ದಂಗಲ್ ನಟಿ ಝೈರಾ ವಾಸಿಮ್ ಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿ ಅರೆಸ್ಟ್

Public TV
2 Min Read

ಮುಂಬೈ: ದಂಗಲ್ ನಟಿ ಝೈರಾ ವಾಸಿಮ್‍ಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ವ್ಯಕ್ತಿಯನ್ನು ಭಾನುವಾರದಂದು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ನಟಿ ದೆಹಲಿಯಿಂದ ಮುಂಬೈಗೆ ಪ್ರಯಾಣಿಸುವಾಗ ಅವರ ಹಿಂದಿನ ಸೀಟಿನಲ್ಲಿ ಇದ್ದ ಮತ್ತೊಬ್ಬ ಪ್ರಯಾಣಿಕ ಝೈರಾಗೆ ಲೈಂಗಿಕ ಕಿರುಕುಳ ನೀಡಿದ್ದ. ಮುಂಬೈಗೆ ಬಂದಿಳಿದ ತಕ್ಷಣ ವಿಡಿಯೋ ಮೂಲಕ ನಡೆದ ಘಟನೆಯನ್ನು ಝೈರಾ ವಿವರಿಸಿದ್ದರು.

ಬಂಧಿತನನ್ನು ಮುಂಬೈ ಮೂಲದ ಉದ್ಯಮಿ ವಿಕಾಸ್ ಸಚ್‍ದೇವ್ ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ನಡೆದ ಘಟನೆಗೆ ವ್ಯಾಪಾಕ ಆಕ್ರೋಶ ವ್ಯಕ್ತವಾಗಿತ್ತು. ಜೊತೆಗೆ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗ ವಿಚಾರಣೆಗೆ ನಿರ್ದೇಶನ ನೀಡಿತ್ತು. ವಿಕಾಸ್ ಸಚ್‍ದೇವ್ ವಿರುದ್ಧ ಐಪಿಸಿ ಸೆಕ್ಷನ್ 354 ಹಾಗೂ ಪೋಕ್ಸೋ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಮುಂಬೈ ಪೊಲೀಸ್ ಆಯುಕ್ತ ಅನಿಲ್ ಕುಂಬಾರೆ ಹೇಳಿದ್ದಾರೆ.

https://www.youtube.com/watch?v=QLYr2Kq4FtI

ಏನಿದು ಘಟನೆ?: ವಿಮಾನದಲ್ಲಿ ಕಿಡಿಗೇಡಿಯೊಬ್ಬ ಝೈರಾ ಅವರೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದರಿಂದ ಮನನೊಂದ ನಟಿ ಬಿಕ್ಕಿ-ಬಿಕ್ಕಿ ಅತ್ತಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿಸ್ತಾರಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 17 ವರ್ಷದ ನಟಿ ಝೈರಾ ಫ್ಲೈಟ್‍ನಲ್ಲಿ ನಿದ್ರೆಗೆ ಜಾರಿದ್ದರು. ಈ ವೇಳೆ ಹಿಂಬದಿ ಸೀಟ್ ನಲ್ಲಿ ಕುಳಿತುಕೊಂಡಿದ್ದ ಮಧ್ಯ ವಯಸ್ಸಿನ ವ್ಯಕ್ತಿಯೋರ್ವ ಆಕೆಯ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಝೈರಾಳನ್ನು ಹಿಂದಿನಿಂದ ಕಾಲಿನಲ್ಲಿ ಸ್ಪರ್ಶಿಸಿದ್ದಾನೆ.

ಇದರಿಂದ ಝೈರಾ ಕೂಡಲೇ ಎಚ್ಚರಗೊಂಡು ಆ ವ್ಯಕ್ತಿಯ ಅಸಭ್ಯ ಚಟುವಟಿಕೆಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಅಲ್ಲಿ ಬೆಳಕು ಕಡಿಮೆ ಇದಿದ್ದರಿಂದ ಅವನ ಮುಖವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಆಗಲಿಲ್ಲ. ಆ ವ್ಯಕ್ತಿ ಸುಮಾರು 5-10 ನಿಮಿಷವರೆಗೂ ಝೈರಾ ಕತ್ತು ಹಾಗೂ ಕಾಲುಗಳನ್ನು ಸವರಿದ್ದಾನೆ ಎಂದು ಇನ್ ಸ್ಟಾಗ್ರಾಂನಲ್ಲಿ ಝೈರಾ ಪೋಸ್ಟ್ ಮಾಡಿದ್ದಾರೆ.

ಝೈರಾ ಇನ್‍ಸ್ಟಾಗ್ರಾಂನಲ್ಲಿ ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಲೈವ್ ವಿಡಿಯೋ ಮಾಡಿದ್ದಾರೆ. ಈ ಘಟನೆ ಬಗ್ಗೆ ವಿಸ್ತಾರಾ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, ಬೇರೆ ಪ್ರಯಾಣಿಕನಿಂದ ಅವರಿಗೆ ಆದ ಅನುಭವವನ್ನು ನಾವು ಕೇಳಿದ್ದೇವೆ. ನಾವು ಈ ಘಟನೆ ಬಗ್ಗೆ ವಿಚಾರಣೆ ನಡೆಸುತ್ತಿದ್ದು, ನಾವು ಝೈರಾಗೆ ಎಲ್ಲಾ ರೀತಿಯ ಸಹಾಯ ಮಾಡಲು ಸಿದ್ಧರಿದ್ದೇವೆ. ಈ ರೀತಿಯ ಘಟನೆಗಳನ್ನು ನಾವು ಸಹಿಸುವುದಿಲ್ಲ ಎಂದು ಉತ್ತರಿಸಿದ್ದಾರೆ.

ಘಟನೆ ನಡೆದ ನಂತರ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಝೈರಾ ಇದ್ದ ಹೋಟೆಲ್ ಗೆ ಭೇಟಿ ನೀಡಿ ಅವರ ಹೇಳಿಯನ್ನು ಪಡೆದು ಕೇಸ್ ದಾಖಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *