ದೇಶಾದ್ಯಂತ ಸಂಚಲನ ಮೂಡಿಸಿದ್ದ ‘ಪದ್ಮಾವತ್’ ರಿಲೀಸ್‍ಗೆ ಡೇಟ್ ಫಿಕ್ಸ್!

Public TV
2 Min Read

ಮುಂಬೈ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಹು ನಿರೀಕ್ಷಿತ ಮತ್ತು ದೇಶಾದ್ಯಂತ ಸಂಚಲನ ಮೂಡಿಸಿದ್ದ ‘ಪದ್ಮಾವತ್’ ಸಿನಿಮಾಗೆ ಕೊನೆಗೂ ತೆರೆಕಾಣಲು ಮುಹೂರ್ತ ಫಿಕ್ಸ್ ಆಗಿದೆ. ಸೆನ್ಸಾರ್ ಬೋರ್ಡ್ ನಿಂದ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದ್ದು, ಜನವರಿ 25ರಂದು ದೇಶಾದ್ಯಂತ ತೆರೆಗೆ ಅಪ್ಪಳಿಸಲಿದೆ.

ಚಿತ್ರಕ್ಕೆ ಈ ಮೊದಲು ‘ಪದ್ಮಾವತಿ’ ಅಂತಾ ಹೆಸರಿಡಲಾಗಿತ್ತು. ಸೆನ್ಸಾರ್ ಬೋರ್ಡ್ ಸೂಚನೆಯ ಮೇರೆಗೆ ಚಿತ್ರದ ಹೆಸರನ್ನು ‘ಪದ್ಮಾವತ್’ ಅಂತಾ ಬದಲಾಯಿಸಲಾಗಿದೆ. ಆದ್ರೆ ‘ಪದ್ಮಾವತ್’ ಅಕ್ಷಯ್ ಕುಮಾರ್ ನಟನೆಯ ‘ಪ್ಯಾಡ್‍ಮ್ಯಾನ್’ ಚಿತ್ರಕ್ಕೆ ಪೈಪೋಟಿಯನ್ನು ನೀಡಲಿದೆ.

ಶುಕ್ರವಾರ ‘ಪದ್ಮಾವತ್’ಗೆ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ಲಭಿಸಿದ್ದು, ಚಿತ್ರ ಬರೋಬ್ಬರಿ 2 ಗಂಟೆ 43 ನಿಮಿಷ (163 ನಿಮಿಷ) ಸಮಯವನ್ನು ಹೊಂದಿದೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ, ರಣ್‍ವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಲೀಡ್ ರೋಲ್‍ನಲ್ಲಿ ನಟಿಸಿದ್ದಾರೆ. ಅಂದುಕೊಂಡಂತೆ ಆಗಿದ್ದರೆ ಚಿತ್ರ 2017 ಡಿಸೆಂಬರ್ 01ರಂದು ತೆರೆ ಕಾಣಬೇಕಿತ್ತು. ಆದ್ರೆ ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸಿ ಬಿಡುಗಡೆಗೆ ರಾಜಸ್ಥಾನದ ಕರ್ಣಿ ಸೇನಾ ತೀವ್ರ ವಿರೋಧವನ್ನು ವ್ಯಕ್ತಪಡಿಸಿತ್ತು.

ಚಿತ್ರದ ಬಿಡುಗಡೆಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿತ್ತು. ಹೀಗಾಗಿ ಸೆನ್ಸಾರ್ ಬೋರ್ಡ್‍ನಿಂದ ರಚಿಸಲಾದ ವಿಶೇಷ ತಂಡದಿಂದ ಚಿತ್ರವನ್ನ ವಿಮರ್ಶಿಸಲಾಗಿದೆ. ಸಿನಿಮಾ ಐತಿಹಾಸಿಕ ಕಥೆಯನ್ನು ಆಧರಿಸಿರುವುದರಿಂದ ತಂಡದಲ್ಲಿ ಇತಿಹಾಸಕಾರರು ಕೂಡ ಇದ್ದರು. ಉದಯಪುರ್ ಮೂಲದ ಅರವಿಂದ್ ಸಿಂಗ್, ಜೈಪುರ ವಿಶ್ವವಿದ್ಯಾಲಯದ ಪ್ರೊಫೆಸರ್ ಗಳಾದ ಕೆಕೆ ಸಿಂಗ್ ಮತ್ತು ಡಾ.ಚಂದ್ರಮಣಿ ಸಿಂಗ್ ವಿಶೇಷ ತಂಡದಲ್ಲಿ ಇದ್ದರು. ಸದಸ್ಯರು ಐತಿಹಾಸಿಕ ಘಟನೆಗಳು, ದೇಶದ ಸಾಮಾಜಿಕ-ಸಾಂಸ್ಕೃತಿಕ ಅಂಶಗಳ ಬಗ್ಗೆ ಜ್ಞಾನ ಹೊಂದಿದ ವ್ಯಕ್ತಿಗಳಾಗಿದ್ದು, ಕಥೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ರು ಎಂದು ಸೆನ್ಸಾರ್ ಬೋರ್ಡ್ ತಿಳಿಸಿದೆ. ಚಿತ್ರದ ಸುತ್ತ ವಿವಾದ ಹುಟ್ಟಿಕೊಂಡ ನಂತರ ಸೆನ್ಸಾರ್ ಬೋರ್ಡ್ ಪ್ರತಿಯೊಂದು ಅಂಶವನ್ನು ಪರಿಗಣಿಸಿ ಯು/ಎ ಪ್ರಮಾಣ ಪತ್ರ ನೀಡಿದೆ.

ಯಾವ ಸಿನಿಮಾಗಳೊಂದಿಗೆ ಕ್ಲ್ಯಾಶ್ ಆಗಬಾರದೆಂದು ಬನ್ಸಾಲಿ ಡಿಸೆಂಬರ್ 01 ಚಿತ್ರದ ರಿಲೀಸ್ ದಿನಾಂಕವನ್ನು ಅಂತಿಮಗೊಳಿಸಿದ್ದರು. ಕಾರಣಾಂತರಗಳಿಂದ ಸಿನಿಮಾ ಅಕ್ಷಯ್ ಕುಮಾರ್ ನಟನೆಯ ವಿಭಿನ್ನ ಕಥಾ ಹಂದರವುಳ್ಳ ‘ಪ್ಯಾಡ್‍ಮ್ಯಾನ್’ ಜೊತೆಗೆ ರಿಲೀಸ್ ಆಗಬೇಕಿದೆ. ಈ ಹಿಂದೆ ಬನ್ಸಾಲಿ ನಿರ್ದೇಶನದ ‘ಬಾಜೀರಾವ್ ಮಸ್ತಾನಿ’ ಸಿನಿಮಾ ಸಹ ಶಾರೂಖ್ ಖಾನ್ ನಟಿಸಿದ್ದ ‘ದಿಲ್‍ವಾಲೆ’ ಚಿತ್ರಕ್ಕೆ ಭಾರೀ ಪೈಪೋಟಿಯನ್ನು ನೀಡಿತ್ತು. ಅಂದು ಪ್ರೇಕ್ಷಕರು ಐತಿಹಾಸಿಕ ಕಥೆಯನ್ನು ಹೊಂದಿದ್ದ ‘ಬಾಜೀರಾವ್ ಮಸ್ತಾನಿ’ಯನ್ನು ಮೆಚ್ಚಿಕೊಂಡಿದ್ದರು. ಇಂದು ಸಹ ಬನ್ಸಾಲಿ ಅದೇ ಭರವಸೆಯಲ್ಲಿ ಚಿತ್ರದ ಬಿಡುಗಡೆಯ ದಿನಾಂಕವನ್ನು ನಿಗದಿಪಡಿಸಿದೆ. ಇತ್ತ ಅಕ್ಷಯ್ ಕುಮಾರ್ ಅಭಿನಯದ ‘ಪ್ಯಾಡ್‍ಮ್ಯಾನ್’ ತನ್ನ ಟ್ರೇಲರ್ ಮತ್ತು ಹಾಡುಗಳಿಂದ ಹವಾ ಕ್ರಿಯೇಟ್ ಮಾಡಿದೆ. ಪ್ರತಿಬಾರಿಯೂ ಹೊಸ ಪ್ರಯತ್ನದಲ್ಲಿ ತೊಡಗಿಸಿಕೊಳ್ಳುವ ಅಕ್ಷಯ್ ಪ್ರೇಕ್ಷಕ ಕೈ ಹಿಡಿಯುತ್ತಾನಾ ಎಂಬುದನ್ನು ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *