ರೆ ಸಮಾರೋಪ ಕಾರ್ಯಕ್ರಮ ಪ್ಲಾಪ್ ಆಗದಂತೆ ನೋಡಿಕೊಳ್ಳಬೇಕು.
6. ಸಾಧ್ಯವಾದಲ್ಲಿ ಬಂದ್ ಗೆ ಕರೆ ನೀಡಿರುವ ವಿವಿಧ ಸಂಘಟನೆಗಳ ಜೊತೆ ಗುಪ್ತ ಮಾತುಕತೆ ನಡೆಸಿ ಹೋರಾಟಗಾರರ ಮನವೊಲಿಸಲು ಪ್ರಯತ್ನಿಸುವುದು.
7. ಬಂದ್ ವೇಳೆ ಸಾರಿಗೆ ವ್ಯವಸ್ಥೆ ಕೈ ಕೊಟ್ಟರೆ ಜನರನ್ನು ಕರೆತರು ಬದಲಿ ಮಾರ್ಗಗಳ ಕುರಿತು ಚರ್ಚೆ.
8. ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ ಅಚಾರ್ತ್ಯು ನಡೆಯದಂತೆ ಎಚ್ಚರ ವಹಿಸುವಂತೆ ಸೂಚನೆ.
9. ಪ್ರಧಾನಿ ಬಂದು ಹೋಗುವರೆಗೂ ರಾಜ್ಯದಲ್ಲಿ ಮಹದಾಯಿ ಕುರಿತು ಯಾರು ಪ್ರತಿಕ್ರಿಯಿಸ ಕೂಡದು, ಅನಿವಾರ್ಯತೆ ಬಂದಲ್ಲಿ ಹಿರಿಯ ನಾಯಕರಿಗಷ್ಟೆ ಅವಕಾಶ.
10. ಪ್ರಚೋದನೆ ನೀಡುವಂತೆ ಹೇಳಿಕೆಯಿಂದ ದೂರವಿದ್ದು ಪ್ರತಿಪಕ್ಷಗಳ ಟೀಕೆಗೆ ಒಳಗಾಗದಂತೆ ಎಚ್ಚರ ವಹಿಸಬೇಕು.
11. ಅನಾವಶ್ಯಕ ದುಂದು ವೆಚ್ಚಗಳನ್ನು ಮಾಡದಂತೆ ಹಾಗೂ ಯಂತ್ರ ಹೋಮಗಳನ್ನ ಬಹಿರಂಗ ವಾಗಿ ಮಾಡಬಾರದು.
12. ಮಹದಾಯಿ ವಿಷಯದಿಂದ ರಾಜ್ಯ ನಾಯಕರು ಎದುರಿಸುತ್ತಿರುವ ಮುಜುಗರ ಯಾವುದೇ ಕಾರಣಕ್ಕೂ ಪ್ರಧಾನಿಗೆ ಎದುರಾಗಾದಂತೆ ವ್ಯವಸ್ಥೆ ಮಾಡಿಕೊಳ್ಳಲು ಅನಂತ ಕುಮಾರ್ ರಾಜ್ಯ ನಾಯಕರೊಂದಿಗೆ ಪ್ಲಾನ್ ರೂಪಿಸಿದ್ದಾರೆ.

ಈ ಮೇಲಿನ 12 ವಿಷಯಗಳ ಬಿಜೆಪಿ ಕಚೇರಿಯಲ್ಲಿ ಮಾತುಕತೆ ನಡೆದಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಫೆಬ್ರವರಿ 4ರಂದು ನಡೆಯುವ ಪರಿವರ್ತನಾ ಯಾತ್ರೆ ಸಮಾರೋಪ ಕಾರ್ಯಕ್ರಮಕ್ಕೆ ಯಾವುದೇ ಅಡೆತಡೆಗಳು ಉಂಟಾಗದಂತೆ ನೋಡಿಕೊಳ್ಳಲು ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *