`ಕುರುಕ್ಷೇತ್ರ’ ಸಿನಿಮಾ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ ಚಾಲೆಂಜಿಂಗ್ ಸ್ಟಾರ್!

Public TV
2 Min Read

ಬೆಂಗಳೂರು: ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ `ಮುನಿರತ್ನ ಕುರುಕ್ಷೇತ್ರ’ ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲಿ ದೊಡ್ಡ ತಾರಾಗಣವಿದ್ದು, ಜನರಲ್ಲಿ ಬಾರಿ ನಿರೀಕ್ಷೆ ಹುಟ್ಟಿಸಿದೆ.

ಈ ಕುರಿತು ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಈ ಚಿತ್ರದಲ್ಲಿ ನಾನು ಯಾವುದೇ ಪರಕಾಯಪ್ರವೇಶ ಮಾಡಲಿಲ್ಲ. ಕ್ಯಾಮರಾ ಆನ್ ಮಾಡಿದ ತಕ್ಷಣ ಅಭಿನಯಿಸಿ ಕಟ್ ಎಂದ ತಕ್ಷಣ ಪಾತ್ರದಿಂದ ಹೊರಬರುತ್ತೇನೆ. ನಾನು ಒಬ್ಬ ರಂಗಭೂಮಿ ಕಲಾವಿದನಾಗಿದ್ದು, ನಿನಾಸಂ ಮಾಡಿದ್ದೇನೆ ಹಾಗೂ ಬೇಸಿಕ್ ಕಲಿತಿದ್ದೇನೆ. ಈಗಿನ ಕಾಲದ ಮಕ್ಕಳಿಗೆ ಕುರುಕ್ಷೇತ್ರ, ರಾಮಾಯಣ, ಮಹಾಭಾರತದ ಬಗ್ಗೆ ತಿಳಿದಿಲ್ಲ. ಅಷ್ಟೇ ಅಲ್ಲದೆ ನನ್ನ ಮಗನಿಗೂ ಇದರ ಬಗ್ಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ನಮ್ಮ ಕಾಲದಲ್ಲಿ ಮಹಾಭಾರತ, ರಾಮಾಯಣದ ಬಗ್ಗೆ ಓದಿದ್ದೇವೆ, ಕೇಳಿದ್ದೇವೆ. ಆದರೆ ಈಗಿನ ಕಾಲದ ಮಕ್ಕಳಿಗೆ ಬೇರೆ ರೀತಿಯ ಶಿಕ್ಷಣವಿದ್ದು, ಅವರಿಗೆ ಇದರ ಬಗ್ಗೆ ತಿಳಿದಿರುವುದಿಲ್ಲ. ನಮ್ಮ ಕಾಲದಲ್ಲಿ ಟಿಪ್ಪು ಸುಲ್ತಾನ್ ಯಾರು? ಅವರ ಕಥೆ ಏನು? ಎಂಬುದು ನಾವು ಕೇಳಿದ್ದೇವೆ ಹಾಗೂ ಟಿವಿಯಲ್ಲಿ ನೋಡಿದ್ದೇವೆ. ಆದರೆ ಈಗಿನ ಕಾಲದ ಮಕ್ಕಳಿಗೆ ಚೋಟಾ ಭೀಮ್ ಹಾಗೂ ಪೋಕಿಮಾನ್ ಕಥೆಗಳು ಮಾತ್ರ ಅವರಿಗೆ ಗೊತ್ತಿರೋದು. ಆ ಮಕ್ಕಳಿಗಾಗಿ ನಾವು ಈ ಸಿನಿಮಾ ಮಾಡುತ್ತಿದ್ದೇವೆ ಎಂದು ದರ್ಶನ್ ಈಗಿನ ಕಾಲದ ಮಕ್ಕಳ ಬಗ್ಗೆ ಹೇಳಿದ್ದಾರೆ.

ಬೇರೆ ಚಿತ್ರರಂಗದವರು ಇಂಥ ಸಿನಿಮಾಗಳಿಗೆ ನಾವು 5-6 ವರ್ಷ ತೆಗೆದುಕೊಂಡಿದ್ದೇವೆ ಎಂದು ಹೇಳುತ್ತಾರೆ. ಆದರೆ ನಾವು ಮೇ ತಿಂಗಳಿನಿಂದ ಜನವರಿ 5 ರವರೆಗೂ ಕುರುಕ್ಷೇತ್ರ ಎಂಬ ದೊಡ್ಡ ಸಿನಿಮಾದ ಚಿತ್ರೀಕರಣ ಮಾಡಿದ್ದೇವೆ. ಈ ಸಿನಿಮಾನೇ ದೊಡ್ಡದು ಹಾಗೂ ಈ ಸಿನಿಮಾ ಮುಂದೆ ಯಾರೂ ದೊಡ್ಡವರಿಲ್ಲ. ಈ ಸಿನಿಮಾ 3ಡಿಯಲ್ಲಿದ್ದು, 3ಡಿನೇ ಈ ಸಿನಿಮಾದ ಟ್ರೀಟ್ ಹಾಗೂ 3ಡಿ ಎಫೆಕ್ಟ್ ನಲ್ಲಿ ಇದು ಮೊದಲ ಪೌರಾಣಿಕಾ ಸಿನಿಮಾ ಆಗಿದೆ ಅಂದ್ರು.

ಇನ್ನು ಕಾಸ್ಟೂಮ್ಸ್ ನ ಬಗ್ಗೆ ಮಾತನಾಡಿದ ದರ್ಶನ್, ನಾನು 50 ರಿಂದ 60 ಕೆ.ಜಿ ತೂಕದ ಕಾಸ್ಟೂಮ್ಸ್ ಹಾಕುತ್ತಿದ್ದೇನೆ. ಇದರಿಂದ ನನ್ನ ತೂಕ ಹೆಚ್ಚಾಗುತ್ತಿದ್ದು, ಮತ್ತೆ ಕಡಿಮೆಯಾಗುತ್ತಿದೆ. ಕುರುಕ್ಷೇತ್ರ ಒಂದು ಒಳ್ಳೆಯ ಸಿನಿಮಾ ಆಗುತ್ತದೆ ಹಾಗೂ ಈಗಿನ ಕಾಲದ ಮಕ್ಕಳಿಗೆ ಮಹಾಭಾರತದ ಬಗ್ಗೆ ಅದರಲ್ಲೂ ಕುರುಕ್ಷೇತ್ರದ ಬಗ್ಗೆ ತಿಳಿದುಕೊಳ್ಳುತ್ತಾರೆ ಎಂದು ದುರ್ಯೋಧನ ಪಾತ್ರ ನಿರ್ವಹಿಸುತ್ತಿರೋ ದರ್ಶನ್ ತಿಳಿಸಿದ್ದಾರೆ.

ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಡೈಲಾಗ್ ಕಿಂಗ್ ಸಾಯಿಕುಮಾರ್, ಶಶಿಕುಮಾರ್, ಆರ್ಮುಗಂ ಖ್ಯಾತಿಯ ರವಿಶಂಕರ್, ಶ್ರೀನಿವಾಸ್ ಮೂರ್ತಿ, ಸೋನು ಸೂದ್ ಹಾಗೂ ಪ್ರಣಯ ರಾಜ ಶ್ರೀನಾಥ್ ಕಾಣಿಸಿಕೊಳ್ಳಲಿದ್ದಾರೆ. ನೀರ್ ದೋಸೆ ಬೆಡಗಿ ಹರಿಪ್ರಿಯಾ, ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಪವಿತ್ರಾ ಲೋಕೇಶ್ ಕೂಡ ಈ `ಕುರುಕ್ಷೇತ್ರ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

https://youtu.be/LZgauZ2OOaM

https://www.youtube.com/watch?v=K_B9Pw7SXRM


 

Share This Article
Leave a Comment

Leave a Reply

Your email address will not be published. Required fields are marked *