60 ಪ್ರಯಾಣಿಕರ ಪ್ರಾಣ ಉಳಿಸಿದ್ದ ಚಾಲಕನಿಗೆ ಸಿಕ್ತು ಚಿನ್ನದ ಪದಕ!

Public TV
2 Min Read

ಚಾಮರಾಜನಗರ: ಚಾಲಕನ ಸಮಯ ಪ್ರಜ್ಞೆಯಿಂದಾಗಿ ಪ್ರಪಾತಕ್ಕೆ ಬೀಳಬೇಕಾಗಿದ್ದ ಬಸ್ ಮತ್ತು ಅದರಲ್ಲಿದ್ದ 60 ಮಂದಿ ಪ್ರಯಾಣಿಕರ ಪ್ರಾಣ ಉಳಿಸಿದ್ದ ಚಾಲಕನಿಗೆ ಚಿನ್ನದ ಪದಕ ಸಿಕ್ಕಿದೆ.

ಅಕ್ಟೋಬರ್ 8 ರಂದು ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಹಾದಿಯಲ್ಲಿ ಈ ಘಟನೆ ನಡೆದಿತ್ತು. ಅಂದು ಚಾಲಕ ಚಿನ್ನಸ್ವಾಮಿ ಅವರ ಸಮಯ ಪ್ರಜ್ಞೆಯಿಂದ 60 ಪ್ರಯಾಣಿಕರ ಪ್ರಾಣ ಉಳಿಸಿದ್ದರು. ಆದ್ದರಿಂದ ಮಂಗಳವಾರ ಅವರಿಗೆ ಕೆಎಸ್‍ಆರ್‍ಟಿಸಿ ಇಲಾಖೆ ಚಿನ್ನದ ಪದಕವನ್ನು ನೀಡಿದೆ.

ಇಲಾಖೆಯ ನಿಯಮದ ಪ್ರಕಾರ, ಗ್ರಾಮೀಣ ಪ್ರದೇಶದಲ್ಲಿ 15 ವರ್ಷ ಹಾಗೂ ನಗರ ಪ್ರದೇಶದಲ್ಲಿ 5 ವರ್ಷ ಯಾವುದೇ ಅಪಾಯ ಸಂಭವಿಸಿದೆ ಬಸ್ ಚಲಾಯಿಸಿದ್ದರೆ ಮಾತ್ರ ಅಂತಹವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಆದರೆ ಚಿನ್ನಸ್ವಾಮಿ ಕೇವಲ 5 ವರ್ಷ ಚಾಲಕರಾಗಿ ಕಾರ್ಯನಿರ್ವಹಿಸಿದ್ದರು. ಆದರೆ 60 ಜನರ ಪ್ರಾಣ ಉಳಿಸಿದ್ದರಿಂದ ಅವರ ಸಾಧನೆಯನ್ನು ಗುರುತಿಸಿ ಈಗ ಚಿನ್ನದ ಪದಕವನ್ನು ಕೊಟ್ಟು ಗೌರವಿಸಲಾಗಿದೆ.

ನಾನು ಅಂದು ಬ್ರೇಕ್ ಫೇಲ್ ಆಗಿದ್ದಾಗ ಪ್ರಯಾಣಿಕರು ಭಯ ಪಡುತ್ತಾರೆ ಎಂದು ಹೇಳಿರಲಿಲ್ಲ. ನಾನೇ ಬಸ್ ನಿಲ್ಲಿಸಲು ನಿರ್ಧಾರ ಮಾಡಿ ನಿಧಾನವಾಗಿ ಬಸ್ ಚಲಾಯಿಸಿ ಹ್ಯಾಂಡ್‍ಬ್ರೇಕ್ ಹಾಕಿ ಕಬ್ಬಿಣದ ತಡೆಗೋಡೆಗೆ ತಂದು ನಿಲ್ಲಿಸಿದೆ. ಬಳಿಕ ಎಲ್ಲರನ್ನು ನಿಧಾನವಾಗಿ ಬಸ್‍ನಿಂದ ಕೆಳಗಿಳಿಸಿದೆ ಎಂದು ಚಾಲಕ ಚಿನ್ನಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಇಲಾಖೆ ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ನನಗೆ ಚಿನ್ನದ ಪದಕ ನೀಡಿದೆ. ಇದರಿಂದ ನನಗೆ ತುಂಬಾ ಸಂತೋಷವಾಗಿದೆ. ನನ್ನ ಕೆಲಸವನ್ನು ಮುಂದುವರಿಸಲು ನನಗೆ ಪ್ರೋತ್ಸಾಹ ನೀಡಿದ್ದಾರೆ ಎಂದು ಅವರು ಹೇಳಿದರು.

ನಡೆದಿದ್ದೇನು?
ಅಕ್ಟೋಬರ್ 8 ರಂದು ಗುಂಡ್ಲುಪೇಟೆಯಿಂದ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಜಾತ್ರೆಗಾಗಿ ಕೆಎಸ್‍ಆರ್ ಟಿಸಿ ಬಸ್ ತೆರಳುತಿತ್ತು. ಆದರೆ ಬೆಟ್ಟದಿಂದ ವಾಪಸ್ ಬರುವಾಗ ಬಸ್‍ನ ಬ್ರೇಕ್ ಫೇಲ್ ಆಗಿದ್ದರಿಂದ ಪ್ರಪಾತಕ್ಕೆ ಬೀಳುವ ಹಂತದಲ್ಲಿತ್ತು. ಆದರೆ ಈ ಸಂದರ್ಭದಲ್ಲಿ ಬಸ್ ಚಾಲಕ ಚಿನ್ನಸ್ವಾಮಿ ಸಮಯ ಪ್ರಜ್ಞೆಯಿಂದ ಬಸ್ಸನ್ನು ಯಾವುದೇ ರೀತಿಯಲ್ಲಿ ಅಪಾಯವಿಲ್ಲದಂತೆ ಕಬ್ಬಿಣದ ತಡೆಗೋಡೆಗೆ ತಂದು ನಿಲ್ಲಿಸಿ ಎಲ್ಲಾ ಪ್ರಯಾಣಿಕರ ಪ್ರಾಣ ಉಳಿಸಿದ್ದರು.

ಚಿನ್ನಸ್ವಾಮಿ ಅವರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಕೆಟ್ಟ ರಸ್ತೆಯಿಂದಾಗಿ ಈ ಅಪಘಾತ ಸಂಭವಿಸಿದೆ. ದೊಡ್ಡ ಬಸ್ ಗಳು ಈ ರಸ್ತೆಯಲ್ಲಿ ಸಂಚರಿಸುವುದು ಕಷ್ಟ ಹೀಗಾಗಿ ಮುಂದೆ ಗುಂಡ್ಲುಪೇಟೆ ಮತ್ತು ಹಿಮವದ್ ಗೋಪಾಲಸ್ವಾಮಿ ಬೆಟ್ಟದ ನಡುವೆ ಕೇವಲ ಮಿನಿ ಬಸ್ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗುವುದು ಎಂದು ಕೆಎಸ್‍ಆರ್ ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *