ಗಲ್ಲುಶಿಕ್ಷೆ ಬದಲು ಬೇರೆ ವಿಧಾನದ ಮೂಲಕ ಶಿಕ್ಷೆ ನೀಡಬಹುದೇ: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

Public TV
1 Min Read

ನವದೆಹಲಿ: ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆಯ ಬದಲು ಬೇರೆ ಯಾವುದಾದರೂ ಮಾರ್ಗದ ಮೂಲಕ ಶಿಕ್ಷೆ ನೀಡಲು ಸಾಧ್ಯವೇ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ಮರಣದಂಡನೆಗೆ ಒಳಗಾಗಿರುವ ಅಪರಾಧಿಗಳಿಗೆ ಈಗಿರುವ ಮಾರ್ಗದ ಬದಲು ವೈಜ್ಞಾನಿಕವಾಗಿ ಬೇರೆ ಮಾರ್ಗಗಳನ್ನು ಬಳಸುವ ಸಾಧ್ಯತೆಗಳ ಕುರಿತು ಮೂರು ತಿಂಗಳ ಒಳಗೆ ವಿವರಣೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಶುಕ್ರವಾರ ನೋಟಿಸ್ ನೀಡಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಎಎಮ್ ಖನ್ವಿಲ್ಕರ್ ಮತ್ತು ಡಿವೈ ಚಂದ್ರಚೂಡ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿದೆ.

ಭಾರತದ ಸಂವಿಧಾನವು ಪ್ರಜೆಗಳ ಕುರಿತು ಸಹಾನುಭೂತಿಯುಳ್ಳದ್ದಾಗಿದ್ದು, ಪ್ರತಿಯೊಬ್ಬರ ಜೀವನದ ಪವಿತ್ರತೆಯನ್ನು ಗೌರವಿಸುತ್ತದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಗಲ್ಲು ಶಿಕ್ಷೆಗೆ ಗುರಿಯಾದವರಿಗೆ ಬೇರೆ ವಿಧಾನಗಳ ಮೂಲಕ ಶಿಕ್ಷೆ ನೀಡುವ ಸಾಧ್ಯತೆಗಳ ಕುರಿತು ಸಂವಿಧಾನದಲ್ಲಿ ಅವಕಾಶ ಕಲ್ಪಿಸುವ ಬಗ್ಗೆ ಯೋಚಿಸಬಹುದು ಎಂದು ಪೀಠ ಅಭಿಪ್ರಾಯಪಟ್ಟಿದೆ.

ವಕೀಲ ರಿಷಿ ಮಲ್ಹೋತ್ರಾ ರವರು ಸಾರ್ವಜನಿಕಾ ಹಿತಾಸಕ್ತಿ ಅರ್ಜಿಯ ವಿಚಾರಣೆ(ಪಿಐಎಲ್) ವೇಳೆ ಪೀಠ ಕೇಂದ್ರ ನೋಟಿಸ್ ಜಾರಿ ಮಾಡಿ, ಈಗ ವಿಜ್ಞಾನ ಸಾಕಷ್ಟು ಬದಲಾಗಿದೆ. ಹೀಗಾಗಿ ಕಾನೂನು ಬದಲಾವಣೆ ಮಾಡಲು ಸಾಧ್ಯವಿದೆಯೇ ಎಂದು ಕೇಳಿದೆ.

ಭಾರತೀಯ ಸಂವಿಧಾನದ 21ನೇ ಪರಿಚ್ಛೇದದ ಪ್ರಕಾರ ಬದುಕುವ ಹಕ್ಕನ್ನು ಕಲ್ಪಿಸಲಾಗಿದೆ. ಈ ಹಕ್ಕಿನ ಪ್ರಕಾರ ನೋವಾಗದಂತೆ ಅಪರಾಧಿ ಸಾಯಬೇಕೆಂದು ಹೇಳುತ್ತದೆ. ಆದರೆ ಭಾರತೀಯ ದಂಡ ಸಂಹಿತೆಯ ಮರಣದಂಡನೆ ಶಿಕ್ಷೆ ಯನ್ನು ಅನುಭವಿಸುವ ವ್ಯಕ್ತಿ ನೋವಿನಿಂದ ಮೃತಪಡುತ್ತಾನೆ. ಹೀಗಾಗಿ ಮರಣ ದಂಡನೆ ಶಿಕ್ಷೆಯ ಸಾವಿಂಧಾನಿಕ ಸಿಂಧುತ್ವವನ್ನು ಅರ್ಜಿದಾರರು ಪ್ರಶ್ನಿಸಿ ಪಿಐಎಲ್‍ನಲ್ಲಿ ಕಾನೂನು ಬದಲಾವಣೆ ಮಾಡುವಂತೆ ಮನವಿ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *