ಜ್ಞಾನಪೀಠ ಪುರಸ್ಕೃತರ ಸಮಾಧಿ ಜಾಗ `ಬಯಲು ಶೌಚಾಲಯ’!

Public TV
1 Min Read

ಬೆಂಗಳೂರು: ಅವರಿಬ್ಬರು ಕನ್ನಡ ನಾಡಿನ ಎರಡು ಮುತ್ತುಗಳು. ಒಬ್ಬರು ರಾಷ್ಟ್ರಕವಿ ಆದರೆ ಮತ್ತೊಬ್ಬರು ಕನ್ನಡ ಭಾಷೆಯ ಮೌಲ್ಯ ಹೆಚ್ಚಿಸಿದ ಜ್ಞಾನಪೀಠ ಪುರಸ್ಕೃತ. ಆದರೆ ಅವರಿಬ್ಬರಿಗೆ ರಾಜ್ಯ ಸರ್ಕಾರ ಮಾಡುತ್ತಿರೋ ಅವಮಾನ ಮಾತ್ರ ಎಂಥದ್ದು ಗೊತ್ತಾ.? ಮರಾಠರಿಗೆ ಜೈ ಎಂದು ಕನ್ನಡಿಗರಿಗೆ ದ್ರೋಹ ಮಾಡುತ್ತಿದ್ದಾರೆ.

 

ಸಮಾಧಿ ಕಾಣದ ಹಾಗೆ ಸುತ್ತಲೂ ಬೆಳೆದು ನಿಂತಿರುವ ಗಿಡಗಂಟೆಗಳು. ಅಲ್ಲೇ ಮಲ ಮೂತ್ರ ವಿಸರ್ಜನೆ ಮೂಲಕ ಈ ಜಾಗ ಈಗ ಬಯಲು ಶೌಚಾಲಯ. ಇದು ಯಾರದ್ದೋ ಸಮಾಧಿಯಲ್ಲ. ಕನ್ನಡಕ್ಕೆ ಜ್ಞಾನಪೀಠ ತಂದುಕೊಟ್ಟ ಸಾಹಿತಿ ಡಾ. ಅನಂತಮೂರ್ತಿ ಹಾಗೂ ರಾಷ್ಟ್ರಕವಿಯಾಗಿ ಪ್ರಖ್ಯಾತಿ ಪಡೆದ ಜಿ.ಎಸ್ ಶಿವರುದ್ರಪ್ಪನವರ ಸಮಾಧಿ.

 

ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿರುವ ಈ ಸಮಾಧಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಸಚಿವೆ ಉಮಾಶ್ರೀ ಅವರು ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ. ಈ ಕೆಲಸ ಅವರೆಲ್ಲಿ ಮಾಡುತ್ತಾರೆ. ಅದಕ್ಕೆ ಮೂರು ದಿನದೊಳಗೆ ಸಮಾಧಿ ಅಭಿವೃದ್ಧಿ ಕೆಲಸ ಮಾಡದಿದ್ದರೆ ನಾವೇ ಮಾಡುತ್ತೇವೆ ಎಂದು ಕರ್ನಾಟಕ ಕರ್ನಾಟಕ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ್ ಹೇಳಿದ್ದಾರೆ.

 

ಮರಾಠ ರಾಜ ಛತ್ರಪತಿ ಶಿವಾಜಿ ತಂದೆ ಶಹಾಜಿ ಸಮಾಧಿ ಅಭಿವೃದ್ಧಿ ಮಾಡೋಕೆ ಅಂತ ರಾಜ್ಯ ಸರ್ಕಾರ ಬಜೆಟ್‍ನಲ್ಲಿ 2 ಕೋಟಿ ಕೊಟ್ಟಿದೆ. ಆದರೆ ನಮ್ಮ ನಾಡಿನ ಕಣ್ಮಣಿಗಳಂತಿದ್ದ ಜಿಎಸ್ ಶಿವರುದ್ರಪ್ಪ ಹಾಗೂ ಡಾ. ಅನಂತಮೂರ್ತಿ ಸಮಾಧಿ ನಿರ್ವಹಣೆಗೆ ದುಡ್ಡು ಇಲ್ವಾ ಅನ್ನೋದು ಎಲ್ಲರ ಪ್ರಶ್ನೆಯಾಗಿದೆ.

ಅಂತ್ಯ ಸಂಸ್ಕಾರಕ್ಕೆ ಹೋದವರಿಗೆ ಮಾತ್ರ ಗೊತ್ತು ಈ ಸಮಾಧಿ ಯಾರದ್ದು ಅಂತ. ಯಾಕೆಂದರೆ ಸಮಾಧಿಗೆ ನಾಮಫಲಕಗಳಿಲ್ಲ. ಇಷ್ಟೊಂದು ನಿರ್ಲಕ್ಷ್ಯ ಯಾಕೆ ಕನ್ನಡ ಸಂಸ್ಕೃತಿ ಇಲಾಖೆಗೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಈ ನಿರ್ಲಕ್ಷ್ಯ ಇಬ್ಬರು ಸಾಹಿತಿಗಳಿಗೆ ಮಾಡಿದ ಅಪಮಾನವಲ್ಲ ಇಡೀ ಕನ್ನಡ ಭಾಷೆ, ಕರ್ನಾಟಕಕ್ಕೆ ಸರ್ಕಾರ ಮಾಡಿರುವ ಅಪಮಾನ ಎಂದು ಜನರು ಹೇಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *