ಸ್ಯಾಂಡಲ್‍ ವುಡ್‍ನಲ್ಲಿ ಲವ್ ಸೆಕ್ಸ್ ದೋಖಾ – ಸಹ ನಟನ ವಿರುದ್ಧ ಸಹನಟಿ ದೂರು

Public TV
4 Min Read

ಬೆಂಗಳೂರು: ಮದುವೆಯಾಗಿ ನಂತರ ವಂಚಿಸಿದ್ದಾಗಿ ಸಹ ನಟನ ವಿರುದ್ಧ ಆರೋಪಿಸಿ ನಟಿಯೊಬ್ಬರು ದೂರು ನೀಡಿದ್ದಾರೆ.

ನಟ ಅಮಿತ್ ವಿರುದ್ಧ 39 ವರ್ಷದ ನಟಿ ರಾಧಿಕಾ ಶೆಟ್ಟಿ ಆರೋಪಿಸಿ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ ರಾಧಿಕಾ ಶೆಟ್ಟಿ ಈ ಆರೋಪ ಸುಳ್ಳು, ಹಣಕ್ಕಾಗಿ ನನ್ನ ಮಗನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾಳೆ ಎಂದು ಅಮಿತ್ ತಾಯಿ ತಿಳಿಸಿದ್ದಾರೆ.

ರಾಧಿಕಾ ಶೆಟ್ಟಿಗೆ ಈ ಹಿಂದೆ ಮದುವೆಯಾಗಿದ್ದು, 17 ವರ್ಷದ ಮಗ, 14 ವರ್ಷದ ಮಗಳಿದ್ದಾಳೆ. ಸಂಸಾರದಲ್ಲಿ ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ರಾಧಿಕಾ ಶೆಟ್ಟಿ ಅಮಿತ್ ಜೊತೆ ಪರಿಚಯವಾಗಿ ಮದುವೆಯಾಗಿದ್ದರು. ಆದರೆ ಈಗ ಅಮಿತ್ ಬೇರೆ ಯುವತಿಯನ್ನು ಮದುವೆಯಾಗಲು ಮುಂದಾಗಿದ್ದಾರೆ ಎಂದು ರಾಧಿಕಾ ಆರೋಪಿಸಿದ್ದಾರೆ.

ರಾಧಿಕಾ ಶೆಟ್ಟಿ ಹೇಳೋದು ಏನು?
ನಮಿತಾ ಐ ಲವ್ ಯೂ ಚಿತ್ರದ ಶೂಟಿಂಗ್ ವೇಳೆ ನಮಗೆ ಪರಿಚಯವಾಗಿದೆ. ನಂತರ ಅಮಿತ್ ನನಗೆ ಪ್ರಪೋಸ್ ಮಾಡಿದ್ದರು. ಈ ವೇಳೆ ನನಗೆ ಮದುವೆಯಾಗಿದೆ ಇಬ್ಬರು ಮಕ್ಕಳಿದ್ದಾರೆ ಎಂದು ಹೇಳಿದೆ. ಅಷ್ಟೇ ಅಲ್ಲದೇ ನಮ್ಮ ಮನೆಯಲ್ಲಿ ನನಗೆ ಮತ್ತೊಂದು ಮದುವೆ ಮಾಡಲು ನಿರ್ಧರಿಸಿದ್ದಾರೆ. ಡಿವೋರ್ಸ್ ಆಗಿರುವ ಅಥವಾ ಪತ್ನಿ ಮೃತಪಟ್ಟಿರುವ ವ್ಯಕ್ತಿಯನ್ನು ಹುಡುಕುತ್ತಿದ್ದಾರೆ ಎಂದು ತಿಳಿಸಿದೆ.

ಆರಂಭದಲ್ಲಿ ಅಮಿತ್ ಪ್ರಸ್ತಾಪವನ್ನು ನಾನು ತಿರಸ್ಕರಿಸಿದ್ದೆ. ಈ ರೀತಿ ಮದುವೆಯಾದರೆ ಮುಂದೆ ತೊಂದರೆಯಾಗಬಹುದು ಎಂದು ನನ್ನ ಕುಟುಂಬದವರು ಅವರಿಗೆ ತಿಳಿ ಹೇಳಿದ್ದರು. ಆದರೆ ಅಮಿತ್ ಒಪ್ಪಲಿಲ್ಲ. ಈ ವೇಳೆ ಅಮಿತ್, ಜೀವನದಲ್ಲಿ ಒಬ್ಬರಿಗೆ ಲೈಫ್ ಕೊಡುತ್ತೇನೆ. ಆಗ ಈ ಸಮಾಜದಲ್ಲಿ ನನಗೆ ಕೂಡ ಒಳ್ಳೆಯ ಹೆಸರು ಸಿಗುತ್ತದೆ. ನಿನಗೆ ಮಕ್ಕಳಿದ್ದರು ಪರವಾಗಿಲ್ಲ, ನನ್ನ ಮಕ್ಕಳಂತೆ ನೋಡಿಕೊಳ್ಳುತ್ತೇನೆ ಎಂದು ತನ್ನ ನಿರ್ಧಾರವನ್ನು ಸಮರ್ಥಿಕೊಂಡಿದ್ದರು.

ಸಿಗಂದೂರಿನಲ್ಲಿ ಮದುವೆ: ಮೇ 21, 2013ರಲ್ಲಿ ಸಿಗಂದೂರಿನಲ್ಲಿ ನನ್ನ ಮದುವೆಯಾಗಿತ್ತು. ಸಿಗಂದೂರಿನಲ್ಲೇ ನನ್ನ ಮದುವೆ ನಡೆಯಬೇಕು ಎಂದು ನನ್ನ ತಾಯಿ ಬಯಸಿದ್ದರು. ಮದುವೆ ನಂತರ ಅಮಿತ್ ನನ್ನ ಜೊತೆ ಚೆನ್ನಾಗಿಯೇ ಇದ್ದರು. ನನ್ನ ತಂಗಿ ಮದುವೆಯಲ್ಲಿ ಓಡಾಡಿ, ಆಮಂತ್ರಣ ಪತ್ರಿಕೆ ಎಲ್ಲ ಅವರೇ ಹಂಚುತ್ತಿದ್ದರು. ನನ್ನ ಗಂಡನ ಸ್ಥಾನದಲ್ಲಿ ನಿಂತು ಎಲ್ಲ ಕೆಲಸ ಮಾಡಿದ್ದರು. ನವೆಂಬರ್ 5 ವರೆಗೂ ನನ್ನ ಜೊತೆಯಲ್ಲಿ ಚೆನ್ನಾಗಿಯೇ ಇದ್ದರು.

ಸಿಗಂದೂರಲ್ಲಿ ಮದುವೆಯಾದಾಗ ನನ್ನ ಕುಟುಂಬದವರು ಮಾತ್ರ ಹಾಜರಿದ್ದರು. ಅಮಿತ್ ಪೋಷಕರಿಗೆ ಇಷ್ಟವಿಲ್ಲದ ಕಾರಣ ಆತನ ಕುಟುಂಬದಿಂದ ಯಾರೂ ಮದುವೆಗೆ ಬಂದಿರಲಿಲ್ಲ. ನಂತರ ತನ್ನ ತಾಯಿಯನ್ನು ಅವರು ಒಪ್ಪಿಸುವುದಾಗಿ ಅಮಿತ್ ಹೇಳಿದ್ದರು. ಇದು ನನ್ನ ಎರಡನೇ ಮದುವೆಯಾದ ಕಾರಣ ನಾವು ಸರಳವಾಗಿ ಮದುವೆಯಾದೆವು. ಅಷ್ಟೇ ಅಲ್ಲದೇ ರಿಜಿಸ್ಟ್ರಾರ್ ಆಫೀಸ್ ನಲ್ಲಿ ನಮ್ಮ ಮದುವೆಯನ್ನು ನೊಂದಣಿ ಮಾಡಿಸಿದ್ದೆವು. ಅಲ್ಲಿನ ಸಿಸಿಟಿವಿಯಲ್ಲಿ ನಮ್ಮ ನಾವು ನೊಂದಣಿ ಮಾಡಿಸಿಕೊಳ್ಳುವ ದೃಶ್ಯ ಸೆರೆಯಾಗಿದೆ ಎಂದು ರಾಧಿಕಾ ತಿಳಿಸಿದ್ದಾರೆ.

ಸಂಬಂಧ ಬ್ರೇಕಪ್ ಆಗಿದ್ದು ಯಾಕೆ?
ಅಮಿತ್ 1 ವರ್ಷದಿಂದ ನೆಲಮಂಗಲದ ಬೇರೆ ಹುಡುಗಿಯನ್ನು ಇಷ್ಟಪಡುತ್ತಿದ್ದಾರೆ ಎನ್ನುವ ವಿಷಯ ನನ್ನ ಕಿವಿಗೆ ಬಿತ್ತು. ಆ ಯುವತಿಯನ್ನು ತನ್ನ ಮನೆಯಲ್ಲೇ ಇರಿಸಿಕೊಂಡಿದ್ದು ಮಾತ್ರವಲ್ಲದೇ ಆಕೆಯ ಜೊತೆ ಮದುವೆಯಾಗಲು ನಿರ್ಧಾರ ಮಾಡಿದ್ದಾರೆ ಎಂಬುದು ತಿಳಿದುಬಂತು. ಈ ವಿಷಯ ನನಗೆ ತಿಳಿದಾಗ ಅಮಿತ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಹಾಗೂ ಯಾವುದೇ ಸಂಪರ್ಕಕ್ಕೆ ಸಿಗುತ್ತಿಲ್ಲ. ಬೇರೆ ಯುವತಿಯ ಪ್ರವೇಶದಿಂದ ನಮ್ಮ ಜೀವನ ಹಾಳಾಗಿದೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ.

ಡಿಸೆಂಬರ್ 10 ರಂದು ಏನಾಯ್ತು?
ಆರ್‍ಆರ್ ನಗರದಲ್ಲಿ ಡಿಸೆಂಬರ್ 10 ರಂದು ನನ್ನ ಮಗ ಪಾರ್ಟಿಗೆ ಹೋದಾಗ ಅಮಿತ್ ಗೆ ಸಿಕ್ಕಿದ್ದಾನೆ. ಈ ವೇಳೆ ಅಮಿತ್ ತನ್ನ ತಾಯಿ ಹಾಗೂ ಸಹೋದರಿಯನ್ನು ಕರೆಸಿ ಅವನ ಮೇಲೆ ಹಲ್ಲೆ ನಡೆಸಿದ್ದಾರೆ. ಮಗನ ಫೋನ್ ಎಸೆದು ಅವರು ಎಳೆದುಕೊಂಡು ಹೋಗಿದ್ದಾರೆ. ನಂತರ ಮಗ ನನಗೆ ಕರೆ ಮಾಡಿ ವಿಚಾರ ತಿಳಿಸಿದ್ದ.

ವಿಚಾರ ತಿಳಿದು ನಾನು, ನನ್ನ ಸ್ನೇಹಿತೆ ಮತ್ತು ಆಕೆಯ ಪತಿ ಜೊತೆ ಸ್ಥಳಕ್ಕೆ ಹೋದೆ. ಆರ್‍ಆರ್ ನಗರಕ್ಕೆ ಹೋದಾಗ ನನ್ನ ಮಗ ಅಲ್ಲಿ ಇರಲಿಲ್ಲ ಹಾಗೂ ಅವನು ಫೋನ್ ಕೂಡ ಎತ್ತುತ್ತಿರಲ್ಲಿಲ್ಲ. ನಂತರ ನಾನು ಅಮಿತ್ ಮನೆಗೆ ಹೋಗಿ ನನ್ನ ಮಗ ಎಲ್ಲಿ ಎಂದು ಕೇಳಿದ್ದಕ್ಕೆ ನನಗೆ ಹೊಡೆಯಲು ಅಮಿತ್ ಬಂದಿದ್ದಾರೆ. ಈ ವೇಳೆ ನನ್ನ ಸ್ನೇಹಿತೆಯ ಪತಿ ಬಂದಾಗ ಅವರ ಮೇಲೆ ನಾಯಿಯನ್ನು ಬಿಟ್ಟಿದ್ದಾರೆ. ಅಷ್ಟೇ ಅಲ್ಲದೇ ನಮ್ಮ ಮೇಲೆ ಅಮಿತ್, ಆತನ ತಾಯಿ, ಮತ್ತು ಮನೆಯಲ್ಲಿದ್ದ ಅಮಿತ್ ಸ್ನೇಹಿತೆ ಹಲ್ಲೆ ನಡೆಸಿದ್ದಾರೆ ಎಂದು ರಾಧಿಕಾ ಘಟನೆಯನ್ನು ವಿವರಿಸಿದ್ದಾರೆ.

ಆರೋಪ ಸುಳ್ಳು:
ಅಮಿತ್ ತಾಯಿ ಹೇಳುವ ಪ್ರಕಾರ ಇಬ್ಬರ ನಡುವೆ ಯಾವುದೇ ಮದುವೆ ಆಗಿಲ್ಲ. ಹಣಕ್ಕಾಗಿ ನನ್ನ ಮಗನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾಳೆ. ರಾಧಿಕಾ ಶೆಟ್ಟಿ ಕಿರುಕುಳದಿಂದ ಅಮಿತ್ ಇತ್ತೀಚೆಗೆ ಆತ್ಮಹತ್ಯೆಗೆ ಯತ್ನಿಸಿದ್ದ. ಯುವಕರ ಜೊತೆ ಫೋಟೋ ತೆಗೆಸಿಕೊಂಡು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡ್ತಾಳೆ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ವಿಚಾರದ ಬಗ್ಗೆ ಅಮಿತ್ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Share This Article
Leave a Comment

Leave a Reply

Your email address will not be published. Required fields are marked *