ರಾಜಕಾರಣಿಗಳು ಬಚ್ಚಲು ಮನೆ ಇದ್ದಂತೆ: ಅನಂತ್ ಕುಮಾರ್ ಹೆಗ್ಡೆ

Public TV
3 Min Read

ಬೆಂಗಳೂರು: ರಾಜಕಾರಣಿಗಳು ದೇವರ ಮನೆಗೆ ಹೋಲಿಕೆ ಇಲ್ಲ. ರಾಜಕಾರಣಿಗಳು ಬಚ್ಚಲು ಮನೆ ಇದ್ದಂತೆ ಎಂದು ಕೇಂದ್ರ ಕೌಶಾಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯವರ ಹುಟ್ಟಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಟಾಟಾ ಇನ್ಸ್ ಟ್ಯೂಟ್ ಅಡಿಟೋರಿಯಂನಲ್ಲಿ ಮಲ್ಲೇಶ್ವರಂ ಶಾಸಕ ಡಾ.ಅಶ್ವಥ್ ನಾರಾಯಣ ನೇತೃತ್ವದಲ್ಲಿ ಗುಡ್ ಗರ್ವನರ್ಸ್ ಡೇ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿ ಮಾತನಾಡಿದರು.

ದೇವರ ಮನೆ ಒಂದು ದಿನ ಸ್ವಚ್ಛ ಮಾಡಿದರೂ ಪರವಾಗಿಲ್ಲ. ಆದರೆ ಬಚ್ಚಲು ಮನೆ ಕ್ಲೀನ್ ಮಾಡದೇ ಇದ್ರೆ ಏನಾಗುತ್ತೆ ಹೇಳಿ? ಹಾಗೇ ಇಂದಿನ ರಾಜಕಾರಣಿಗಳು ಆಗಿದ್ದಾರೆ. ನಮ್ಮ ಸರ್ಟಿಫಿಕೇಟ್‍ಗಳಿಂದ ಸಂಸ್ಕಾರ ಬಂದಿಲ್ಲ. ತಂದೆ-ತಾಯಿಗಳಿಂದ ನಮಗೆ ಸಂಸ್ಕಾರ ಬಂದಿದೆ ಎಂದು ಹೇಳಿದರು.

ಒಳ್ಳೆಯ ಆಡಳಿತ ಹೇಗಿರಬೇಕು ಅಂತ ಹೇಳಿಕೊಟ್ಟವರು ವಾಜಪೇಯಿಯವರು. ಆರೋಗ್ಯ ಸರಿಯಿಲ್ಲದಿದ್ದರೂ ದೇಶ ಹೇಗೆ ನಡೆಯುತ್ತಿದೆ ಅಂತ ಕೇಳುತ್ತಿರುತ್ತಾರೆ. ಪ್ರಜಾಪ್ರಭುತ್ವದಲ್ಲಿ ಓಟು ಪಡೆದವರಿಗೆ ಎಷ್ಟು ಜವಾಬ್ದಾರಿ ಇದೆಯೋ ಅಷ್ಟೇ ಜವಾಬ್ದಾರಿ ಓಟ್ ಹಾಕಿದವನಿಗೂ ಇರುತ್ತದೆ ಎಂದರು.

ಆಡಳಿತ ಅಂದ್ರೆ ಅದು ಮೋದಿಯವರ ಆಡಳಿತದಂತೆ ಇರಬೇಕು. ಇಡೀ ವಿಶ್ವವೇ ತಲೆಬಾಗುವ ಆಡಳಿತ ನೀಡುತ್ತಿರುವುದು ನರೇಂದ್ರ ಮೋದಿಯವರು. ಇವತ್ತು ಮೋದಿ ಬಗ್ಗಿದ್ರೆ ವಿಶ್ವದ ನಾಯಕರು ಬಗ್ಗುತ್ತಾರೆ. ಎದ್ರೆ ವಿಶ್ವದ ನಾಯಕರು ಏಳುತ್ತಾರೆ. ಯೋಗವನ್ನು ವಿಶ್ವಕ್ಕೆ ಹರಡಿಸಿದವರು ನರೇಂದ್ರ ಮೋದಿ. ಇದು ಉತ್ತಮ ಆಡಳಿತಕ್ಕೆ ಉದಾಹರಣೆ ಎಂದರು.

