ಹಾಸ್ಟೆಲ್ ಛಾವಣಿಯ ಕಂಬಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ!

Public TV
2 Min Read

ರಾಂಚಿ: ಇಲ್ಲಿನ ಯುವತಿಯರ ಹಾಸ್ಟೆಲ್‍ವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ.

ಹಾಸ್ಟೆಲ್‍ನ ಹೊರಭಾಗದಲ್ಲಿ ಛಾವಣಿಯ ಮೇಲಿದ್ದ ಕಂಬಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಯುವತಿಯ ಶವ ಪತ್ತೆಯಾದ ವಿಷಯ ತಿಳಿದು ರಾಂಚಿಯ ಸಿಟಿ ಡಿಎಸ್‍ಪಿ ರಾಜ್‍ಕುಮಾರ್ ಮೆಹ್ತಾ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಯುವತಿ ಇಲ್ಲಿನ ಮಾರ್ವಾಡಿ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮಾಡುತ್ತಿದ್ದಳು. ಆರ್ಜಿ ಸ್ಟ್ರೀಟ್‍ನ ವಿನಾಯಕಂ ಗಲ್ರ್ಸ್ ಹಾಸ್ಟೆಲ್‍ನಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಈಕೆ ಬುಂಡು ಮೂಲದವಳಾಗಿದ್ದು ವಿದ್ಯಾಭ್ಯಾಸಕ್ಕಾಗಿ ರಾಂಚಿಗೆ ಬಂದಿದ್ದಳು. ಮಗಳ ಸಾವಿನ ಸುದ್ದಿ ಕೇಳಿ ಪೋಷಕರು ರಾಂಚಿಗೆ ಆಗಮಿಸಿದ್ದಾರೆ ಎಂದು ವರದಿಯಾಗಿದೆ.

ಘಟನಾ ಸ್ಥಳದಲ್ಲಿ ಪೊಲೀಸರು ಡೆತ್‍ನೋಟ್ ವಶಪಡಿಸಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಯುವತಿ ಪರೀಕ್ಷೆಯ ಒತ್ತಡದಲ್ಲಿದ್ದಳು ಎಂದು ತಿಳಿದುಬಂದಿದೆ. ಮರಣೊತ್ತರ ಪರೀಕ್ಷೆಗಾಗಿ ಯುವತಿಯ ಶವವನ್ನು ಪೊಲೀಸರು ಇಲ್ಲಿನ ರಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಾಸ್ಟೆಲ್ ವಾರ್ಡನ್, ಮಾಲೀಕ ಹಾಗೂ ಯುವತಿಯ ಸ್ನೇಹಿತೆಯರನ್ನು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಫೋರೆನ್ಸಿಕ್ ತಂಡ ಕೂಡ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಯುವತಿಯ ಸಾವಿನ ಬಗ್ಗೆ ಆಕೆಯ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಆತ್ಮಹತ್ಯೆ?: ಯುವತಿಯು ನವೆಂಬರ್ 3ರಂದು ಬಿಎ ಪಾರ್ಟ್-2 ಪರೀಕ್ಷೆ ಬರೆದಿದ್ದಳು. ಅದರಲ್ಲಿ ಆಕೆಗೆ ಒಂದು ಪ್ರಶ್ನೆಗೆ ಮಾತ್ರ ಉತ್ತರ ಗೊತ್ತಿತ್ತು ಎಂದು ಡಿಎಸ್‍ಪಿ ಮೆಹ್ತಾ ಹೇಳಿದ್ದಾರೆ. ಯುವತಿ ಈ ಹಿಂದೆಯೂ ಒಂದು ಬಾರಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಳು. ಈ ಬಗ್ಗೆ ತನ್ನ ಸಹೋದರಿಯ ಬಳಿ ಹೇಳಿಕೊಂಡಿದ್ದಳು. ಸಹೋದರಿಯೂ ಕೂಡ ಅದೇ ಹಾಸ್ಟೆಲ್‍ನಲ್ಲಿ ಇದ್ದಳು ಎಂದು ತಿಳಿದುಬಂದಿದೆ.

ಹಾಸ್ಟೆಲ್‍ನ ನಾಲ್ಕನೇ ಮಹಡಿಯ ರೂಮಿನಲ್ಲಿದ್ದ ಯುವತಿ ಜೊತೆ ಆಕೆಯ ಇತರೆ ಮೂವರು ಸ್ನೇಹಿತೆಯರು ಕೂಡ ನೆಲೆಸಿದ್ದರು. ಆದ್ದರಿಂದ ಆಕೆ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳದೆ ಹಾಸ್ಟೆಲ್ ಛಾವಣಿಯ ಮೇಲೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕೂಡ ಶಂಕಿಸಲಾಗಿದೆ.

ವಾಟ್ಸಪ್ ಸ್ಟೇಟಸ್: ತನ್ನ ದಾವಣಿಯನ್ನ ಕುತ್ತಿಗೆಗೆ ಬಿಗಿದುಕೊಂಡು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾವಿಗೂ ಮುನ್ನ ವಾಟ್ಸಪ್ ಸ್ಟೇಟಸ್‍ನಲ್ಲಿ ಅನ್‍ಲಕ್ಕಿ ಮೀ, ಅನ್‍ಲಕ್ಕಿ ಮಂತ್ (ನಾನು ನತದೃಷ್ಟೆ, ನತದೃಷ್ಟ ತಿಂಗಳು) ಎಂದು ಬರೆದುಕೊಂಡಿದ್ದಾಳೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಸೂಸೈಡ್ ನೋಟ್‍ನಲ್ಲಿ ತಂದೆ ತಾಯಿ ಬಳಿ ಕ್ಷಮೆ ಕೋರಿದ್ದಾಳೆ.

Share This Article
Leave a Comment

Leave a Reply

Your email address will not be published. Required fields are marked *