ಉಡುಪಿಯಲ್ಲಿ ಪರ್ಯಾಯ ಸಂಭ್ರಮ- ಪಲಿಮಾರು ಶ್ರೀಗಳ 2ನೇ ಪರ್ಯಾಯ ಶುರು

Public TV
3 Min Read

ಉಡುಪಿ: ವಿದ್ಯಾಧೀಶ ತೀರ್ಥ ಸ್ವಾಮೀಜಿ ಕೃಷ್ಣ ಮಠದ ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ 2ನೇ ಪರ್ಯಾಯ ಆರಂಭಿಸಿದ್ದಾರೆ.

ಪಲಿಮಾರು ಪರ್ಯಾಯ ಉತ್ಸವದಲ್ಲಿ ಭಕ್ತಿ-ಭಾವ, ಅಭಿಮಾನ ಮನೆ ಮಾಡಿತು. ಕನಕನ ಕಿಂಡಿಯಲ್ಲಿ ಶ್ರೀಕೃಷ್ಣನ ದರ್ಶನ ಮಾಡಿದ ಶ್ರೀಗಳು ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಾಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಕೃಷ್ಣ ಮಠ ಪ್ರವೇಶಿಸಿದ ಅವರು ಅಕ್ಷಯ ಪಾತ್ರೆಯನ್ನು ಸ್ವೀಕರಿಸಿ ಸರ್ವಜ್ಞ ಪೀಠವನ್ನು ಏರಿದರು. ಈ ಮೂಲಕ ದ್ವಿತೀಯ ಪರ್ಯಾಯ ಆರಂಭವಾಯಿತು. ಅದ್ಧೂರಿ ಸಮಾರಂಭಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಅಲ್ಲದೇ ಸಂಪ್ರದಾಯದಂತೆ ಕಾಪುವಿನ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿ ಜೋಡುಕಟ್ಟೆಗೆ ಬಂದ ಪಲಿಮಾರು ಮಠಾಧೀಶರಿಗೆ ಭವ್ಯ ಸ್ವಾಗತ ಕೋರಲಾಯಿತು.

ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ವೈಭವದ ಮೆರವಣಿಗೆ ರಥಬೀದಿಯಲ್ಲಿ ಸಾಗಿತು. ಮೆರವಣಿಗೆಯಲ್ಲಿ ಅಷ್ಟಮಠಾಧೀಶರು ಭಾಗಿಯಾದ್ರು. ಎರಡು ವರ್ಷಗಳ ಪರ್ಯಾಯದ ಅವಧಿಯಲ್ಲಿ ನಿರಂತರವಾಗಿ ನಡೆಯುವ ಅಖಂಡ ಭಜನೋತ್ಸವಕ್ಕೆ ಅವರು ಚಾಲನೆ ನೀಡಿದರು. ಜೊತೆಗೆ ಎರಡು ವರ್ಷಗಳ ಕಾಲ ಕಡೆಗೋಲು ಕೃಷ್ಣನ ಪೂಜಾ ಕೈಂಕರ್ಯವನ್ನು ಸ್ವಾಮೀಜಿ ನಿಭಾಯಿಸಲಿದ್ದಾರೆ. ಒಟ್ಟಿನಲ್ಲಿ ಪರ್ಯಾಯವನ್ನು ಜನರು ಹಬ್ಬದಂತೆ ಆಚರಿಸಿದರು.

ಈ ಬಾರಿಯ ಪರ್ಯಾಯ ಕಾರ್ಯಕ್ರಮ ಹಿಂದೆಂದಿಗಿಂತಲೂ ವೈಭವದಿಂದ ನಡೆಯಿತು. ವಿದ್ಯುತ್ ಅಲಂಕರದಿಂದ ಉಡುಪಿ ನಗರಿ ಕಂಗೊಳಿಸಿದ್ರೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಆಕರ್ಷಿಸಿತು. ನಗರದ ಜೋಡುಕಟ್ಟೆಯಲ್ಲಿ 3.15 ರ ಸುಮಾರಿಗೆ ಅಷ್ಟಮಠಾಧೀಶರ ಸಂಗಮವಾಯಿತು. ಪಲಿಮಾರು ಸ್ವಾಮಿಗಳ ಎರಡನೇ ಪರ್ಯಾಯ ಮಹೋತ್ಸವ ಆರಂಭಕ್ಕೆ ಮುನ್ನ ಜೋಡುಕಟ್ಟೆಯಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಕೆ ಮಾಡಲಾಯ್ತು. ಪಲಿಮಾರು, ಕೃಷ್ಣಾಪುರ, ಶಿರೂರು, ಕಾಣಿಯೂರು, ಸೋದೆ, ಅದಮಾರುಕಿರಿಯ ಸ್ವಾಮೀಜಿ ಪರ್ಯಾಯ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ರಾಷ್ಟ್ರದ ವಿವಿಧೆಡೆಯಿಂದ ಬಂದ ಸಾಂಸ್ಕೃತಿಕ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಜೋಡುಕಟ್ಟೆಯಲ್ಲಿ ಕುಳಿತು ಅಷ್ಟಮಠಾಧೀಶರು ಮೆರವಣಿಗೆ ವೀಕ್ಷಣೆ ಮಾಡಿದರು. ಜೋಡು ಕಟ್ಟೆಯಿಂದ ರಾಜ ಮಾರ್ಗದಲ್ಲಿ ಮೆರವಣಿಗೆ ಸಾಗಿತು. ರಸ್ತೆಯ ಇಕ್ಕೆಲಗಳಲ್ಲಿ ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದರು.

ತಟ್ಟಿರಾಯ, ಬಿರುದಾವಳಿಗಳು, ಛತ್ರ, ಚಾಮರ, ಕೊಂಬು ಕಹಳೆ, ಚಂಡೆ, ನಾಸಿಕದ ಬ್ಯಾಂಡ್, ಭಜನಾ ತಂಡಗಳು, ಬೆಂಕಿಯ ಚೆಂಡು, ಕವಾಯತು, ವೀರಗಾಸೆ, ಕುಡುಬಿ ನೃತ್ಯ, ಪಟ್ಟದ ಕುಣಿತ ಸಹಿತ ಹತ್ತಾರು ಜನಪದ ತಂಡಗಳು, ಕೀಲುಕುದುರೆ, ಬೇತಾಳ ಡೊಳ್ಳುಕುಣಿತ, ಗೊಂಬೆ ಕುಣಿತ, ಕರಗ ಗೊಂಬೆ, ಹುಲಿ ವೇಷ ಕುಣಿತ ಎಲ್ಲರನ್ನು ಸೆಳೆಯಿತು. ಯಕ್ಷಗಾನ ತಂಡ, ಕೇರಳ ಚೆಂಡೆ, ಪೂಜಾ ಕುಣಿತ, ಮಹಿಷಾಸುರ ಟ್ಯಾಬ್ಲೋ, ದೇವಿ, ಮಧ್ವಾಚಾರ್ಯರು, ವಾದಿರಾಜ ಸ್ವಾಮೀಜಿ, ಉಡುಪಿ ಕೃಷ್ಣನ ಟ್ಯಾಬ್ಲೋ ಮೆರವಣಿಗೆಯಲ್ಲಿದ್ದವು.

ಮೂವರು ಟ್ಯಾಬ್ಲೋ ಪಲ್ಲಕ್ಕಿಯಲ್ಲಿ- ಇಬ್ಬರು ಸಾಂಪ್ರದಾಯಿಕ ಪಲ್ಲಕ್ಕಿಯಲ್ಲಿ ಪರ್ಯಾಯ ಮಹೋತ್ಸವದ ಸ್ವಾಮೀಜಿಗಳ ಪಲ್ಲಕ್ಕಿ ಮೆರವಣಿಗೆ ಮೂರು ರೀತಿಯ ಸಂಪ್ರದಾಯಗಳಿಗೆ ಸಾಕ್ಷಿಯಾಯ್ತು. ಟ್ಯಾಬ್ಲೋ ಮೇಲೆ ಪಲ್ಲಕ್ಕಿಯೇರಿ ಮುಂದಿನ ಪರ್ಯಾಯ ಪೀಠಾಧಿಪತಿ ಪಲಿಮಾರುಶ್ರೀ ಬಂದರು. ಒಟ್ಟು ಮೂರು ವಿಧದ ಪಲ್ಲಕ್ಕಿಯಲ್ಲಿ ಸ್ವಾಮೀಜಿಗಳ ಮೆರವಣಿಗೆ ನಡೆಯಿತು.

ಪಲ್ಲಕ್ಕಿಯನ್ನು ಟ್ಯಾಬ್ಲೋದಲ್ಲಿಟ್ಟು ಹೊರಟ ಪಲಿಮಾರು ಸ್ವಾಮೀಜಿಯನ್ನು ಕೃಷ್ಣಾಪುರಶ್ರೀ, ಕಾಣಿಯೂರು ಸ್ವಾಮೀಜಿ ಟ್ಯಾಬ್ಲೋ ಪಲ್ಲಕ್ಕಿಯ ಮೂಲಕವೇ ಹಿಂಬಾಲಿಸಿದರು. ಆದ್ರೆ ಶೀರೂರು ಸ್ವಾಮೀಜಿ ವಿಭಿನ್ನತೆ ಪ್ರದರ್ಶನ ಮಾಡಿದ್ರು. ಮೆರವಣಿಗೆಯಲ್ಲಿ ಪಲ್ಲಕ್ಕಿಯಲ್ಲಿ ಗಣಪತಿ ಮೂರ್ತಿಯಿಟ್ಟ ಶೀರೂರುಶ್ರೀ, ತಾನು ಟ್ಯಾಬ್ಲೋದಲ್ಲಿ ಸಾಗಿದರು. ಶೀರೂರು ಸ್ವಾಮೀಜಿ ಪೇಟ ತೊಟ್ಟು ಪುಟ್ಟ ಟ್ಯಾಬ್ಲೋದಲ್ಲಿ ಕುಳಿತು ಭಕ್ತರ ಗಮನ ಸೆಳೆದರು.

ಸೋದೆ ಸ್ವಾಮೀಜಿ ಮತ್ತು ಅದಮಾರು ಸ್ವಾಮೀಜಿ ಮಾನವ ಹೊರುವ ಪಲ್ಲಕ್ಕಿಯಲ್ಲಿ ಕುಳಿತು ಮೆರವಣಿಗೆಯಲ್ಲಿ ಸಾಗಿದರು. ಸೋದೆ ವಿಶ್ವವಲ್ಲಭ ಸ್ವಾಮೀಜಿ ಮತ್ತು ಅದಮಾರು ಕಿರಿಯಶ್ರೀ ಈಶಪ್ರಿಯರು ಸಾಂಪ್ರದಾಯಿಕತೆ ಕಾಪಾಡಿಕೊಂಡರು. ಪಲ್ಲಕ್ಕಿಯನ್ನು ಮಾನವರು ಹೊತ್ತು ಸಾಗಿದರು. ಸಾಂಪ್ರದಾಯಿಕ ಪಲ್ಲಕ್ಕಿಯಲ್ಲಿ ಸ್ವಾಮೀಜಿಗಳನ್ನು ಹೊರುವ ಪದ್ಧತಿ ನಡೆದುಕೊಂಡು ಬರುತ್ತಿದೆ. ಪಲ್ಲಕ್ಕಿಯಲ್ಲಿ ಇಬ್ಬರು ಸ್ವಾಮೀಜಿ ಸಾಗಿ ಸಂಪ್ರದಾಯ ಮುಂದುವರೆಸಿದರು.

ಟ್ಯಾಬ್ಲೋ ಪಲ್ಲಕ್ಕಿಯ ಸಲಹೆ ಎರಡು ವರ್ಷದ ಹಿಂದೆ ಪೇಜಾವರಶ್ರೀ ನೀಡಿದ್ದರು. ಟ್ಯಾಬ್ಲೋ ಮೇಲೆ ಪಲ್ಲಕ್ಕಿಯಿಟ್ಟು ಮಾನವರು ಹೊರುವ ಸಂಪ್ರದಾಯ ನಿಲ್ಲಿಸೋಣ ಅಂತ ಹೇಳಿ ಕಳೆದ ಪರ್ಯಾಯದಲ್ಲಿ ಬದಲಾವಣೆ ತಂದಿದ್ದರು. ಪೇಜಾವರ ಸಲಹೆಯನ್ನು ನಾಲ್ವರು ಸ್ವಾಮೀಜಿ ಒಪ್ಪಿದ್ದರು, ಇಬ್ಬರು ಒಪ್ಪಿಲ್ಲ. ಒಬ್ಬರು ಎರಡೂ ಬೇಡವೆಂದು ಪಲ್ಲಕ್ಕಿಯಲ್ಲಿ ದೇವರನ್ನು ಇಟ್ಟು, ತಾನು ಟ್ಯಾಬ್ಲೋದಲ್ಲಿ ಬಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *