ಮಂಗಳೂರು: ಬಾಡಿ ಬಿಲ್ಡಿಂಗ್ ಶೋ ನಡೆಯುತ್ತಿದ್ದ ಸಂದರ್ಭದಲ್ಲಿ ಸ್ಪರ್ಧಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
34 ವರ್ಷದ ವಿನಯರಾಜ್ ಮೃತ ಯುವಕ. ನಗರದ ಡಾನ್ ಬಾಸ್ಕೋ ಹಾಲ್ ನಲ್ಲಿ ಭಾನುವಾರ ರಾತ್ರಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಫರ್ಧೆಯಲ್ಲಿ ಭಾಗವಹಿಸಿದ್ದ ವಿನಯರಾಜ್ ಮೃತಪಟ್ಟಿದ್ದಾರೆ.
ವಿನಯರಾಜ್ ಸ್ಪರ್ಧೆಯಲ್ಲಿ ಬಾಡಿ ಶೋ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ. ವಿನಯರಾಜ್ ಮೂಲತಃ ಬಂಟ್ವಾಳ ತಾಲೂಕಿನ ಫರಂಗಿಪೇಟೆ ನಿವಾಸಿಯಾಗಿದ್ದು, ಮಂಗಳೂರಿನಲ್ಲಿ ಇಲೆಕ್ಟ್ರಿಶಿಯನ್ ಆಗಿ ಕೆಲಸ ಮಾಡುತ್ತಿದ್ದರು.
ಬಾಡಿ ಬಿಲ್ಡಿಂಗ್ ಶೋ ಮಧ್ಯೆ ಕುಸಿದು ಬಿದ್ದು ಸಾವು ಕಂಡಿರುವುದು ಈಗ ತೀವ್ರ ಚರ್ಚೆಗೆ ಕಾರಣವಾಗಿದೆ. ಆದರೆ ಯಾವ ಕಾರಣದಿಂದ ಸಾವನ್ನಪ್ಪಿದ ಎಂದು ಖಚಿತ ಮಾಹಿತಿ ದೊರಕಿಲ್ಲ. ಸದ್ಯಕ್ಕೆ ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮರಣೋತ್ತರ ಪರೀಕ್ಷೆಗೆ ಖಾಸಗಿ ಆಸ್ಪತ್ರೆಗೆ ಶವವನ್ನು ರವಾನಿಸಿದ್ದಾರೆ. ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.