ಪ್ರಧಾನಿ ಮೋದಿ ಟೀಕೆ ಮಾಡಿದವರಿಗೆ ಹೆಗ್ಡೆ ಟಾಂಗ್ ಕೊಟ್ಟ ಸಚಿವರು, ಪ್ರತಿಯೊಂದಕ್ಕೂ ಇಂದಿನ ಪ್ರಧಾನಿ ಲೆಕ್ಕ ನೀಡುತ್ತಿದ್ದಾರೆ. ಹಿಂದಿನ ಸರ್ಕಾರಗಳು ಯಾವತ್ತಾದ್ರು ಲೆಕ್ಕ ಕೊಟ್ಟಿದ್ದವಾ? ಜನರ ಪ್ರತಿಯೊಂದು ಹಣಕ್ಕೂ ಮೋದಿಯವರು ಲೆಕ್ಕ ಕೊಡುತ್ತಿದ್ದಾರೆ. ಗ್ಯಾಸ್ ಸಬ್ಸಿಡಿ ಹಣದಿಂದ ಹಳ್ಳಿ ಬಡವರಿಗೆ ಗ್ಯಾಸ್ ನೀಡುತ್ತಿದ್ದಾರೆ. ಪ್ರತಿಯೊಂದಕ್ಕೂ ಲೆಕ್ಕ ನೀಡುತ್ತಿರೋರು ಮೋದಿ. ನಮ್ಮದು ಏನಿದ್ರು ಮಾಡು ಇಲ್ಲವೇ ಮಡಿ ಸಿದ್ಧಾಂತ ಎಂದರು.

ಅಭಿವೃದ್ಧಿ ಮಾಡಬೇಕು ಎಂದು ಹೇಳುತ್ತೇವೆ. ಆದರೆ ಹೇಗೆ ಅಭಿವೃದ್ಧಿ ಮಾಡಬೇಕು ಎನ್ನುವುದು ಗೊತ್ತಿಲ್ಲ. ಸೋಗಲಾಡಿ ವಿಷಯಗಳನ್ನು ಇಟ್ಟುಕೊಂಡು ಇಂದು ಚರ್ಚೆ ಮಾಡಲಾಗುತ್ತಿದೆ. ದುಡ್ಡು-ಜಾತಿ ನೋಡಿ ಇವತ್ತು ಓಟ್ ನೀಡುತ್ತಿದ್ದಾರೆ. ಸರ್ಕಾರ ಕಾಮಗಾರಿಗಳನ್ನು ಕೊಡುವುದೇ ಅಭಿವೃದ್ಧಿ ಅಂದುಕೊಂಡವರು 100ಕ್ಕೆ 99 ಜನ ಇದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಅಪ್ಪ-ಅಮ್ಮನ ಗುರುತು ಇಲ್ಲದೇ ಇರೋ ರಕ್ತವನ್ನು ಹೊಂದಿರುವವರು ಜಾತ್ಯತೀತರು: ಅನಂತಕುಮಾರ ಹೆಗ್ಡೆ

ಕಾಮಗಾರಿಗಳನ್ನು ಇಟ್ಟುಕೊಂಡು ಚರ್ಚೆ ಮಾಡುವವರು ವಿಚಾರವಾದಿಗಳು. ಜಾತಿ, ದುಡ್ಡಿನ ಹೆಸರು ಹೇಳಿಕೊಂಡು ಗೆದ್ದು ಬಂದವರು ನಿಮ್ಮನ್ನ ಅಭಿವೃದ್ಧಿ ಮಾಡ್ತಾರೆ ಎನ್ನುವುದು ನಿಮ್ಮ ಮೂರ್ಖತನ. ಜಾತಿ, ಧರ್ಮ, ಹಣ ಬಿಟ್ಟು ಆಡಳಿತ ನಡೆಸುವವನು ನಿಜವಾಗಿ ಉತ್ತಮ ಆಡಳಿತ ನೀಡುತ್ತಾನೆ. ಈ ಕೆಲಸವನ್ನ ನರೇಂದ್ರ ಮೋದಿ ಮಾಡ್ತಿದ್ದಾರೆ. ಇಡೀ ವಿಶ್ವ ಪ್ರಧಾನಿ ಮೋದಿಯವರ ಕಾರ್ಯವೈಖರಿಗೆ ಗೌರವ ನೀಡುತ್ತಿದೆ ಎಂದು ಹೇಳಿದರು.

ನನಗೆ ಪ್ರಧಾನಿಯವರು ಕೌಶಲ್ಯಾಭಿವೃದ್ಧಿ ಇಲಾಖೆಯನ್ನು ನೀಡಿದ್ದಾರೆ. ಈ ಹೊಣೆ ನೀಡುವ ವೇಳೆ ನನಗೆ ಈ ಇಲಾಖೆ ಬಗ್ಗೆ ಗೊತ್ತಿರಲಿಲ್ಲ. ಆದರೆ ಜವಾಬ್ದಾರಿ ಸಿಕ್ಕಿದ ಮೇಲೆ ತಿಳಿದುಕೊಳ್ಳುತ್ತಾ ಹೋದಾಗ ನನಗೆ ನೀಡಿರುವ ಕೌಶಲ್ಯಾಭಿವೃದ್ಧಿ ಇಲಾಖೆ ನೀರಿಲ್ಲದ ಬಾವಿ ಇದ್ದ ಹಾಗೆ ಎನ್ನುವುದು ಅರಿವಿಗೆ ಬಂತು. ನಮ್ಮ ಯುವಕರು ಸರ್ಟಿಫಿಕೇಟ್ ಮಾತ್ರ ಸಂಪಾದಿಸುತ್ತಾರೆ. ಆದರೆ ಅದಕ್ಕೆ ತಕ್ಕ ಯೋಗ್ಯತೆಗಳು ಅವರಲ್ಲಿ ಇಲ್ಲ. ಶ್ರಮ ಇಲ್ಲದೇ ಇಂದಿನ ಯುವಕರು ದೊಡ್ಡ ಕನಸು ಕಾಣುತ್ತಿದ್ದಾರೆ. ಬದುಕಿನಲ್ಲಿ ಯಶಸ್ವಿಯಾದವರ ಬದುಕಿನ ಹಿಂದೆ ಪರಿಶ್ರಮ ಇರುತ್ತದೆ. ಬೆವರನ್ನು ಚೆಲ್ಲದೇ ಸಾಧನೆ ಸಾಧ್ಯವಿಲ್ಲ. ಬದುಕು ಲಾಟರಿ ಟಿಕೆಟ್ ಅಲ್ಲ. ಪರಿಶ್ರಮ ಇಲ್ಲದೆ ಬದುಕು ಕಟ್ಟಲು ಸಾಧ್ಯವಿಲ್ಲ. ಈ ಸ್ವಭಾವ ಯುವ ಜನತೆಯಲ್ಲಿ ಇಲ್ಲ ಎಂದರು. ಇದನ್ನೂ ಓದಿ: ತಪರಾಕಿ ಸಿದ್ದರಾಮಯ್ಯನವರೇ ಸಾಕಾ, ಬೇಕಾ?-ಸಿಎಂ ವಿರುದ್ಧ ಅನಂತ್ ಕುಮಾರ್ ಹೆಗಡೆ ಕಿಡಿ

ದೇಶದ ಬದಲಾವಣೆ ಪ್ರಾರಂಭವಾಗಿದೆ. 120 ಕೋಟಿ ಜನರ ಬದಲಾವಣೆ ದಿಢೀರ್ ಅಂತ ಸಾಧ್ಯವಿಲ್ಲ. ದಿನಕ್ಕೆ 18 ಗಂಟೆ ಕೆಲಸ ಮಾಡುವ ಪ್ರಧಾನಿಗಳು ಸಿಕ್ಕಿರೋದು ನಮ್ಮ ಪುಣ್ಯ ಎಂದು ಹೇಳಿ ಮೋದಿ ಕಾರ್ಯವನ್ನು ಹೊಗಳಿದರು.

ಪ್ರತಿಕ್ರಿಯೆ ನೀಡಲ್ಲ: ಅನಂತ್ ಕುಮಾರ್ ಹೆಗ್ಡೆ ನಾಲಾಯಕ್ ಮಂತ್ರಿ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ಕೇಳಲು ಮುಂದಾದಾಗ, ನಾನು ಯಾವುದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿ ಭಾಷಣ ಮುಗಿದ ಕೂಡಲೇ ಅವರು ತೆರಳಿದರು.

Share This Article
Leave a Comment

Leave a Reply

Your email address will not be published. Required fields are marked *