‘ಪದ್ಮಾವತಿ’ಯ 26 ಸೀನ್‍ಗಳಿಗೆ ಕಟ್- ಬದಲಾಯ್ತು ಸಿನಿಮಾ ಟೈಟಲ್

Public TV
2 Min Read

ಮುಂಬೈ: ಸಿನಿಮಾ ಸೆಟ್ಟೇರುತ್ತಲೇ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಹಲವು ಮಾರ್ಪಾಡುಗಳನ್ನ ಮಾಡುವಂತೆ ಸೆನ್ಸಾರ್ ಬೋರ್ಡ್ ಸೂಚಿಸಿದೆ.

ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್(ಸಿಬಿಎಫ್‍ಸಿ) ನಿಂದ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಗಲಿದೆ. ಸಿನಿಮಾದಲ್ಲಿನ ಬರೋಬ್ಬರಿ 26 ದೃಶ್ಯಗಳಿನ್ನ ತೆಗೆಯುವಂತೆ ಹೇಳಿದ್ದು, ಚಿತ್ರದ ಹೆಸರನ್ನು ‘ಪದ್ಮಾವತ್’ ಎಂದು ಬದಲಿಸಲು ಸೂಚಿಸಲಾಗಿದೆ.

ಸೆನ್ಸಾರ್ ಮಂಡಳಿಯು ಚಿತ್ರ ನಿರ್ಮಾಣಗಾರರು ಮತ್ತು ಸಮಾಜ ಎರಡನ್ನೂ ಗಮನದಲ್ಲಿರಿಸಿಕೊಂಡು ಚಿತ್ರದ ಬಗ್ಗೆ ಈ ನಿರ್ಧಾರ ತಿಳಿಸಿದೆ. ಚಿತ್ರದ ಬಗೆಗಿನ ಗೊಂದಲ, ಸಂಕೀರ್ಣತೆ ಮತ್ತು ಕಳವಳವನ್ನು ಪರಿಗಣಿಸಿ ಅಂತಿಮ ನಿರ್ಣಯ ಕೈಗೊಳ್ಳಲು ವಿಶೇಷ ತಂಡದ ಅಗತ್ಯವಿದೆ ಎಂದು ಸೆನ್ಸಾರ್ ಬೋರ್ಡ್ ಅಭಿಪ್ರಾಯಿಸಿತ್ತು.

ಹೀಗಾಗಿ ಸೆನ್ಸಾರ್ ಬೋರ್ಡ್‍ನಿಂದ ರಚಿಸಲಾದ ವಿಶೇಷ ತಂಡದಿಂದ ಚಿತ್ರವನ್ನ ವಿಮರ್ಶಿಸಲಾಗಿದೆ. ಸಿನಿಮಾ ಐತಿಹಾಸಿಕ ಕಥೆಯನ್ನು ಆಧರಿಸಿರುವುದರಿಂದ ತಂಡದಲ್ಲಿ ಇತಿಹಾಸಕಾರರು ಕೂಡ ಇದ್ದರು.

ಉದಯಪುರ್ ಮೂಲದ ಅರವಿಂದ್ ಸಿಂಗ್, ಜೈಪುರ ವಿಶ್ವವಿದ್ಯಾಲಯದ ಪ್ರೊಫೆಸರ್ ಗಳಾದ ಕೆಕೆ ಸಿಂಗ್ ಮತ್ತು ಡಾ.ಚಂದ್ರಮಣಿ ಸಿಂಗ್ ವಿಶೇಷ ತಂಡದಲ್ಲಿ ಇದ್ದರು. ಸದಸ್ಯರು ಐತಿಹಾಸಿಕ ಘಟನೆಗಳು, ದೇಶದ ಸಾಮಾಜಿಕ-ಸಾಂಸ್ಕೃತಿಕ ಅಂಶಗಳ ಬಗ್ಗೆ ಜ್ಞಾನ ಹೊಂದಿದ ವ್ಯಕ್ತಿಗಳಾಗಿದ್ದು, ಕಥೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ರು ಎಂದು ಸೆನ್ಸಾರ್ ಬೋರ್ಡ್ ತಿಳಿಸಿದೆ.

ಪದ್ಮಾವತಿ 190 ಕೋಟಿ ರೂ. ಬಜೆಟ್‍ನ ಸಿನಿಮಾವಾಗಿದ್ದು, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಮೂಡಿ ಬಂದಿದೆ. ಆದ್ರೆ ಸಿನಿಮಾದಲ್ಲಿ ಇತಿಹಾಸವನ್ನ ತಿರುಚಲಾಗಿದೆ ಎಂದು ಆರೋಪಿಸಿ ಸಿನಿಮಾ ಬಿಡುಗಡೆಗೆ ರಾಜಸ್ಥಾನದ ಕರ್ಣಿ ಸೇನಾ ಸಾಕಷ್ಟು ವಿರೋಧವನ್ನು ವ್ಯಕ್ತಪಡಿಸಿತ್ತು. ಚಿತ್ರದ ನಿರ್ದೇಶಕರು ಇತಿಹಾಸವನ್ನು ತಿರುಚಿ ರಜಪೂತ ಸಮುದಾಯಕ್ಕೆ ಅಗೌರವ ತೋರಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಕರ್ಣಿ ಸೇನಾಕ್ಕೆ ಹಲವು ರಾಜಕೀಯ ನಾಯಕರು ಕೂಡ ಬೆಂಬಲ ನೀಡಿದ್ದರು.

ಚಿತ್ರದಲ್ಲಿ ಮುಸ್ಲಿಂ ದೊರೆ ಅಲ್ಲಾವುದ್ದೀನ್ ಖಿಲ್ಜಿ ಮತ್ತು ರಾಣಿ ಪದ್ಮಿನಿ ನಡುವೆ ರೊಮ್ಯಾಂಟಿಕ್ ಸೀನ್ ಗಳಿವೆ ಅಂತಾ ಕರ್ಣಿ ಸೇನಾ ಆರೋಪಿಸಿತ್ತು. ಎಲ್ಲವು ಅಂದುಕೊಂಡಂತೆ ಆಗಿದ್ದರೆ ಚಿತ್ರ ಡಿಸೆಂಬರ್ 01ರಂದು ತೆರೆ ಕಾಣಬೇಕಿತ್ತು. ಆದ್ರೆ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಬಿಡುಗಡೆಯನ್ನ ಮುಂದೂಡಲಾಗಿದೆ.

ಚಿತ್ರದಲ್ಲಿ ರಾಣಿ ಪದ್ಮಿನಿಯಾಗಿ ಗುಳಿ ಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ರಾಣಾ ರಾವಲ್ ರತನ್‍ಸಿಂಗ್ ಪಾತ್ರದಲ್ಲಿ ಶಾಹಿದ್ ಕಪೂರ್ ಮತ್ತು ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣ್‍ವೀರ್ ಸಿಂಗ್ ಬಣ್ಣ ಹಚ್ಚಿದ್ದಾರೆ. ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಇದೂವರೆಗೂ ಅಂತಿಮಗೊಳಿಸಿಲ್ಲ.

Share This Article
Leave a Comment

Leave a Reply

Your email address will not be published. Required fields are marked *