ಬೆಂಗಳೂರು: ಟೆಕ್ಕಿಯೊಬ್ಬರು ನಿಗೂಢವಾಗಿ ಕಣ್ಮರೆ ಆದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ನಡೆದಿದೆ.
ಕುಮಾರ್ ಅಜಿತಾಬ್ (30) ನಾಪತ್ತೆಯಾಗಿರೋ ಟೆಕ್ಕಿ. ಬಿಹಾರ ಮೂಲದ ಅಜಿತಾಬ್ ಬೆಳ್ಳಂದೂರಿನ ಬ್ರಿಟೀಷ್ ಟೆಲಿಕಾಂ ನಲ್ಲಿ ಐದು ವರ್ಷದಿಂದ ಕೆಲಸ ಮಾಡುತ್ತಿದ್ದರು. ತನ್ನ ಸಿಯಾಜ್ ಕಾರನ್ನು ಮಾರಲು ಟೆಕ್ಕಿ ಒಎಲ್ ಎಕ್ಸ್ ನಲ್ಲಿ ಪ್ರಕಟಿಸಿದ್ದರು.
ಸಿಯಾಜ್ ಕಾರನ್ನು ಮಾರಲು ಒಎಲ್ ಎಕ್ಸ್ ನಲ್ಲಿ ಪ್ರಕಟಿಸಿದ ಬಳಿಕ ಕುಮಾರ್ ಅಜಿತಾಬ್ ಕರೆ ಬಂದಾಗಲೆಲ್ಲ ಕಾರು ಸಮೇತ ಹೊರ ಹೋಗಿ ಬರುತ್ತಿದ್ದರು. ಹೀಗೆ ಡಿ. 18 ರಂದು ಕೂಡ ಮೊಬೈಲ್ ಗೆ ಕರೆ ಬಂದಿತ್ತು. ಎಂದಿನಂತೆಯೇ ಕುಮಾರ್ ಅಜಿತಬ್, ಕೆಎ 03 ಎನ್ಎ 1751 ನಂಬರಿನ ತನ್ನ ಸಿಯಾಜ್ ಕಾರಿನಲ್ಲಿ ಹೊರ ಹೋಗಿದ್ದರು. ದುರಂತ ಅಂದ್ರೆ ಈವರೆಗೂ ಅವರು ಮನೆಗೆ ವಾಪಸ್ಸಾಗಲಿಲ್ಲ.
ಒಎಲ್ ಎಕ್ಸ್ ಜಾಹೀರಾತು ನೋಡಿ ಅಜಿತಾಬ್ ಅವರನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ ಎಂದು ಕುಟುಂಬದವರು ಸಂಶಯ ವ್ಯಕ್ತಪಡಿಸಿದ್ದಾರೆ. ಸದ್ಯ ಅಜಿತಾಬ್ ನಾಪತ್ತೆ ಕುರಿತು ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.