2008ರ ಗುಜರಾತ್ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಅರೆಸ್ಟ್

Public TV
2 Min Read

ನವದೆಹಲಿ: ಭಾರತದ ಮೋಸ್ಟ್ ವಾಂಟೆಂಡ್ ಉಗ್ರರ ಪಟ್ಟಿಯಲ್ಲಿದ್ದ 2008 ರ ಗುಜರಾತ್ ಸ್ಫೋಟದ ಮಾಸ್ಟರ್ ಮೈಂಡ್ ಅಬ್ದುಲ್ ಸುಭಾನ್ ಖುರೇಷಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ವಿಶೇಷ ತನಿಖಾ ದಳದ ಪೊಲೀಸರು ಉಗ್ರನನ್ನು ಬಂಧಿಸಿದ್ದು, ಈ ವೇಳೆ ಖುರೇಷಿ ಹಾಗೂ ಪೊಲೀಸ್ ಅಧಿಕಾರಗಳ ನಡುವೆ ಫೈರಿಂಗ್ ಸಹ ನಡೆದಿದೆ. ನಂತರ ಈತನನ್ನು ಬಂಧಿಸಿ ಕೋರ್ಟ್‍ಗೆ ಹಾಜರು ಪಡಿಸಲಾಗಿದ್ದು, 14 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ.

ಕಳೆದ ಕೆಲ ವರ್ಷಗಳಿಂದ ಭೂಗತಗೊಂಡಿದ್ದ ಖುರೇಷಿ, ಭಾರತದಲ್ಲಿ ಮತ್ತೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯನ್ನು ಬಲ ಪಡಿಸಲು ಭಾರತಕ್ಕೆ ವಾಪಸ್ ಆಗಿದ್ದ. ಇಷ್ಟು ದಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ ನೇಪಾಳದಲ್ಲಿ ನೆಲೆಸಿದ್ದ ಎಂದು ಡಿಸಿಪಿ ಪ್ರಮೋದ್ ಕುಶ್ವಾಹ ಸೋಮವಾರ ತಿಳಿಸಿದ್ದಾರೆ.

ಅಹಮದಾಬಾದ್ ನಲ್ಲಿ ನಡೆದ 21 ಬಾಂಬ್ ಸ್ಫೋಟದ ಘಟನೆಯಲ್ಲಿ ಈತನ ಹೆಸರು ಮೊದಲ ಬಾರಿ ಕೇಳಿ ಬಂದಿತ್ತು. ನಂತರ ಇಂಡಿಯಾನ್ ಮುಜಾಹಿದ್ದೀನ್ `ಅಲ್-ಅರಬಿ’ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಎಂಬ ಅನುಮಾನದ ಮೇಲೆ ಖುರೇಷಿ ಹೆಸರನ್ನು ಉಗ್ರರ ಪಟ್ಟಿಯಲ್ಲಿ ಘೋಷಣೆ ಮಾಡಿಲಾಗಿತ್ತು.

ಕೇವಲ ಗುಜರಾತ್ ಮಾತ್ರವಲ್ಲದೇ ದೆಹಲಿ, ಬೆಂಗಳೂರು ಹಾಗೂ 2006 ರ ಮುಂಬೈ ಸ್ಥಳೀಯ ರೈಲು ಸ್ಫೋಟಕ್ಕೆ ಸಂಬಂಧಿಸಿದಂತೆ ಉಗ್ರ ಖುರೇಷಿ ಯನ್ನು ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಹುಡುಕಾಟ ನಡೆಸುತ್ತಿತ್ತು. ಈ ಸಂಬಂಧ ಅಹಮದಾಬಾದ್ ಪೊಲೀಸರು ದೆಹಲಿಯ ವಿಶೇಷ ತನಿಖಾ ದಳದೊಂದಿಗೆ ನಿರಂತರ ಸಂಪರ್ಕ ಹೊಂದಿದ್ದರು.

ಭಾರತದ ಬಿನ್ ಲಾಡೆನ್ ಎಂದೇ ಹೆಸರು ಪಡೆದಿದ್ದ ಖುರೇಷಿ ತನ್ನ ಗುರುತನ್ನು ಬದಲಾಯಿಸಿ ತಪ್ಪಿಸಿಕೊಳ್ಳುವಲ್ಲಿ ಪರಿಣಿತನಾಗಿದ್ದ. ಇದೇ ತಂತ್ರವನ್ನು ಬಳಸಿ ಹಲವು ಬಾರಿ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಖುರೇಷಿ ಬಾಂಬ್ ತಯಾರಿಕೆಯಲ್ಲಿ ಹೆಚ್ಚು ಪರಿಣಿತಿ ಹೊಂದಿದ್ದು, ಬೆಂಗಳೂರು ಮತ್ತು ಹೈದರಾಬಾದ್ ನ ಹಲವು ಐಟಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದ. ಸಿಮಿ (ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂಮ್ಮೆಂಟ್ ಆಫ್ ಇಂಡಿಯಾ) ಸಂಘಟನೆ ಈತನನ್ನು ಮೊದಲ ಬಾರಿಗೆ 1998 ರಲ್ಲಿ ಉಗ್ರನಾಗಿ ಆಯ್ಕೆ ಮಾಡಿಕೊಂಡಿತ್ತು, ನಂತರ ಈತ ಇಂಡಿಯಾನ್ ಮುಜಾಹಿದೀನ್ ಎಂಬ ಉಗ್ರ ಸಂಘಟನೆಯನ್ನು ಬಲಪಡಿಸಲು ಮುಂದಾಗಿದ್ದ.

2008 ರ ಜುಲೈ 26 ರಂದು ಅಹಮದಾಬಾದ್ ನಲ್ಲಿ 21 ಬಾಂಬ್ ಸ್ಫೋಟಗೊಂಡಿತ್ತು. ಈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ 56 ಮಂದಿ ಮೃತಪಟ್ಟು 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *