ಬಡರೈತರಿಗೆ ಉಚಿತ ವಕಾಲತ್ತು- 25 ವರ್ಷಗಳಿಂದ ಕಾನೂನು ಸೇವೆ ಮಾಡ್ತಿರೋ ತುಮಕೂರಿನ ಬಸವರಾಜ್

Public TV
1 Min Read

ತುಮಕೂರು: ದುಡ್ಡಿದವರು ಮಾತ್ರ ಕೋರ್ಟ್ ಕಚೇರಿ ಅಂತ ಸುತ್ತಾಡಬೇಕು. ಏಕೆಂದರೆ ವಕೀಲರ ಫೀಸು, ದೀರ್ಘಕಾಲದ ಅಲೆದಾಟ-ಸುತ್ತಾಟ ಇವುಗಳಿಗೆಲ್ಲಾ ದುಡ್ಡು ಬೇಕೇ ಬೇಕು. ಹಾಗಾಗಿ ಬಡ ಜನರು, ರೈತರು ತಮಗೆ ಅನ್ಯಾಯವಾದರೂ ಕೋರ್ಟು-ಕಚೇರಿಂದ ದೂರ ಇರುತ್ತಾರೆ. ಆದರೆ ಇಂತ ರೈತರ ಪಾಲಿನ ಆಶಾಕಿರಣರಾಗಿದ್ದಾರೆ ತುಮಕೂರಿನ ವಕೀಲರಾದ ಬಸವರಾಜ್.

ಬಸವರಾಜ್ ವೃತ್ತಿಯಲ್ಲಿ ವಕೀಲರಾದರು ಸಮಾಜ ಸೇವೆ ಮಾಡುತ್ತಿದ್ದಾರೆ. ಬಡವರು ಅದರಲ್ಲೂ ಬಡ ರೈತರು ಎಂದರೆ ಇವರಿಗೆ ತುಂಬಾ ಮುತುವರ್ಜಿ. ಕಳೆದ 25 ವರ್ಷಗಳಿಂದ ಈ ವರ್ಗದ ಜಮೀನು ವ್ಯಾಜ್ಯಗಳಿಗೆ ಉಚಿತವಾಗಿ ವಕಾಲತ್ತು ವಹಿಸುತ್ತಿದ್ದಾರೆ. ಅದರಲ್ಲೂ ರೈತರ ಜಮೀನು ಭೂಭಕಾಸುರರ ಕೈ ಸೇರಿದರೆ ಅಂಥದಕ್ಕೆ ವಿಶೇಷವಾಗಿ ಆಸ್ಥೆವಹಿಸ್ತಾರೆ. ಇಲ್ಲಿವರೆಗೆ ಸುಮಾರು 200ಕ್ಕೂ ಹೆಚ್ಚು ರೈತರಿಗೆ, ಬಡಜನರಿಗೆ ಉಚಿತ ಕಾನೂನು ಸೇವೆ ಒದಗಿಸಿದ್ದು ಒಂದು ಕಪ್ ಚಹಾ ಸಹ ಸ್ವೀಕರಿಸಿಲ್ಲ.

55 ವರ್ಷದ ಬಸವರಾಜು ಅವರು ತುಮಕೂರು ನಗರದ ಗಾರ್ಡನ್ ರಸ್ತೆಯ ನಿವಾಸಿ. 1993ರಲ್ಲಿ ವಕೀಲಿಕೆ ಆರಂಭಿಸಿದ ಇವರು ಅಂದಿನಿಂದಲೂ ನೊಂದವರ ಕಷ್ಟಕ್ಕೆ ಮರುಗುತ್ತಿದ್ದಾರೆ. ಪ್ರತಿಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಇಲ್ಲಿವರೆಗೂ ಕೋರ್ಟ್‍ಗೆ ನಡೆದುಕೊಂಡೇ ಹೋಗುವ ಬಸವರಾಜು ಅವರು ಕನಿಷ್ಟ ಪಕ್ಷ ಬೈಕನ್ನೂ ಖರೀದಿಸಿಲ್ಲ. ಅಷ್ಟರ ಮಟ್ಟಿಗೆ ಸರಳಜೀವಿ.

ಶಾಂತ ಸ್ವರೂಪಿಯಾಗಿರೋ ಬಸವರಾಜು ಅವರು ರೈತರ ಜೊತೆಗೆ ತಮ್ಮ ಕಿರಿಯ ವಕೀಲರಿಗೂ ಗಂಟೆಗಟ್ಟಲೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅಲ್ಲದೆ ಬಡವರಿಗೆ, ರೈತರಿಗೆ ಉಚಿತವಾಗಿ ವಕಲಾತ್ತು ವಹಿಸುವಂತೆ ಕಿರಿಯ ವಕೀಲರಿಗೆ ಸಲಹೆ ನೀಡುತ್ತಾರೆ.

https://www.youtube.com/watch?v=5J9F3jItnWo

Share This Article
Leave a Comment

Leave a Reply

Your email address will not be published. Required fields are marked *