ಪಾರ್ಕ್‍ನಲ್ಲಿ ಎಸಿ ಹಾಕಿಸಿದ ಶಾಸಕರು- ಸುಮ್ಮನೆ ಹಣಪೋಲು ಎಂದು ಸ್ಥಳೀಯರ ಆಕ್ರೋಶ

Public TV
1 Min Read

ಬೆಂಗಳೂರು: ಮಳೆ ಬಂದ್ರೆ ಬೆಂಗಳೂರು ತೊಯ್ದು ತೊಪ್ಪೆಯಾಗತ್ತೆ. ಮತ್ತೊಂದು ಕಡೆ ರಸ್ತೆ ಗುಂಡಿ ವಾಹನ ಸವಾರರನ್ನ ಹಿಂಡಿ ಹಿಪ್ಪೆ ಮಾಡತ್ತೆ. ನೈಸರ್ಗಿಕ ಗಾಳಿ ಸಿಗಲಿ ಅಂತ ಪಾರ್ಕ್‍ಗೆ ವೃದ್ಧರು, ಮಹಿಳೆಯರು, ಮಕ್ಕಳು ಪಾರ್ಕ್‍ಗೆ ಬರ್ತಾರೆ. ಆದ್ರೆ ಈ ಪಾರ್ಕ್ ಮಾತ್ರ ಸಿಕ್ಕಾಪಟ್ಟೆ ಹೈಫೈ. ಈ ಪಾರ್ಕ್‍ಗೆ ಬಂದ್ರೆ ಎಸಿ ಗಾಳಿ ಕುಡೀಬೇಕು.

ಇಂಥದ್ದೊಂದು ಪಾರ್ಕ್ ಇರೋದು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‍ನಲ್ಲಿ. ಇದನ್ನ ಉಪಮಹಾಪೌರರ ಅನುದಾನದಡಿಯಲ್ಲಿ ಮಾಡಿದ್ದಾರೆ. ಮಹಾಲಕ್ಷ್ಮೀ ಲೇಔಟ್ ಶಾಸಕ ಗೋಪಾಲಯ್ಯ ಹಾಗೂ ಕಾರ್ಪೊರೇಟರ್ ಕೇಶವಮೂರ್ತಿ ಪಾರ್ಕ್‍ನಲ್ಲೂ ಎಸಿ ಹಾಕಿಸಿದ್ದಾರೆ.

ಪಾರ್ಕ್‍ನಲ್ಲಿ ಎಸಿ ಅಳವಡಿಕೆ ಮಾಡುವ ಯೋಜನೆಗೆ ಬಿಬಿಎಂಪಿ ಹಾಗೂ ಸರ್ಕಾರದ ಹಣವನ್ನು ಬಳಕೆ ಮಾಡಿ ಹಣ ದೋಚುವ ಸಾಹಸಕ್ಕೆ ಶಾಸಕ ಗೋಪಾಲಯ್ಯ ಹಾಗೂ ಕಾರ್ಪೊರೇಟರ್ ಕೇಶವಮೂರ್ತಿ ಮುಂದಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಕೆಲ ಸ್ಥಳೀಯರು ಮಾತನಾಡಿ, ಬಡಾವಣೆಯಲ್ಲಿ ಎಷ್ಟೆಲ್ಲಾ ಸಮಸ್ಯೆಗಳು ಇವೆ. ಮಳೆ ಬಂತೆಂದರೆ ಬಡಾವಣೆಯ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡುತ್ತಿದೆ. ಅಲ್ಲದೇ ರಸ್ತೆಗಳೆಲ್ಲ ಹದಗೆಟ್ಟಿದ್ದು, ವಾಹನ ಸವಾರರಿಗೆ ತಲೆ ನೋವಾಗಿದೆ. ಇಂತಹ ಕೆಲಸಗಳಿಗೆ ಅನುದಾನ ಪಡೆದು ಸಾರ್ವಜನಿಕರಿಗೆ ಅನುಕೂಲವಾಗುವಂತಹ ಮೂಲಭೂತ ಸೌಕರ್ಯಗಳ ಬಗ್ಗೆ ಜನಪ್ರತಿನಿಧಿಗಳು ತಲೆಕೆಡಿಸಿಕೊಳ್ಳಬೇಕು. ಅದನ್ನು ಬಿಟ್ಟು ಹೈಫೈ ಎಸಿ ಪಾರ್ಕ್ ಯೋಜನೆ ಸಮಂಜಸವಲ್ಲ ಎಂದು ಆರೋಪಿಸಿದ್ದಾರೆ.

ಸರ್ಕಾರದ ಮತ್ತು ಬಿಬಿಎಂಪಿ ಉಪಮೇಯರ್ ಅನುದಾನವನ್ನ ಒಳ್ಳೆಯ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಬೇಕು. ಅವ್ಯವಸ್ಥೆಯ ಬಗ್ಗೆ ಗಮನಹರಿಸದೇ ಶಾಸಕ ಗೋಪಾಲಯ್ಯ ಹಾಗೂ ಕಾರ್ಪೊರೇಟರ್ ಕೇಶವಮೂರ್ತಿ ಸಾರ್ವಜನಿಕ ಪಾರ್ಕ್‍ನಲ್ಲಿ ಎಸಿ ಅಳವಡಿಕೆ ಮಾಡಲು ಮುಂದಾಗಿದ್ದಾರೆ. ಜನರಿಗೆ ಹೈಫೈ ಎಸಿ ಪಾರ್ಕ್‍ನ ಅವಶ್ಯಕತೆಯಿಲ್ಲ. ಇದು ಹುಚ್ಚಾಟದ ಆಲೋಚನೆ. ಪಾರ್ಕ್‍ನಲ್ಲಿ ಎಸಿ ಅಳವಡಿಕೆ ಆಲೋಚನೆ ಬಿಟ್ಟು ಜನಪರ ಕೆಲಸ ಮಾಡಬೇಕು ಎಂದು ಸ್ಥಳೀಯ ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *