ಜಾರ್ಜ್ ಮೇಲಿನ ಕ್ರಿಮಿನಲ್ ಆರೋಪವನ್ನು ಸಿಎಂ ಸಮರ್ಥಿಸಿಕೊಳ್ಳೋದು ಸರಿಯಲ್ಲ- ಎಚ್ ವಿಶ್ವನಾಥ್

Public TV
2 Min Read

ಮೈಸೂರು: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಜಾರ್ಜ್ ಮೇಲೆ ಇರುವುದು ಕ್ರಿಮಿನಲ್ ಆರೋಪ. ಇದನ್ನು ಬೇರೆ ಪ್ರಕರಣಕ್ಕೆ ತಳಕು ಹಾಕಿ ಹೋಲಿಕೆ ಮಾಡುವುದು ಸರಿಯಲ್ಲ ಅಂತ ಮಾಜಿ ಸಂಸದ ಎಚ್ ವಿಶ್ವನಾಥ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರ್ಜ್ ಮೇಲಿನ ಆರೋಪವನ್ನು ಈ ರೀತಿ ಸಮರ್ಥಿಸಿಕೊಳ್ಳುವುದು ಸರಿಯಲ್ಲ. ರಾಜ್ಯದಲ್ಲಿ ಕಾನೂನು ಸರಿ ಇಲ್ಲ. ಅರಾಜಕತೆ ಸೃಷ್ಟಿಯಾಗಿದೆ ಎಂದರು.

ಇದೇ ವೇಳೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಚಾರ ಪ್ರಸ್ತಾಪಿಸಿದ ಅವರು, ಈ ಬಾರಿ ಅಲ್ಪಸಂಖ್ಯಾತರು ಮತ್ತು ಹಿಂದುಳಿದವರಿಗೆ ಎಷ್ಟು ಟಿಕೆಟ್ ಕೊಡ್ತೀರಾ ಅಂತಾ ಸಿಎಂ ಹೇಳಬೇಕು. ಇಲ್ಲದೆ ಇದ್ದರೆ ಅಹಿಂದ ಉದ್ಧಾರಕ ಅಂತ ಕರೆದುಕೊಳ್ಳಬೇಡಿ. ಮುಸ್ಲಿಮರು ಕುರುಡಾಗಿ ಕಾಂಗ್ರೆಸ್ ಗೆ ಬೆಂಬಲ ನೀಡುತ್ತಿದ್ದಾರೆ. ಅವರಿಗೆ ಏನು ಮಾಡಿದ್ದೀರಿ ಅಂತ ಪ್ರಶ್ನಿಸಿದ್ರು.

ಸಂಘ ಪರಿವಾರ ಮತ್ತು ಬಿಜೆಪಿ ಮುಖಂಡರ ಜೊತೆ ಸಿಎಂಗೆ ಒಳ ಒಪ್ಪಂದ ಇದೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಭಾಷಣ ಮಾಡುವ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಅರೆಸ್ಟ್ ಮಾಡೋಕೆ ಸಾಧ್ಯವಾಗಿದೆಯಾ? ಕರ್ತವ್ಯನಿರತ ಪೊಲೀಸರ ಬಗ್ಗೆ ಹೀನಾಯವಾಗಿ ಮಾತನಾಡಿದ ಆರ್‍ಎಸ್‍ಎಸ್ ನ ಜಗದೀಶ್ ಕಾರಂತ್ ಅವರನ್ನು ಬಂಧಿಸಿದ್ದೀರಾ? ಶ್ರೀರಾಮ ಸೇನೆ ಪ್ರಮೋದ್ ಮುತಾಲಿಕ್ ಗೆ ಇಲ್ಲಿ ರಕ್ಷಣೆ ಕೊಟ್ಟಿಲ್ವಾ? ಇವುಗಳನ್ನೆಲ್ಲಾ ಗಮನಿಸಿದಾಗ ಸಿಎಂ ಗೆ ಆರ್‍ಎಸ್‍ಎಸ್ ಜೊತೆ ಒಳಒಪ್ಪಂದ ಇರೋದು ಸ್ಪಷ್ಟ. ಇದು ನಿಮ್ಮ ಹಿಡನ್ ಅಜೆಂಡಾ. ಈ ಹಿಡನ್ ಅಜೆಂಡಾ ವಿಚಾರದಲ್ಲಿ ನೀವು ಬಿಜೆಪಿ ಅವರ ಅಪ್ಪ ಅಂತ ಕಿಡಿ ಕಾರಿದ್ರು.

ಸಿದ್ದರಾಮಯ್ಯ ನನಗೆ ಮಾತನಾಡದಂತೆ ಬೆದರಿಕೆ ಹಾಕಿಸಿದ್ದಾರೆ. ನನ್ನ ಹುಡುಗರನ್ನೇ ನನ್ನ ವಿರುದ್ಧ ಎತ್ತಿಕಟ್ಟುತಿದ್ದಾರೆ ಅಂತ ಆರೋಪಿಸಿದ ಅವರು, ಕುರುಬ ಸಮಾಜ ಅವರನ್ನ ಬೆಳೆಸಿದೆ. ಕುರುಬ ಸಮಾಜ ಸಿದ್ದರಾಮಯ್ಯಗಿಂತ ನನ್ನನ್ನು ಇಷ್ಟ ಪಟ್ಟಿದೆ. ಆದ್ರೆ ಸಿದ್ದರಾಮಯ್ಯ ಇದನ್ನ ಸಹಿಸೋಕೆ ಆಗದೆ ನನ್ನ ವಿರುದ್ಧ ಜನರನ್ನ ಎತ್ತಿಕಟ್ಟಿದ್ದಾರೆ. ಇವೆಲ್ಲವು ನಡೆಯೋಲ್ಲ, ಮುಂದಿನ ಚುನಾವಣೆಯಲ್ಲಿ ಎಲ್ಲಾ ಗೊತ್ತಾಗಲಿದೆ ಅಂತ ಹೇಳಿದ್ರು.

ಇನ್ನು ವಿಜಯಶಂಕರ್ ಪಕ್ಷ ತೊರೆಯುವ ವಿಚಾರದ ಕುರಿತು ಮಾತನಾಡಿದ ಅವರು, ಯಡಿಯೂರಪ್ಪ ವೈಯುಕ್ತಿಕವಾಗಿ ಒಳ್ಳೆಯ ವ್ಯಕ್ತಿ. ಮುಕ್ತ ಮನಸ್ಸಿನ ವ್ಯಕ್ತಿ. ಅವರ ಪಕ್ಷದಲ್ಲಿ ಸೋತ ಎಲ್ಲರಿಗೂ ಸ್ಥಾನಮಾನ ನೀಡಿದ್ದಾರೆ. ಬೆಂಕಿ ಮಹದೇವು, ಸೋಮಣ್ಣ ಸೇರಿ ವಿಜಯಶಂಕರ್ ಅವ್ರಿಗೂ ಸ್ಥಾನ ನೀಡಿದ್ರು. ಅವರು ಸೋತ್ರೂ ಸಹ ಅವ್ರಿಗೆ ಉನ್ನತ ಸ್ಥಾನ ನೀಡಿ ಗೌರವಿಸಿದ್ರು. ಇಷ್ಟೆಲ್ಲ ಇರುವಾಗ ಬಿಜೆಪಿ ಬಗ್ಗೆ ಟೀಕೆ ಸರಿಯಲ್ಲ ಅಂತ ವಿಜಯಶಂಕರ್‍ಗೆ ಸಲಹೆ ನೀಡಿದ್ರು.

Share This Article
Leave a Comment

Leave a Reply

Your email address will not be published. Required fields are marked *