ಮೈಸೂರು: ಗೃಹಿಣಿಯೊಬ್ಬರು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕುವೆಂಪು ನಗರದ ಎಂ ಬ್ಲಾಕ್ನಲ್ಲಿ ನಡೆದಿದೆ.
24 ವರ್ಷದ ವಿನುತಾ ಮೃತ ದುರ್ದೈವಿ. ಇವರಿಗೆ ನಗರದ ಕೆಎಸ್ಆರ್ಟಿಸಿ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಂಸತ್ ಎಂಬವರ ಜೊತೆ ಐದು ವರ್ಷಗಳ ಹಿಂದೆ ವಿವಾಹವಾಗಿತ್ತು. ಆದರೆ ಗುರುವಾರ ಮಧ್ಯಾಹ್ನ ಮನೆ ಮುಂದೆ ಇದ್ದ ನೀರಿನ ಸಂಪ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ವಿನುತಾಗೆ ಮದುವೆಯಾಗಿ 5 ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಆದ್ದರಿಂದ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಗಂಡನೇ ಕೊಲೆ ಮಾಡಿ, ಯಾರಿಗೂ ಅನುಮಾನ ಬರಬಾರದೆಂದು ನೀರಿನ ಸಂಪ್ಗೆ ಹಾಕಿದ್ದಾನೆ ಎಂದು ವಿನುತಾ ಪೋಷಕರು ಆರೋಪಿಸುತ್ತಿದ್ದಾರೆ. ವಸಂತ್ ಸೇರಿದಂತೆ ಆತನ ಪೋಷಕರು ದೈಹಿಕ ಹಾಗೂ ಮಾನಸಿಕ ಕಿರುಕುಳ ಕೊಡುತ್ತಿದ್ದರು ಎಂದು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವಿನುತಾ ಪೋಷಕರು ಪತಿ ವಸಂತ್ ವಿರುದ್ಧ ದೂರು ನೀಡಿದ್ದಾರೆ. ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.