ಕೊಹ್ಲಿ 17ರನ್ ಹೊಡೆದಿದ್ರೆ ಸಚಿನ್ ದಾಖಲೆಯೂ ಬ್ರೇಕ್ ಆಗ್ತಿತ್ತು!

Public TV
1 Min Read

ಸೆಂಚೂರಿಯನ್: ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸುವ ಮೂಲಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಶತಕ ಸಿಡಿಸಿದ ಎರಡನೇ ಟೀಂ ಇಂಡಿಯಾ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಂದು ವೇಳೆ 17 ರನ್ ಗಳಿಸಿದ್ದರೆ ಭಾರತದ ಪರ ಆಫ್ರಿಕಾದಲ್ಲಿ ಅತಿ ಹೆಚ್ಚು ರನ್ ಹೊಡೆದ ನಾಯಕ ಎನ್ನುವ ದಾಖಲೆ ಕೊಹ್ಲಿ ಹೆಸರಿಗೆ ಸೇರ್ಪಡೆಯಾಗುತಿತ್ತು.

ಮೂರನೇ ದಿನದಾಟದಲ್ಲಿ 146 ಎಸೆತವನ್ನು ಎದುರಿಸಿ ಕೊಹ್ಲಿ ಟೆಸ್ಟ್ ಕ್ರಿಕೆಟ್ ಬಾಳ್ವೆಯ 21ನೇ ಶತಕವನ್ನು ಸಿಡಿಸಿದರು. ಈ ಹಿಂದೆ 1996 ರಲ್ಲಿ ನಾಯಕರಾಗಿದ್ದ ಸಚಿನ್ ತೆಂಡೂಲ್ಕರ್ ಕೇಪ್ ಟೌನ್ ನಲ್ಲಿ ಜನವರಿಯಲ್ಲಿ ನಡೆದ ಎರಡನೇ ಟೆಸ್ಟ್ ಮೊದಲ ಇನ್ನಿಂಗ್ಸ್ ನಲ್ಲಿ 169 ರನ್ (254 ಎಸೆತ, 26 ಬೌಂಡರಿ) ಹೊಡೆದಿದ್ದರು. ಈ ಮೂಲಕ ಆಫ್ರಿಕಾ ನೆಲದಲ್ಲಿ ಶತಕ ಹೊಡೆದ ಮೊದಲ ಭಾರತೀಯ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ದಕ್ಷಿಣ ಆಫ್ರಿಕಾದ 335 ರನ್ ಗಳಿಗೆ ಜವಾಬು ನೀಡಲು ಆರಂಭಿಸಿದ್ದ ಭಾರತ ಮೂರನೇ ದಿನ 92.1 ಓವರ್ ಗಳಲ್ಲಿ 307 ರನ್ ಗಳಿಗೆ ಆಲೌಟ್ ಆಗಿದೆ. ವಿರಾಟ್ ಕೊಹ್ಲಿ 153 ರನ್( 217 ಎಸೆತ, 15 ಬೌಂಡರಿ) ಹೊಡೆದು ಕೊನೆಯವರಾಗಿ ಔಟಾದರು. ಆರ್.ಅಶ್ವಿನ್ 38 ರನ್, ಹಾರ್ದಿಕ್ ಪಾಂಡ್ಯ 15 ರನ್ ಹೊಡೆದು ಔಟಾದರು. ಮೊರ್ನೆ ಮಾರ್ಕೆಲ್ 4 ವಿಕೆಟ್ ಪಡೆದರೆ, ಕೇಶವ್‌ ಮಹಾರಾಜ್‌, ಫಿಲಾಂಡರ್, ಕಗಿಸೊ ರಬಾಡ, ಲುಂಗಿ ಎನ್‍ಗಿಡಿ ತಲಾ ಒಂದೊಂದು ವಿಕೆಟ್ ಪಡೆದರು.

ಈ ಮೂಲಕ ಕೊಹ್ಲಿ ನಾಯಕನಾಗಿ ಶತಕ ಸಿಡಿಸಿದ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ. ಸ್ವದೇಶದಲ್ಲಿ 7 ಶತಕ ಸಿಡಿಸಿದ್ದರೆ, ವಿದೇಶದಕಲ್ಲಿ 7 ಶತಕ ಸಿಡಿಸಿದ್ದಾರೆ.

ಅತಿ ಹೆಚ್ಚು ರನ್ ಹೊಡೆದ ನಾಯಕರು:
ಆಫ್ರಿಕಾ ನೆಲದಲ್ಲಿ ಟೀಂ ಇಂಡಿಯಾ ನಾಯಕರ ಪೈಕಿ ಸಚಿನ್ ತೆಂಡೂಲ್ಕರ್ 169, 2010ರಲ್ಲಿ ಧೋನಿ 90 ರನ್, 1992ರಲ್ಲಿ ಅಜರುದ್ದೀನ್ 50 ರನ್ ಹೊಡೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *