ರೆಬೆಲ್ ಅಂಬಿ ಸುಪುತ್ರನಿಗೆ ಭಾರೀ ಡಿಮ್ಯಾಂಡ್- ಮುಂದಿನ ವರ್ಷ ಶುರು ಅಭಿಷೇಕ್ ಸಿನಿ ಸೌಂಡ್!

Public TV
2 Min Read

ಬೆಂಗಳೂರು: ಅದೊಂದು ಕಾಲವಿತ್ತು. ತಿಂಗಳಿಗೆ ಎರಡೆರಡು ಅಂಬರೀಶ್ ಸಿನಿಮಾಗಳು ರಿಲೀಸ್ ಅಗುತ್ತಿದ್ದವು. ಆ ಎರಡೂ ಚಿತ್ರಗಳು ಸೂಪರ್ ಹಿಟ್ ಆಗುತ್ತಿದ್ದವು. ಅದು ರೆಬೆಲ್ ಸ್ಟಾರ್ ಗಿದ್ದ ಅಭಿಮಾನಿಗಳ ಪ್ರೀತಿ. ಈಗ ಅದೇ ಪ್ರೀತಿಯನ್ನು ಪಡೆಯಲು ರೆಡಿಯಾಗುತ್ತಿದ್ದಾರೆ ಅಂಬಿಯ ಏಕೈಕ ಮಗ ಅಭಿಷೇಕ್.

ಹೌದು. ಇನ್ನು ಕೆಲವು ವರ್ಷಗಳಲ್ಲಿ ಅಭಿಷೇಕ್ ಹೀರೋ ಆಗಿ ಎಂಟ್ರಿ ಕೊಡುವುದು ಖಚಿತವಾಗಿದೆ. ದೊಡ್ಡ ದೊಡ್ಡ ನಿರ್ಮಾಪಕರು ಅಂಬಿ ಮನೆ ಮುಂದೆ ಜೂನಿಯರ್ ರೆಬೆಲ್ ಸ್ಟಾರ್ ಕಾಲ್ ಶಿಟ್ ಗಾಗಿ ಕಾದು ಕುಳಿತ್ತಿದ್ದಾರೆ.


ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುಮಲತಾ ದಂಪತಿ ಪ್ರೀತಿಯ ಪುತ್ರನಾದ ಅಭಿ, ಬಣ್ಣದ ಲೋಕದಲ್ಲಿ ಕಾಣಿಸಿಕೊಂಡಿದ್ದು ತುಂಬಾನೇ ಕಮ್ಮಿ. ಕೆಲವು ಸಿನಿಮಾ ಪಾರ್ಟಿಗಳಲ್ಲಿ ಅಪ್ಪ ಅಮ್ಮನ ಜೊತೆ ಪೋಸ್ ಕೊಟ್ಟಿದ್ದು ಬಿಟ್ಟರೆ ಗಾಂಧಿನಗರದಿಂದ ಈ ಹುಡುಗ ಬಲು ದೂರ ದೂರ. ಅಂಬಿ ಮಗನೂ ಹೀರೋ ಆಗುತ್ತಾನಾ ಎನ್ನುವ ಪ್ರಶ್ನೆ ಅಗಾಗ ಕೇಳುತ್ತಿದ್ದವು. ಈಗ ಆ ಪ್ರೆಶ್ನೆಗೆ ಸರಿಯಾದ ಉತ್ತರ ಸಿಗುವ ಕಾಲ ಸನಿಹವಾಗಿದೆ.

ಕಥೆ-ಚಿತ್ರಕಥೆ ರೆಡಿ ಮಾಡಿಕೊಳ್ಳದೆಯೇ, ನಿರ್ದೇಶಕ ಯಾರೆಂಬುದನ್ನು ಕನ್ಫರ್ಮ್ ಮಾಡಿಕೊಳ್ಳದೆಯೇ ಪ್ರೋಡ್ಯೂಸರ್ ಗಳು ಅಂಬಿ ಪುತ್ರ ಅಭಿಷೇಕ್ ಗಾಗಿ ಬಲೆ ಬೀಸಿದ್ದಾರೆ. ಸರ್ ನಿಮ್ಮ ಮಗನ್ನ ನಮ್ಮ ಬ್ಯಾನರ್‍ನಲ್ಲಿ ಇಂಟ್ರೊಡ್ಯೂಸ್ ಮಾಡಿ. ಗ್ರ್ಯಾಂಡ್ ಆಗಿ ಲಾಂಚ್ ಮಾಡ್ತೇವೆ ಎಂದು ಬೇಡಿಕೆ ಇಡುತ್ತಿದ್ದಾರಂತೆ. ಗಾಂಧಿನಗರ ಆಫ್ ದಿ ರೆರ್ಕಾಡ್ ಸಮಾಚಾರವೇನಂದ್ರೆ ಖ್ಯಾತ ನಿರ್ಮಾಪಕ ಸಂದೇಶ್ ನಾಗರಾಜ್ ನಿರ್ಮಾಣದ ಸಿನಿಮಾದಲ್ಲಿ ಅಭಿಷೇಕ್ ನಟಿಸುತ್ತಾರೆ ಅನ್ನೊ ಸುದ್ದಿ.

ಪ್ರಿನ್ಸ್, ಐರಾವತ ಸೇರಿದಂತೆ ಅನೇಕ ಅದ್ಧೂರಿ ಸಿನಿಮಾಗಳನ್ನ ನಿರ್ಮಾಣ ಮಾಡಿರುವ ಸಂದೇಶ್ ನಾಗರಾಜ್, ಅಭಿಷೇಕ್‍ಗಾಗಿ ಸಿನಿಮಾ ಮಾಡಲಿದ್ದಾರಂತೆ. ಅಂಬರೀಶ್ ಜೊತೆ ಒಂದು ಸುತ್ತಿನ ಮಾತುತೆಯನ್ನೂ ಕೂಡ ಸಂದೇಶ್ ನಾಗರಾಜ್ ಮಾಡಿದ್ದಾರಂತೆ. ಇಂತದೊಂದು ಸಮಾಚಾರ ಸದ್ಯ ಗಾಂಧಿನಗರದ ತುಂಬಾ ಸದ್ದು ಮಾಡುತ್ತಿದೆ. ಅಭಿಷೇಕ್ ಅವರ ಮೊದಲ ಸಿನಿಮಾ ನಿರ್ದೇಶನದ ಜವಾಬ್ದಾರಿಯನ್ನು ಖ್ಯಾತ ನಿರ್ದೇಶಕರಾದ ಪವನ್ ಒಡೆಯರ್ ಅಥವಾ ಚೇತನ್ ಕುಮಾರ್ ವಹಿಸಿಕೊಳ್ಳುವ ಸಾಧ್ಯತೆ ಇದ್ದು, ಬರುವ ಜನವರಿ ತಿಂಗಳು ಈ ಸಿನಿಮಾ ಸೆಟ್ಟೇರಲಿದೆ ಎನ್ನಲಾಗುತ್ತಿದೆ.

ಇಂತಹ ಸುದ್ದಿ ಹಬ್ಬಿರುವಾಗಲೇ ಅಭಿಷೇಕ್ ಜಿಮ್‍ನಲ್ಲಿ ಮತ್ತು ಮಾರ್ಷಲ್ ಆರ್ಟ್‍ನಲ್ಲಿ ಕಸರತ್ತು ಮಾಡುತ್ತಿರುವ ಕೆಲ ಫೋಟೋಗಳು ವೈರಲ್ ಆಗಿವೆ. ಈ ಫೋಟೋ ನೋಡಿದ ಮಂದಿ ಓಹೋ ಅಭಿಷೇಕ್ ಸಿನಿಮಾಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಒಟ್ಟಾರೆಯಾಗಿ ರೆಬೆಲ್ ಸ್ಟಾರ್ ಅಭಿಮಾನಿಗಳಿಗೆ ಹಾಗೂ ಅಂಬಿ ಸ್ನೇಹದ ಕಡಲಲ್ಲಿ ತೇಲಾಡುತ್ತಿರುವ ಸ್ನೇಹಿತರಿಗೆ ಅಭಿಷೇಕ್ ಸಿನಿಮಾ ರಂಗಕ್ಕೆ ಬರುತ್ತಿರುವ ಸಮಾಚಾರ ಮಂಡ್ಯದ ಸಿಹಿ ಬೆಲ್ಲ ಸವಿದಂತಾಗುತ್ತಿದೆ. ಆದಷ್ಟು ಬೇಗ ಅಭಿಷೇಕ್ ಚಿತ್ರರಂಗಕ್ಕೆ ಬರಲಿ, ಅಂಬಿಯಂತೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಲಿ ಅನ್ನೊದೆ ಕೋಟಿ ಕೋಟಿ ಅಭಿಮಾನಿಗಳ ಆಶಯ.

Share This Article
Leave a Comment

Leave a Reply

Your email address will not be published. Required fields are marked *