ಇದೊಂದು ಸಣ್ಣ ಪರೀಕ್ಷೆ ಅಷ್ಟೆ. ಅದರಲ್ಲಿ ಗೆದ್ದು ಬರುವಿರೆಂಬ ನಂಬಿಕೆ ನನಗಿದೆ: ಯಶೋಮತಿ

Public TV
2 Min Read

ಬೆಂಗಳೂರು: ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಕೊಟ್ಟ ಪ್ರಕರಣದಲ್ಲಿ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಜೈಲುಪಾಲಾಗಿದ್ದಾರೆ. ಒಂದನೇ ಎಸಿಎಂಎಂ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಪ್ರಕಟಿಸಿದೆ.

ರವಿ ಬೆಳಗೆರೆ ಜೈಲುಪಾಲದ ಬೆನ್ನಲ್ಲೇ ಅವರ ಪತ್ನಿ ಯಶೋಮತಿ ಸಾರಂಗಿ ಸಂಜೆ 6.54ಕ್ಕೆ ಫೇಸ್‍ಬುಕ್ ನಲ್ಲಿ ಸಣ್ಣ ಬರಹ ಪ್ರಕಟಿಸಿದ್ದಾರೆ. ಇದೊಂದು ಸಣ್ಣ ಪರೀಕ್ಷೆ ಅಷ್ಟೇ ಅದರಲ್ಲಿ ಗೆದ್ದು ಬರುವಿರೆಂಬ ನಂಬಿಕೆ ನನಗಿದೆ ಎಂದು ಕೊನೆಯಲ್ಲಿ ಬರೆದು ಈ ಬರಹವನ್ನು ಅವರು ಪೂರ್ಣಗೊಳಿಸಿದ್ದಾರೆ.

ಯಶೋಮತಿ ಅವರ ಎಫ್‍ಬಿ ಪೋಸ್ಟ್ ನ ಯಥಾವತ್ ಬರಹ ಇಲ್ಲಿದೆ:
ಮೊನ್ನೆ ತಾನೇ ನಡೆದ ಹಿಮನ ಬರ್ತ್ ಡೇಯ ಫೊಟೋಗಳನ್ನು ನೋಡುತ್ತಾ ಕುಳಿತಿದ್ದೆ. ಅದರಲ್ಲಿ ಕೆಲವನ್ನು ಸೆಲೆಕ್ಟ್ ಮಾಡಿ ರವಿಗೆ ಕಳಿಸಬೇಕು ಅಂದುಕೊಳ್ಳುವಷ್ಟರಲ್ಲಿ…“ಯಶೂ ಮಾ ಎಲ್ಲಿದ್ದೀರ? ಒಂದು ಸ್ವಲ್ಪ ಟಿವಿ ನೋಡಿ” ಅಂದ ಕೂಡಲೇ ಅದನ್ನು ಅಲ್ಲೇ ಬಿಟ್ಟು ಟಿವಿ ಆನ್ ಮಾಡಿದವಳ ಕಿವಿಗೆ ಮೊದಲು ರಾಚಿದ್ದೇ ನನ್ನ ಹೆಸರು… ಏನಾಗ್ತಿದೆ? ನನ್ನ ಹೆಸರು ಯಾಕೆ ಬರ್ತಿದೆ ಅದೂ ನಂಗೇ ಗೊತ್ತಿಲ್ಲದೇ…. ಹಿಮ ಬೇರೆ ಸ್ಕೂಲಿಂದ ಬರುವ ಹೊತ್ತಾಗಿತ್ತು. ಮೊದಲು ಓಡಿ ಹೋಗಿ ಅವನನ್ನು ಕರೆದುಕೊಂಡು ಬಂದೆ. ಇದನ್ನೂ ಓದಿ: ಬೆಳಗೆರೆ ವಿರುದ್ಧ ಸಿಸಿಬಿ ಪೊಲೀಸರು ಸಲ್ಲಿಸಿದ್ದ ಜಾಮೀನು ಆಕ್ಷೇಪಣೆಯಲ್ಲಿ ಏನಿದೆ ಗೊತ್ತಾ?

ರಾತ್ರಿಯಿಡೀ ಒಂದೇ ಸಮನೆ ಟಿವಿಗಳಲ್ಲಿ ಬಿತ್ತರವಾಗುತ್ತಿದ್ದ ಸುದ್ದಿಗಳು ಕಿವಿಗೆ ಕಾದ ಸೀಸದಂತೆ ಬೀಳುತ್ತಿದ್ದವು. ಕಚೇರಿಯಲ್ಲಿ ಫೋನುಗಳೆಲ್ಲ ಪೊಲೀಸರ ವಶದಲ್ಲಿದ್ದವು. ಹಾಗಾಗಿ ಎಲ್ಲಿಂದಲೂ ಉತ್ತರ ಸಿಗುತ್ತಿಲ್ಲ. ಸರಿ ಆದದ್ದಾಗಲಿ ನೋಡೋಣ ಭಗವಂತನೊಬ್ಬನಿದ್ದಾನೆ ಅಂದು ಧೈರ್ಯವಾಗಿ ಕುಳಿತವಳಿಗೆ ಅಮ್ಮ, ತಂಗಿ, ಅಣ್ಣನ ಮಗನ ಜೊತೆಗೆ ಗೆಳತಿಯರ ಧೈರ್ಯ ತುಂಬುವ ಮೆಸೇಜುಗಳು ಜೊತೆಯಾದವು.

ಅಮ್ಮಾ ಯಾವುದಕ್ಕೂ ಹೆದರಿಕೊಳ್ಳಬೇಡ. ಏನೇ ಬಂದ್ರೂ ಧೈರ್ಯವಾಗಿ ಫೇಸ್ ಮಾಡು…. ಅಂದ ಹಿಮ. ಅನುಮಾನಗಳು, ಅವಮಾನಗಳು, ಆರೋಪಗಳು ಬೆನ್ನ ಹಿಂದೆ ನೆರಳಿನಂತೆ ನಡೆದು ಬರುತ್ತಲೇ ಇವೆ. ನಿಖರವಾದ ಮಾಹಿತಿಯಿಲ್ಲದೆ ಟಿವಿ ಮಾಧ್ಯಮಗಳು ತಮಗೆ ಬೇಕಾದ ಬಣ್ಣ ತುಂಬಿ ಒಂದು ರೀತಿಯ ರಿವೇಂಜಿಗಿಳಿದಿವೆ. ಕೆಲವರಿಗೆ ಮನರಂಜನೆ, ಕೆಲವರಿಗೆ ಆತಂಕ. ಕೆಲವರಿಗೆ ಕುತೂಹಲ. ಇನ್ನು ಕೆಲವರಿಗೆ ಅನುಮಾನ..

“ಏನೂ ಯೋಚನೆ ಮಾಡಬೇಡ ನಂಗೇನೂ ಆಗಲ್ಲ” ಅಂತ ಚೆಲ್ಲಿ ಹೋದ ರವಿಯ ನಗುವೇ ಮನೆ ಮನ ತುಂಬಿದೆ. ಅದೇ ನಿರೀಕ್ಷೆಯಲ್ಲಿದ್ದೇವೆ ನಾನು ಹಿಮ. ನಿಮಗೇನೂ ಆಗಲ್ಲ ವೀ. ನಮ್ಮೆಲ್ಲರ ಪ್ರಾರ್ಥನೆ ಸದಾ ನಿಮ್ಮೊಂದಿಗಿದೆ. ಇದೊಂದು ಸಣ್ಣ ಪರೀಕ್ಷೆ ಅಷ್ಟೆ. ಅದರಲ್ಲಿ ಗೆದ್ದು ಬರುವಿರೆಂಬ ನಂಬಿಕೆ ನನಗಿದೆ.

Share This Article
Leave a Comment

Leave a Reply

Your email address will not be published. Required fields are marked *