ಮನೆಯೊಳಗೆ ಪಾರಿವಾಳ ಬರುವುದನ್ನ ತಪ್ಪಿಸಲು ಹೋಗಿ 5ನೇ ಮಹಡಿಯಿಂದ ಬಿದ್ದು ಗೃಹಿಣಿ ಸಾವು

Public TV
2 Min Read

ಮುಂಬೈ: ಮನೆಯೊಳಗೆ ಪಾರಿವಾಳ ಬರುವುದನ್ನು ತಪ್ಪಿಸಲು ಹೋಗಿ ಗೃಹಿಣಿಯೊಬ್ಬರು 5ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಮುಂಬೈನ ನೆಹರು ನಗರದಲ್ಲಿ ನಡೆದಿದೆ.

ಕರುಣಾ (57) ಮೃತ ದುರ್ದೈವಿ. ಕುರ್ಲಾದ ಕಟ್ಟಡವೊಂದರಲ್ಲಿ 5ನೇ ಮಹಡಿಯಲ್ಲಿ ವಾಸವಿದ್ದರು. ಇವರು ಶುಕ್ರವಾರ ಬೆಡ್‍ರೂಂನ ಕಿಟಕಿಯ ಗ್ರಿಲ್ ಮೂಲಕ ಪಾರಿವಾಳ ಒಳಗೆ ಬರುವುದನ್ನು ತಪ್ಪಿಸಲೆಂದು ಗ್ರಿಲ್‍ಗೆ ತಂತಿ ಕಟ್ಟಲು ಹೋದಾಗ ಗ್ರಿಲ್ ಕುಸಿದಿದ್ದು, ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

ಕರುಣಾ ಅವರ ಪತಿ ವಿಜಯ್ ಸ್ವಂತ ಉದ್ಯಮ ನಡೆಸುತ್ತಿದ್ದು, ಮಗಳು ವೈಷ್ಣವಿ ಎಂಬಿಎ ಮಾಡಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವು ದಶಕಗಳಿಂದ ಇರುವ ಸುಮಾರು 6 ಮಿಲಿಮೀಟರ್‍ನಷ್ಟು ದಪ್ಪವಿರೋ ಗ್ರಿಲ್ ಹೀಗೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿರೋದು ಕಟ್ಟಡದ ಇತರೆ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಒಂದು ಕಡೆಗೆ ಬಾಗಿರುವುದು ಬಿಟ್ಟರೆ ಗ್ರಿಲ್‍ಗೆ ಯಾವುದೇ ಹಾನಿಯಾಗಿಲ್ಲ. ಹೀಗಾಗಿ ಗ್ರಿಲ್‍ಗೆ ಹಾಕಲಾಗಿದ್ದ ಮೊಳೆ/ಸ್ಕ್ರೂ ಸಡಿಲಗೊಂಡು ಈ ರೀತಿ ಆಗಿರಬಹುದು ಅಥವಾ ಗೋಡೆಯಲ್ಲೇ ಸಮಸ್ಯೆ ಇರಬಹುದು ಎಂದು ವರದಿಯಾಗಿದೆ.

ಗ್ರಿಲ್ ಬಹಳ ಗಟ್ಟಿಯಾಗಿದೆ ಎಂದು ಕಟ್ಟಡದ ನಿವಾಸಿಗಳು ಮಕ್ಕಳನ್ನ ಅದರೊಳಗೆ ಆಟವಾಡಲು ಬಿಡುತ್ತಿದ್ದರು. ಕೆಲವರು ಕೆಲವು ಭಾರವಾದ ಅನವಶ್ಯಕ ವಸ್ತುಗಳನ್ನು ಕೂಡ ಇದೇ ಗ್ರಿಲ್‍ನಲ್ಲಿ ರಾಶಿ ಹಾಕುತ್ತಿದ್ದರು. ಆದ್ರೆ ಈ ಘಟನೆಯಿಂದ ಗ್ರಿಲ್ ಹೆಚ್ಚು ಭಾರ ತಡೆಯುವ ಸಾಮಥ್ರ್ಯ ಹೊಂದಿಲ್ಲ ಎಂಬುದು ಅವರಿಗೆ ಮನವರಿಕೆಯಾಗಿದೆ.

ಶುಕ್ರವಾರ ಸುಮಾರು 10.15ರ ವೇಳೆಯಲ್ಲಿ ವೈಷ್ಣವಿ ಒಂದು ರೂಮಿನಲ್ಲಿದ್ದರು. ಆಕೆಯ ತಾಯಿ ಮತ್ತೊಂದು ರೂಮಿನಲ್ಲಿ ಗ್ರಿಲ್‍ಗೆ ತಂತಿ ಕಟ್ಟುತ್ತಿದ್ದರು. ಆಗ ಗ್ರಿಲ್ ಕುಸಿದು ಬಿದ್ದಿದೆ ಎಂದು ಪೊಲೀಸರು ಹೇಳಿದ್ದಾರೆ.

ನನಗೆ ಜೋರಾದ ಶಬ್ದ ಕೇಳಿಸಿತು. ತಕ್ಷಣ ಹೊರಗೆ ಬಂದು ನೋಡಿದೆ. ಕಿಟಕಿಯ ಗ್ರಿಲ್ ಬಾಕ್ಸ್ ಸಮೇತ ಅಮ್ಮ ಕೂಡ ಕೆಳಗೆ ಬಿದ್ದಿದ್ದರು. ನಾನು ಕೆಳಗೆ ಓಡಿ ಹೋದೆ ಆದರೆ. ಅಷ್ಟರಲ್ಲಿ ಅಮ್ಮ ಮೃತಪಟ್ಟಿದ್ದರು ಎಂದು ವೈಷ್ಣವಿ ಹೇಳಿದ್ದಾರೆ.

ಈ ಬಗ್ಗೆ ನೆಹರು ನಗರ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಾಗಿದೆ. ಗ್ರಿಲ್‍ನ ಮೊಳೆಗಳು ರಸ್ಟ್ ಹಿಡಿದಿದ್ದವು. ಅದು ಮೃತ ಮಹಿಳೆಯ ದೇಹದ ಭಾರವನ್ನು ಹೊರುವಷ್ಟು ಸಾಮಥ್ರ್ಯ ಹೊಂದಿರಲಿಲ್ಲ. ಇದರಲ್ಲಿ ಕಟ್ಟಡ ಮಾಲೀಕರ ನಿರ್ಲಕ್ಷ್ಯ ಇದೆಯಾ ಎಂದು ಪರಿಶೀಲನೆ ಮಾಡುತ್ತೇವೆ ಎಂದು ಡಿಸಿಪಿ ಶಶಿ ಉಮ್ಯಾಪ್ ತಿಳಿಸಿದರು.

ಈ ರೀತಿ ಗ್ರಿಲ್ ಕುಸಿದು ಬಿದ್ದಿರುವುದನ್ನು ನಾನು 25 ವರ್ಷಗಳ ವೃತ್ತಿಯಲ್ಲಿ ಕಂಡಿಲ್ಲ. ಕೆಲವೊಮ್ಮೆ ಸ್ಕ್ರೂಗಳು ಸ್ವಲ್ಪ ಸಡಿಲವಾಗುವುದು ಮತ್ತು ತುಕ್ಕು ಹಿಡಿಯುತ್ತವೆ. ಬಹುಶಃ ಗೋಡೆಯಲ್ಲೇ ಸಮಸ್ಯೆ ಇರಬಹುದು ಎಂದು ಗ್ರಿಲ್ ತಯಾರಿಕೆಯಲ್ಲಿ ಪರಿಣತರಾಗಿರೋ ಹರೂನ್ ಖಾನ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *