8 ರಾಜ್ಯಗಳಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತರ ಮಾನ್ಯತೆ ನೀಡಿ: ಸುಪ್ರೀಂಗೆ ಪಿಐಎಲ್

Public TV
1 Min Read

ನವದೆಹಲಿ: ದೇಶದ 8 ರಾಜ್ಯಗಳಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತರ ಮಾನ್ಯತೆ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ.

ಜಮ್ಮು ಕಾಶ್ಮೀರ, ಪಂಜಾಬ್, ಲಕ್ಷದ್ವೀಪ, ಮಿಜೊರಾಂ, ನಾಗಾಲ್ಯಾಂಡ್, ಮೇಘಾಲಯ, ಅರುಣಾಚಲ ಪ್ರದೇಶ, ಮಣಿಪುರ ರಾಜ್ಯಗಳಲ್ಲಿರುವ ಹಿಂದೂಗಳನ್ನು ಅಲ್ಪಸಂಖ್ಯಾತರನ್ನಾಗಿ ಗುರುತಿಸಿ ಸರ್ಕಾರಿ ಸೌಲಭ್ಯಗಳನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ್ ಎಂಬವರು ಪಿಐಎಲ್ ಸಲ್ಲಿಸಿದ್ದಾರೆ.

ತಮ್ಮ ಅರ್ಜಿಗೆ ಪೂರಕವಾಗಿ, ಕೇಂದ್ರ ಸರ್ಕಾರ ಟೆಕ್ನಿಕಲ್ ಶಿಕ್ಷಣ ಓದುತ್ತಿರುವ 20 ಸಾವಿರ ಮಂದಿಗೆ ವಿದ್ಯಾರ್ಥಿ ವೇತನ ನೀಡಿದೆ. ಜಮ್ಮು ಕಾಶ್ಮೀರದಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.68.30 ಇದ್ದರೂ ವಿತರಣೆಯಾದ 753 ಮಂದಿಯಲ್ಲಿ 717 ಮಂದಿ ಮುಸ್ಲಿಮ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಕ್ಕಿದೆ. ನಿಜವಾಗಿಯೂ ಇಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದರೂ ಅವರಿಗೆ ವಿದ್ಯಾರ್ಥಿ ವೇತನ ಸಿಗದೇ ಅನ್ಯಾಯವಾಗಿದೆ ಎನ್ನುವ ವಿಚಾರವನ್ನು ಉಲ್ಲೇಖಿಸಿದ್ದಾರೆ.

ಮುಸ್ಲಿಂ, ಕೈಸ್ತ, ಸಿಖ್, ಬೌದ್ಧ ಧರ್ಮ, ಪಾರ್ಸಿ, ಧರ್ಮದ ಸಮುದಾಯಗಳನ್ನು 1993 ರಲ್ಲಿ ಕೇಂದ್ರ ಸರ್ಕಾರ ನೋಟಿಫಿಕೇಶನ್ ಹೊರಡಿಸಿ ಅಲ್ಪಸಂಖ್ಯಾತರ ಮಾನ್ಯತೆ ನೀಡಿತ್ತು. 2014ರಲ್ಲಿ ಈ ಪಟ್ಟಿಗೆ ಜೈನ ಧರ್ಮವನ್ನು ಸೇರಿಸಿತ್ತು.

2011ರ ಜನಗಣತಿಯ ಪ್ರಕಾರ ಲಕ್ಷದ್ವೀಪದಲ್ಲಿ ಶೇ.2.5, ಮಿಜೊರಾಂ ಶೇ.2.75, ನಾಗಾಲ್ಯಾಂಡ್ ಶೇ.8.75, ಮೇಘಾಲಯ ಶೇ.11.53, ಜಮ್ಮು ಕಾಶ್ಮೀರ ಶೇ. 28.44, ಅರುಣಾಚಲ ಪ್ರದೇಶ ಶೇ.29, ಮಣಿಪುರ ಶೇ. 31.39 ಮತ್ತು ಪಂಜಾಬ್‍ನಲ್ಲಿ ಶೇ.38.40 ರಷ್ಟು ಹಿಂದೂಗಳು ವಾಸಿಸುತ್ತಿದ್ದಾರೆ. ಲಕ್ಷದ್ವೀಪ ಶೇ.96.20, ಜಮ್ಮು ಕಾಶ್ಮೀರ ಶೇ.68.30, ಅಸ್ಸಾಂ ಶೇ.34.20, ಪಶ್ಚಿಮ ಬಂಗಾಳ ಶೇ.27.5, ಕೇರಳ ಶೇ.26.20 ಉತ್ತರ ಪ್ರದೇಶ ಶೇ.19.30, ಬಿಹಾರದಲ್ಲಿ ಶೇ.18 ರಷ್ಟು ಮುಸ್ಲಿಮರು ನೆಲೆಸಿದ್ದಾರೆ.

ಮೇಲ್ಕಂಡ ರಾಜ್ಯಗಳಲ್ಲಿ ಅಲ್ಪಂಸಖ್ಯಾತರಾಗಿರುವ ರಾಜ್ಯಗಳಲ್ಲೇ ಅವರೇ ಬಹುಸಂಖ್ಯಾತರಾಗಿದ್ದಾರೆ. ಇದರಿಂದಾಗಿ ನಿಜವಾಗಿಯೂ ಬಹುಸಂಖ್ಯಾತರು ಎಂದು ಗುರುತಿಸಿಕೊಂಡ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದು, ಇದರಿಂದಾಗಿ ಸರ್ಕಾರಿ ಲಾಭಗಳು ತಲುಪಬೇಕಾದ ಜನರಿಗೆ ತಲುಪುತ್ತಿಲ್ಲ. ಹೀಗಾಗಿ ಈ 8 ರಾಜ್ಯಗಳಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತರ ಮಾನ್ಯತೆ ನೀಡಿ ಎಂದು ಅವರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *