ಜೆಸಿಬಿ ಜೊತೆ ಬಂದು ಪೇಜಾವರ ಶ್ರೀ ಆಪ್ತರ ಅಕ್ರಮದ ವಿರುದ್ಧ ಘರ್ಜಿಸಿದ ಶೀರೂರು ಶ್ರೀ

Public TV
2 Min Read

ಉಡುಪಿ: ಪೇಜಾವರಶ್ರೀ ಆಪ್ತರು ನಡೆಸುತ್ತಿದ್ದ ಆಕ್ರಮಗಳ ಮೇಲೆ ಶೀರೂರು ಸ್ವಾಮೀಜಿ ಘರ್ಜಿಸಿದ್ದಾರೆ. ಮಠದ ಹೆಸರಲ್ಲಿ ಸಾರ್ವಜನಿಕರ ಹಣವನ್ನು ಪೇಜಾವರಶ್ರೀ ಗಳ ಆಪ್ತರು ಲೂಟಿ ಮಾಡುತ್ತಿದ್ದಾರೆ. ಪೇಜಾವರ ಶ್ರೀಗಳಿಗೆ ದಾಕ್ಷಿಣ್ಯ ಜಾಸ್ತಿ. ಆದರೆ ಅಕ್ರಮವನ್ನು ನೋಡಿಕೊಂಡು ನಾನು ಸುಮ್ಮನಿರಲ್ಲ ಎಂದು ಬುಲ್ಡೋಜರ್ ತಂದು ಅಂಗಡಿ ಮತ್ತು ಬಟ್ಟೆ ಮಳಿಗೆಯನ್ನು ಶೀರೂರು ಸ್ವಾಮೀಜಿ ನೆಲಕ್ಕುರುಳಿಸಿದ್ದಾರೆ.

ಕಳೆದ 12 ವರ್ಷಗಳಿಂದ ಅಕ್ರಮಗಳನ್ನು ನೋಡಿಯೂ ಏನೂ ಮಾಡಲಾಗದೆ ಸುಮ್ಮನಿದ್ದ ಉಡುಪಿ ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥರು ಇದೀಗ ಅಸಮಾಧಾನ ಹೊರಹಾಕಿದ್ದಾರೆ. ಜೆಸಿಬಿ ಜೊತೆ ಕೃಷ್ಣಮಠದ ಪಾರ್ಕಿಂಗ್ ಏರಿಯಾಗೆ ಬಂದ ಶೀರೂರು ಶ್ರೀ ಅಕ್ರಮ ಅಂಗಡಿ ಮಾಲೀಕರಿಗೆ ಚಳಿ ಬಿಡಿಸಿದರು.

ಯಾತ್ರಿ ನಿವಾಸ ಲಾಡ್ಜ್ ಕಚೇರಿಗೆ ಬಂದು ಕಡತಗಳನ್ನು ಜಾಲಾಡಿ ಸಿಬ್ಬಂದಿಗೆ ಚಳಿ ಬಿಡಿಸಿದರು. ಐಟಿ ದಾಳಿಗಿಂತ ನನ್ನ ದಾಳಿ ಪರಿಣಾಮಕಾರಿ, ಈಗ ಕಾರ್ಯಾಚರಣೆ ಮಾಡಿದ್ದು 5% ನಿಂದ 95% ಅಕ್ರಮದ ವಿರುದ್ಧ ನನ್ನ ಹೋರಾಟವಿದೆ ಎಂದು ಎಚ್ಚರಿಕೆ ನೀಡಿದರು. ಈ ಮೂಲಕ ಪೇಜಾವರಶ್ರೀ ಆಪ್ತರಿಗೆ ಬಿಸಿಮುಟ್ಟಿಸಿದರು.

ಕೃಷ್ಣಮಠದ ಸುತ್ತಮುತ್ತಲ ಅಂಗಡಿಗಳು, ಪಾರ್ಕಿಂಗ್ ನಿಂದ ಬರುವ ಹಣವನ್ನು ಕೃಷ್ಣಮಠಕ್ಕೆ ಸಲ್ಲಿಕೆ ಮಾಡಬೇಕು. ಆದರೆ ಅಷ್ಟಮಠಗಳ ಟ್ರಸ್ಟ್ ನಲ್ಲಿದ್ದವರು ಹಣವನ್ನು ಮಠಕ್ಕೆ ಕೊಡದೇ ಲೂಟಿ ಮಾಡುತ್ತಿದ್ದರು. ಅಷ್ಠಮಠಗಳ ಟ್ರಸ್ಟ್ ಗೆ ಕೆಲವರಿಂದ ಅನ್ಯಾಯವಾಗಿದೆ. ಎಲ್ಲವನ್ನು ನೋಡಿಕೊಂಡು ಕೂರುವ ಜಾಯಮಾನ ನನ್ನದಲ್ಲ. ಕೃಷ್ಣ ಮುಖ್ಯಪ್ರಾಣನಿಗೆ ಪೂಜೆ ಮಾಡಲೂ ಗೊತ್ತು ಅಕ್ರಮಕ್ಕೆ ಬ್ರೇಕ್ ಹಾಕಲೂ ಗೊತ್ತು ಎಂದು ಗುಡುಗಿದರು.

ಪೇಜಾವರ ಪರ್ಯಾಯ ಮುಗಿಯುವುದಕ್ಕೆ ಕಾಯುತ್ತಿದ್ದೆ. ಪೇಜಾವರ ಶ್ರೀಗಳ ಆಪ್ತರು ಅಕ್ರಮ ಮಾಡಿದ್ದರೂ, ಹಿರಿಯರು ಕಣ್ಮುಂದೆ ನಡೆಯುವ ಲೂಟಿ ನೋಡಿಕೊಂಡು ಸುಮ್ಮನಿದ್ದರು. ಅಲ್ಲದೇ ಸ್ವಾಮೀಜಿ ಅವರು ಆಪ್ತ ಕಳ್ಳರ ವಿರುದ್ಧ ಕ್ರಮ ಕೈಗೊಳ್ಳಲ್ಲ. ವಿಚಾರ ಗಮನಕ್ಕೆ ತಂದರೆ ನಾನು ಉಪವಾಸ ಮಾಡುತ್ತೇನೆ ಅಂತ ಬೇಸರದ ಮಾತನಾಡುತ್ತಾರೆ. ಹೀಗಾಗಿ ಅಕ್ರಮ ಮಾಡುವ ಆಪ್ತರಿಗೆ ನಾನು ಬುದ್ಧಿ ಕಲಿಸುತ್ತೇನೆ. ಇಂತವರಿಗೆ ಇದೇ ಸೂಕ್ತ ದಾರಿ ಎಂದು ನಾನು ರೇಡ್ ಮಾಡಲು ಇಳಿದಿದ್ದೇನೆ ಎಂದರು.

ಎರಡೂವರೆ ಎಕರೆ ಜಮೀನನ್ನು ನಾನು ಹಣಕೊಟ್ಟು ಖರೀದಿ ಮಾಡಿದ್ದೇನೆ. ರಥಬೀದಿ ವಾಹನ ಮುಕ್ತ ಮಾಡಿದಾಗ ಆಟೋ, ಕಾರು ಚಾಲಕರನ್ನು ಇಲ್ಲಿಗೆ ಕರೆದುಕೊಂಡು ಬಂದು ನೆಲೆ ಕೊಟ್ಟಿದ್ದೇನೆ. ಎಂಟೂ ಮಠದ ಸ್ವಾಮೀಜಿಗಳು ಹಣ ಕೊಟ್ಟು ಒಟ್ಟು ಐದೂವರೆ ಎಕರೆ ಜಮೀನು ಖರೀದಿ ಮಾಡಿದ್ದೇವೆ. ಮಠದ ಜಮೀನಿನ ಪಾರ್ಕಿಂಗ್, ಮಳಿಗೆ ಹೆಸರಲ್ಲಿ ಅಷ್ಟ ಮಠಗಳ ಟ್ರಸ್ಟ್ ದರೋಡೆ ಮಾಡುತ್ತಿದೆ. ಪಾರ್ಕಿಂಗ್, ಅಂಗಡಿ ಹಣದಲ್ಲಿ ಕೋಟ್ಯಾಂತರ ರೂ. ಲೂಟಿ ಮಾಡಲಾಗಿದೆ. ಪ್ರವಾಸಿಗರಿಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ತಾನು ದಾನ ಕೊಟ್ಟ ಭೂಮಿಯಲ್ಲಿ ಅಕ್ರಮ ಸಹಿಸಲ್ಲ. ಕೃಷ್ಣಮಠಕ್ಕೆ ಯಾವುದೇ ಆದಾಯ ಸಿಗುತ್ತಿಲ್ಲ ಎಂದು ಶೀರೂರು ಲಕ್ಷ್ಮೀವರತೀರ್ಥ ಶ್ರೀ ಆಕ್ರೋಶ ಹೊರ ಹಾಕಿದರು.

ಪೇಜಾವರ ಸ್ವಾಮೀಜಿ ಜ್ಞಾನವೃದ್ಧರು, ವಯೋವೃದ್ಧರು ಅವರ ಪಕ್ಕದಲ್ಲೇ ಹೆಗ್ಗಣಗಳಿವೆ. ಅವುಗಳನ್ನು ಓಡಿಸಿದರೆ ಪೇಜಾವರಶ್ರೀ ಗಳ ಗೌರವ ಇನ್ನೂ ಹೆಚ್ಚಾಗುತ್ತದೆ. ಅವರ ಆಪ್ತರಿಂದಲೇ ಅನ್ಯಾಯವಾಗಿದೆ ಎಂದು ಶೀರೂರು ಸ್ವಾಮೀಜಿ ಆರೋಪಿಸಿದ್ದಾರೆ.

ಯಾವುದೇ ಪೂರ್ವಸೂಚನೆ ನೀಡದೇ ಕಟ್ಟಡ ತೆರವು ಮಾಡಿದ್ದರಿಂದ ಅಂಗಡಿ ಮತ್ತು ಬಟ್ಟೆ ವ್ಯಾಪಾರ ಮಾಡುತ್ತಿದ್ದ ಅಂಗಡಿ ಮಾಲೀಕರಿಗೆ ಕೆಲಕಾಲ ಭೂಕಂಪವಾದ ಅನುಭವವಾದಂತಿತ್ತು. ಅಷ್ಟಮಠಗಳ ಟ್ರಸ್ಟ್ ಅಕ್ರಮದಿಂದ ವ್ಯಾಪಾರಿಗಳು ನಷ್ಟ ಅನುಭವಿಸಿದಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *