ಪಿಸ್ತೂಲ್ ಹಿಡಿದು ಚಿರತೆಗಾಗಿ ಹುಡುಕ್ತಿದ್ದ ಸಚಿವರ ವಿಡಿಯೋ ವೈರಲ್

By
1 Min Read

ಮುಂಬೈ: ಕೈಯಲ್ಲಿ ಪಿಸ್ತೂಲ್ ಹಿಡಿದು ಚಿರತೆಯನ್ನ ಹುಡುಕುತ್ತಿದ್ದ ತಂಡದ ಜತೆ ಸೇರಿಕೊಂಡು ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ ವಿವಾದಕ್ಕೆ ಸಿಲುಕಿದ್ದಾರೆ.

ಇಲ್ಲಿನ ಜಲ್‍ಗಾಂವ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಸಾವಿಗೆ ಕಾರಣವಾದ ಚಿರತೆಯನ್ನ ಹುಡುಕಲಾಗ್ತಿತ್ತು. ಈ ವೇಳೆ ಗನ್ ಹಿಡಿದು ತಾವೂ ಚಿರತೆಗಾಗಿ ಹುಡುಕಾಡಿದ ಸಚಿವರ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಪ್ರತಿಕ್ರಿಯಿಸಿರೋ ಸಚಿವರು, ಚಿರತೆಗೆ ಹಾನಿ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ಅದನ್ನ ಹೆದರಿಸಿ ಓಡಿಸಬೇಕೆಂದಿದ್ದೆವು ಎಂದು ಹೇಳಿದ್ದಾರೆ.

ಮಂಗಳವಾರದಂದು ಮಹಾಜನ್ ಅವರು ಚಿರತೆ ದಾಳಿಯಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಸಾಂತ್ವನ ಹೇಳಿ ಹಿಂದಿರುಗುತ್ತಿದ್ದರು. ಈ ವೇಳೆ ವಾರ್ಖೇಡೆ ಗ್ರಾಮದ ನವೇಗಾಂವ್ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದ್ದ ಮಾಹಿತಿ ಅವರಿಗೆ ತಲುಪಿತ್ತು.

ನಾಮ್ಮ ವಾಹನಗಳಿದ್ದ 400 ಅಡಿ ದೂರದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರೊಂದಿಗೆ ಶೋಧ ಕಾರ್ಯದಲ್ಲಿ ಭಾಗಿಯಾದೆ ಎಂದು ಮಹಾಜನ್ ಹೇಳಿದ್ದಾರೆ. ಸಚಿವರು ಪಿಸ್ತೂಲ್ ಹಿಡಿದು ಚಿರತೆಗಾಗಿ ಹುಡುಕಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದು, ಸ್ಥಳೀಯ ಮಾಧ್ಯಮಗಳಲ್ಲೂ ಈ ಬಗ್ಗೆ ವರದಿಯಾಗಿದೆ.

ಚಿರತೆಯನ್ನು ಕೊಲ್ಲುವ ಉದ್ದೇಶ ಇರಲಿಲ್ಲ, ಆದ್ರೆ ಗಾಳಿಯಲ್ಲಿ ಗುಂಡು ಹಾರಿಸಬೇಕೆಂದಿದ್ದೆ ಅಷ್ಟೆ. ನಾನು ಹೊರತೆಗೆದ ಗನ್‍ಗೆ ಲೈಸೆನ್ಸ್ ಇದೆ. ಜನರನ್ನ ಕೊಂದಿರೋ ಚಿರತೆ ಕಂಡ ಕೂಡಲೇ ಕೊಲ್ಲುವಂತೆ ಅರಣ್ಯ ಸಚಿವ ಸುಧೀರ್ ಮುಂಗಾಂತಿವಾರ್ ಆದೇಶಿಸಿದ್ದರು ಎಂದು ಅರಣ್ಯ ಅಧಿಕಾರಿಗಳು ನಮಗೆ ಹೇಳಿದ್ರು ಎಂದು ಮಹಾಜನ್ ಹೇಳಿದ್ದಾರೆ.

ನಾನು ಇದುವರೆಗೂ ಒಂದು ಪಾರಿವಾಳವನ್ನೂ ಕೊಂದಿಲ್ಲ. ಅದು ನನ್ನ ಲೈಸೆನ್ಸ್‍ಯುಕ್ತ ಗನ್. ಅದನ್ನ ಕಳೆದ 20 ವರ್ಷಗಳಿಂದ ಜೊತೆಯಲ್ಲಿಟ್ಟುಕೊಂಡು ಓಡಾಡ್ತಿದ್ದೀನಿ. ನಿಯಮಿತವಾಗಿ ಲೈಸೆನ್ಸ್ ನವೀಕರಣ ಮಾಡಿದ್ತೀನಿ ಎಂದು ಹೇಳಿದ್ದಾರೆ.

ಕೊನೆಗೂ ಈ ತಂಡ ಚಿರತೆಯನ್ನ ಪತ್ತೆಹಚ್ಚುವಲ್ಲಿ ವಿಫಲವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *