ಬೆಂಗಳೂರು: ಬಿಬಿಎಂಪಿ ಹಾಲಿ ಸದಸ್ಯರೊಬ್ಬರು ಈದ್ ಮಿಲಾದ್ ಆಚರಣೆ ವೇಳೆ ಲಾಂಗ್ ಪ್ರದರ್ಶನ ಮಾಡಿರೋ ಘಟನೆ ಇಂದು ಬೆಳಕಿಗೆ ಬಂದಿದೆ.
ಈ ಘಟನೆ ಬ್ಯಾಟಾರಾಯನಪುರದ ಗೋರಿಪಾಳ್ಯದಲ್ಲಿ ಶನಿವಾರ ನಡೆದಿದ್ದು, ವಾರ್ಡ್ ನಂಬರ್ 135ರ ಪಾಲಿಕೆ ಸದಸ್ಯ ಇಮ್ರಾನ್ ಪಾಷಾ ಅವರು ಓರ್ವ ಜನಪ್ರತಿನಿಧಿಯಾಗಿ ಸಾರ್ವಜನಿಕರ ಮುಂದೆಯೇ ಈ ರೀತಿ ವರ್ತನೆ ಮಾಡಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿ ಇಮ್ರಾನ್ ಪಾಷಾ ಅವರನ್ನು ಮಾತನಾಡಿಸಿದಾಗ, ಸಾವಿರಾರು ಮಂದಿ ನಮ್ಮ ಮನೆ ಮುಂದೆ ನೆರೆದಿದ್ದರು. ಹಲವು ಕಡೆ ನನ್ನ ಆಮಂತ್ರಿಸಿದ್ದರು. ಹೀಗಾಗಿ ನಾನು ಅಲ್ಲಿ ಅನ್ನದಾನ ಮಾಡಿ ಹಿಂತಿರುಗಿ ಬರುತ್ತಿದ್ದ ಸಂದರ್ಭದಲ್ಲಿ ಹಲವು ಮಂದಿ ಯುವಕರು ಕೈಯಲ್ಲಿ ಲಾಂಗ್ ಹಿಡಿದುಕೊಂಡು ಇದ್ದರು. ಆದ್ರೆ ಯಾರಿಗೂ ತೊಂದರೆ ಮಾಡೋ ಉದ್ದೇಶದಿಂದ ಅವರು ಲಾಂಗ್ ಹಿಡಿಕೊಂಡಿಲ್ಲ. ಈ ವೇಳೆ ಅವರು ಅಣ್ಣ ಬನ್ನಿ ಅಂತ ಕರೆದ್ರು. ಹೀಗಾಗಿ ನಾನು ಕೂಡ ಕೈಯಲ್ಲಿ ಲಾಂಗ್ ಹಿಡಿದೆ. ಅಂತೆಯೇ ಅವರೆಲ್ಲರೂ ನನ್ನ ಎತ್ತಿಕೊಂಡು ಕುಣಿದ್ರು ಅಂತ ಅವರು ಹೇಳಿದ್ರು.
ಅಂದು ಈದ್ ಮಿಲಾದ್ ಆಗಿದ್ದುದರಿಂದ ಹಿಂದೂಸ್ತಾನದ ಎಲ್ಲಾ ರಾಜಕೀಯ ನಾಯಕರುಗಳು ಕೂಡ ಮೆರವಣಿಗೆ ಹೋಗಿ ಅವರ ಅಭಿಮಾನಿಗಳ ಜೊತೆ ಖುಷಿಯಿಂದ ಆಚರಣೆ ಮಾಡುತ್ತಾರೆ. ಅಷ್ಟಕ್ಕೂ ಅಲ್ಲಿ ನಾನು ಒಬ್ಬನೇ ಲಾಂಗ್ ಹಿಡಿದುಕೊಂಡಿಲ್ಲ. ಅಲ್ಲಿ ನೆರೆದಿದ್ದ ಹಲವರು ಹಿಡಿದುಕೊಂಡಿದ್ದರು. ಒಟ್ಟಿನಲ್ಲಿ ನಾನೇನು ತಪ್ಪು ಕೆಲಸ ಮಾಡಿಲ್ಲ ಅಂತ ಅವರು ಸಮರ್ಥಿಸಿಕೊಂಡ್ರು.
ಸದ್ಯ ಕಾರ್ಪೋರೇಟರ್ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತ್ರೀವ ಆಕ್ರೋಶ ವ್ಯಕ್ತವಾಗುತ್ತಿದೆ.