ಸಂಪೂರ್ಣ ಮದ್ಯ ನಿಷೇಧ ಸಾಧ್ಯವೇ ಅಥವಾ ಇಲ್ಲವೇ ಎಂಬುವುದರ ಚರ್ಚೆಯ ಸಂಪೂರ್ಣ ಮಾಹಿತಿ

Public TV
3 Min Read

ಬೆಳಗಾವಿ: ಸಂಪೂರ್ಣ ಮದ್ಯ ನಿಷೇಧ ಕುರಿತು ಮಂಗಳವಾರ ವಿಧಾನಸಭೆ ಅಧಿವೇಶನದಲ್ಲಿ ಆರಂಭವಾದ ಚರ್ಚೆಯಿಂದ ಕಲಾಪದಲ್ಲಿ ಬೇರಾವುದೇ ಪ್ರಮುಖ ವಿಚಾರ ಚರ್ಚೆಯಾಗದೆ ಕಲಾಪ ಅಂತ್ಯಗೊಂಡಿತು. ರಾಜ್ಯದಲ್ಲಿ ಮದ್ಯ ನಿಷೇಧಕ್ಕೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಅಂತ 3 ದಿನಗಳ ಹಿಂದೆ ಪಬ್ಲಿಕ್‍ ಟಿವಿ ಪ್ರಸಾರ ಮಾಡಿದ್ದ ವರದಿ ಮಂಗಳವಾರ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು.

ಮಂಗಳವಾರ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮದ್ಯ ನಿಷೇಧದ ವಿಷಯ ಪ್ರಸ್ತಾಪಿಸಿದರು. ಶೆಟ್ಟರ್ ಅವರಿಗೆ ತಿರುಗೇಟು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಸಂಪೂರ್ಣ ಮದ್ಯ ನಿಷೇಧ ಸಾಧ್ಯವೇ ಇಲ್ಲ’. ‘ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಂಪೂರ್ಣ ಮದ್ಯ ನಿಷೇಧ ಇನ್ನೂ ಸಾಧ್ಯವಾಗಿಲ್ಲ. ಈ ಕುರಿತು ಕೇಂದ್ರ ಸರ್ಕಾರ ನ್ಯಾಷನಲ್ ಪಾಲಿಸಿ ಆಗಬೇಕು. ಇಡೀ ದೇಶದಲ್ಲಿ ಮದ್ಯ ನಿಷೇಧ ಮಾಡಲು ನಿಮ್ಮ ಪ್ರಧಾನಿ ಮೋದಿ ಅವರಿಗೆ ಹೇಳಿ, ಆವಾಗ ನಾವೂ ಸಪೋರ್ಟ್ ಮಾಡುತ್ತೇವೆ’ ಅಂದರು. ಅಲ್ಲದೇ ನಿಮ್ಮ ಸರ್ಕಾರ ಇದ್ದಾಗ ಏಕೆ ಮಾಡಲಿಲ್ಲ. ಮದ್ಯ ನಿಷೇಧಕ್ಕೆ ಒತ್ತಾಯಿಸುತ್ತಿರುವ ನಿಮಗೆ ಸಂಸ್ಕೃತಿ -ಸಂಸ್ಕಾರ ಇದೆಯಾ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಸಿಎಂ ಅವರ ಹೇಳಿಕೆಗೆ ಕೋಪಗೊಂಡ ಬಿಜೆಪಿ ನಾಯಕರು ಸದನದ ಬಾವಿಗಿಳಿದು ಧರಣಿ ನಡೆಸಿ, ಅಸಂವಿಧಾನಿಕ ಪದಗಳನ್ನು ಕಡತದಿಂದ ತೆಗೆಯುವಂತೆ ಆಗ್ರಹಿಸಿದರು. ಇದಕ್ಕೆ ಸ್ಪೀಕರ್ ಒಪ್ಪದಿದ್ದಾಗ ಕಲಾಪದಲ್ಲಿ ಕೋಲಾಹಲ ಉಂಟಾಗಿ ಸದನವನ್ನು ಮುಂದೂಡಲಾಯಿತು. ಮತ್ತೆ ಕಲಾಪ ಆರಂಭವಾದಾಗ ರೂಲಿಂಗ್ ಪರಿಶೀಲಿಸುವುದಾಗಿ ಸ್ಪೀಕರ್ ಭರವಸೆ ನೀಡಿದ್ದರಿಂದ, ಬಿಜೆಪಿ ಸದಸ್ಯರು ಧರಣಿ ವಾಪಸ್ ಪಡೆದರು.

ಈ ಹಿಂದೆ ಸುಪ್ರೀಂಕೋರ್ಟ್ ಹೆದ್ದಾರಿಗಳಲ್ಲಿ ಮದ್ಯ ಮಾರಾಟ ನಿಷೇಧ ಮಾಡಿ ಆದೇಶ ನೀಡಿದಾಗ ಕರ್ನಾಟಕ ಸೇರಿದಂತೆ ರಾಜ್ಯಗಳು ಹೆದ್ದಾರಿಗಳನ್ನೇ ಡಿನೋಟಿಫೈಗೇ ಮುಂದಾಗಿದ್ದವು. ಅಲ್ಲದೇ ಸುಪ್ರೀಂ ಆದೇಶದಿಂದ ಬೊಕ್ಕಸಕ್ಕೆ ನಷ್ಟ ಆಗುತ್ತೆ ಎಂದು ಹೇಳಿದ್ದವು.

ಇನ್ನು ನಮ್ಮ ರಾಜ್ಯ ಸರ್ಕಾರದ ಮದ್ಯ ಮಾರಾಟದಿಂದ ಲಭ್ಯವಾಗುವ ಆದಾಯ ಸುಮಾರು 11,000 ಕೋಟಿ ರೂ. ಇದ್ದು, ಈ ವರ್ಷದ ಆದಾಯವನ್ನು 18,000 ಕೋಟಿ ರೂ. ಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.

ರಾಜ್ಯದಲ್ಲಿ ಸಂಪೂರ್ಣ ಸಾರಾಯಿ ನಿಷೇಧ ಅಸಾಧ್ಯ ಅಂತ ಸಿಎಂ ಹೇಳಿದ್ದಾರೆ. ಹಾಗಾದ್ರೆ ದೇಶದ ಎಲ್ಲೆಲ್ಲಿ ಸಾರಾಯಿ ನಿಷೇಧ ಮಾಡಲಾಗಿದೆ. ನಿಷೇಧದ ಕಸರತ್ತು ನಡೆದಿದೆ ಅನ್ನೋದರ ಡೀಟೇಲ್ಸ್ ಇಲ್ಲಿದೆ.

– ಗುಜರಾತ್ ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಮಾಡಲಾಗಿದ್ದು, ಮದ್ಯ ಮಾರಾಟ ಮಾಡಿದರೆ ಮರಣ ದಂಡನೆ ಶಿಕ್ಷೆ ನೀಡಬಹುದಾಗಿದೆ. ಅಲ್ಲದೇ ಮದ್ಯವನ್ನು ಮನೆಯಲ್ಲೂ ತಯಾರಿ ಮಾಡುವವರು ಶಿಕ್ಷೆಗೆ ಗುರಿ ಆಗಬೇಕಾಗುತ್ತದೆ.

– ಬಿಹಾರ 2016ರಲ್ಲಿ ಮದ್ಯ ಮಾರಾಟ ನಿಷಿದ್ಧ ಕಾನೂನು ಜಾರಿ. ಮದ್ಯ ಮಾರಿದರೆ ಜಾಮೀನು ರಹಿತ ವಾರೆಂಟ್. ಕಾನೂನು ಬಾಹಿರ ಮದ್ಯ ಕೇಸಿನ ವಿಚಾರಣೆಗೆ ವಿಶೇಷ ಕೋರ್ಟ್ ರಚನೆ ಮಾಡಲಾಗಿದೆ.

– ಲಕ್ಷದ್ವೀಪ ಮದ್ಯಕ್ಕೆ ಅಲ್ಪ ನಿರ್ಬಂಧ – ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದಲ್ಲಿ ಸಂಪೂರ್ಣ ನಿಷೇಧವಿಲ್ಲ. ಆದರೆ ದ್ವೀಪಪ್ರದೇಶ ಬಂಗಾರಂನಲ್ಲಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ.

– ಕೇರಳ ಮದ್ಯ ನಿಷೇಧಿಸಿ ಆದೇಶ ವಾಪಸ್? 2014ರಲ್ಲಿ ಕೇರಳ ಸರ್ಕಾರದಿಂದ ಮದ್ಯ ಮಾರಾಟ ನಿಷೇಧ ಮಾಡಿ ಆದೇಶ ಜಾರಿ ಮಾಡಲಾಗಿತ್ತು. ಆದರೆ 2017ರಲ್ಲಿ ಸಂಪೂರ್ಣ ನಿಷೇಧ ಆದೇಶ ತೆರವು ಮಾಡಿ ಹೋಟೆಲ್, ಬಾರ್, ಏರ್ ಪೋರ್ಟ್ ನಲ್ಲಿ ಮಾರಾಟ ವ್ಯವಸ್ಥೆ ಆರಂಭ ಮಾಡಲಾಗಿದೆ.

– ಕೇರಳ ರಾಜ್ಯದಂತೆ ಆಂಧ್ರಪ್ರದೇಶ ರಾಜ್ಯದಲ್ಲಿಯೂ ಮದ್ಯ ನಿಷೇಧ ಜಾರಿ ಮಾಡಿ ಆದೇಶವನ್ನು ಹಿಂಪಡೆಯಲಾಯಿತು. 1994ರಲ್ಲಿ ಎನ್.ಟಿ. ರಾಮರಾವ್ ನೇತೃತ್ವದ ಸರ್ಕಾರ ಮದ್ಯ ನಿಷೇಧ ಮಾಡಿದರೆ. 1997ರಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರ ಆದೇಶವನ್ನು ಹಿಂಪಡೆಯಿತು.

Share This Article
Leave a Comment

Leave a Reply

Your email address will not be published. Required fields are marked *