ಅರ್ಧ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Public TV
1 Min Read

ಮುಂಬೈ: ಇಲ್ಲಿನ ಇರ್ಲಾ ನುಲ್ಲಾದಲ್ಲಿ ಭಾನುವಾರದಂದು 30 ವರ್ಷದ ಅಪರಿಚಿತ ವ್ಯಕ್ತಿಯ ಅರ್ಧ ಕೊಳೆತ ಮೃತದೇಹ ಪತ್ತೆಯಗಿದೆ. ಜುಹು ನಿವಾಸಿಗಳಾದ ದಂಪತಿ ನೀಡಿದ ಮಾಹಿತಿಯ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು, ಶವವನ್ನ ವಶಕ್ಕೆ ಪಡೆದು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಭಾನುವಾರ ಬೆಳಗ್ಗೆ 11.30ರ ವೇಳೆಯಲ್ಲಿ ಕೆಲವು ಸ್ಥಳೀಯರು ಜುಹು ಪೊಲೀಸ್ ಠಾಣೆಗೆ ಕರೆ ಮಾಡಿ ಮೃತದೇಹದ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವವನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಪ್ರಕಾರ ಮೃತ ವ್ಯಕ್ತಿ ಸುಮಾರು 25 ರಿಂದ 35 ವರ್ಷ ಮಧ್ಯದ ವಯಸ್ಸಿನವರದಾಗಿದ್ದು, ಉದ್ದ ಕೂದಲು ಹಾಗೂ ಗಡ್ಡ ಹೊಂದಿದ್ದರು. ದೇಹದ ಮೇಲೆ 4 ಟ್ಯಾಟೂಗಳು ಕೂಡ ಇದ್ದು, ಇದರ ಆಧಾರದ ಮೇಲೆ ಆ ವ್ಯಕ್ತಿಯ ಗುರುತು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಎರಡು ದಿನಗಳ ಹಿಂದೆ ಈ ವ್ಯಕ್ತಿ ಕೊಲೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೂಪರ್ ಆಸ್ಪತ್ರೆಗೆ ರವಾನಿಸಲಾಗಿದೆ.

ಮೃತ ವ್ಯಕ್ತಿಯ ಕೈ ಮೇಲೆ ಹೃದಯದ ಆಕಾರದಲ್ಲಿರುವ ಒಂದು ಟ್ಯಾಟೂ ಇದ್ದು, ಬಲಗೈ ತೋಳಿನಲ್ಲಿ ಅವತಾರ್ ಎಂದು ಬರೆದಿರುವ ಟ್ಯಾಟೂ ಇದೆ. ಜೊತೆಗೆ ಎದೆಯ ಮೇಲೆ ಪ್ರವೀಣ್, ಪರ್ವೀನ್ ಎಂಬ ಹೆಸರಿನ ಟ್ಯಾಟೂಗಳಿವೆ. ವ್ಯಕ್ತಿಯ ಬಲಗೈನಲ್ಲಿ ಸ್ಟೀಲ್ ಕಡಗ, ಕಪ್ಪು ದಾರಕ್ಕೆ ಕಟ್ಟಿರೋ ಸ್ಟೀಲ್ ಪೆಂಡೆಂಟ್ ಹಾಗೂ ಬಲಗಾಲಿನಲ್ಲಿ ಕಪ್ಪು ದಾರ ಕೂಡ ಪತ್ತೆಯಾಗಿದೆ.

ಮೃತ ವ್ಯಕ್ತಿಯ ಗುರುತು ಪತ್ತೆ ಮಾಡಲು ಕಾಣೆಯಾಗಿರುವವರ ಕುರಿತ ದಾಖಲೆಗಳನ್ನ ಕೂಡ ಪರಿಶೀಲಿಸುತ್ತಿದ್ದೇವೆ. ಐಪಿಸಿ ಸೆಕ್ಷನ್ 302 ಹಾಗೂ 201ರ ಅಡಿ ಪ್ರಕರಣ ದಾಖಲಾಗಿದೆ. ಮೃತವ್ಯಕ್ತಿಯ ತಲೆ ಮೇಲೆ ಗಾಯಗಳಾಗಿರುವುದರಿಂದ ಅವರನ್ನು ಹೊಡೆದು ಕೊಂದಿರಬಹುದು ಎಂದು ಶಂಕಿಸಲಾಗಿದೆ. ಅಲ್ಲದೆ ಮೊದಲೇ ಕೊಲೆ ಮಾಡಿ ನುಲ್ಲಾದಲ್ಲಿ ಹಾಕಿರಬಹುದು ಎಂಬ ಅನುಮಾನ ಮೂಡಿದೆ ಎಂದು ಪೊಲೀಸರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *