ಬೆಂಗಳೂರು: ನಗರದ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಮಗ ಶರತ್ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವೊಂದು ಸಿಕ್ಕಿದೆ.
ಆಚಾರ್ಯ ತಾಂತ್ರಿಕ ಸಂಸ್ಥೆಯಲ್ಲಿ ಆಟೋ ಮೊಬೈಲ್ ಎಂಜಿನಿಯರಿಂಗ್ ಡಿಪೋಮಾ ಓದುತ್ತಿದ್ದ ಶರತ್ ಕಿಡ್ನಾಪ್ ಬಳಿಕ ಹಣ ನೀಡಬೇಕೆಂದು ಅಪಹರಣಕಾರರು ಬೇಡಿಕೆ ಇಟ್ಟಿದ್ದಾರೆ ಎಂದು ವಾಟ್ಸಪ್ ವಿಡಿಯೋ ಮಾಡಿ ಪೋಷಕರಿಗೆ ಕಳುಹಿಸಿದ್ದ. ಈ ವಿಡಿಯೋ ಪೊಲೀಸರಿಗೆ ತಿಳಿದಿದೆ ಎಂದು ಗೊತ್ತಾದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಸೆ.12ರಂದೇ ಕೊಲೆ ಮಾಡಿದ್ದಾರೆ ಎಂಬುವುದಾಗಿ ತಿಳಿದುಬಂದಿದೆ.
ಜ್ಞಾನಭಾರತಿ ಪೊಲೀಸರು ಗುರುವಾರ ರಾತ್ರಿ ಅಪಹರಣ ಮಾಡಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ, ಶರತ್ನನ್ನು ಕೊಲೆ ಮಾಡಿ ಕೆರೆಯಲ್ಲಿ ಬಿಸಾಡಿರೋದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಿಗಳಾದ ವಿಶಾಲ್, ವಿಕ್ಕಿ, ವಿನಯ್ ಬಂಧಿತರು. ಇದರಲ್ಲಿ ವಿಶಾಲ್ ಎಂಬುವವನು ಶರತ್ ಅಕ್ಕನ ಕ್ಲಾಸ್ ಮೇಟ್ ಆಗಿದ್ದನು ಎನ್ನಲಾಗಿದೆ.
ಶರತ್ನನ್ನು ಕೊಲೆ ಮಾಡಿ ಮಂಚನಬೆಲೆ ಬಳಿಯ ಅಜ್ಜನಹಳ್ಳಿ ಕೆರೆಯಲ್ಲಿ ಬಿಸಾಡಿರೋದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಹೀಗಾಗಿ ಅಜ್ಜನಹಳ್ಳಿ ಕೆರೆಯಲ್ಲಿ ಶರತ್ನ ಶವಕ್ಕಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. ಕೊಲೆಯ ಬಳಿಕ ಆರೋಪಿಗಳು ಕೆಎ- 541ಎಂಎ9636 ಸ್ವಿಫ್ಟ್ ಕಾರಿನಲ್ಲಿ ಶವವಿಟ್ಟುಕೊಂಡು ಸುತ್ತಾಡುತ್ತಿದ್ದರು. ಆರೋಪಿಗಳು ರಾಮೋಹಳ್ಳಿ ಕೆರೆಬಳಿ ಮಣ್ಣು ತೆಗೆದು ಶವವನ್ನು ಹೂತಿಟ್ಟಿದ್ದರು ಎನ್ನುವ ಮಾಹಿತಿ ಮೂಲಗಳು ತಿಳಿಸಿವೆ.
ಹೂತಿಟ್ಟಿದ್ದು ಯಾಕೆ?
ಆರೋಪಿ ವಿಶಾಲ್ ವಿಚಾರಣೆ ವೇಳೆ ಕೊಲೆಯ ಸತ್ಯ ಬಯಲಾಗಿತ್ತು. ತಡರಾತ್ರಿಯೇ ಸ್ಥಳಕ್ಕೆ ಆರೋಪಿಗಳಾದ ವಿಶಾಲ್ ಮತ್ತು ವಿನಯ್ನನ್ನು ಕರೆದ್ಯೊದ್ದು ತೀವ್ರವಾಗಿ ವಿಚಾರಣೆ ನಡೆಸಿದ್ದರು. ಶರತ್ ಶವವನ್ನು ರಾಮೋಹಳ್ಳಿ ಕೆರೆಯಲ್ಲಿ ಎಸೆದಿರುವುದಾಗಿ ಆರೋಪಿಗಳು ಹೇಳಿದ್ದರು. ಕೆರೆಯಲ್ಲಿ ಶವ ತೇಲಿದರೆ ಪೊಲೀಸರಿಗೆ ಗೊತ್ತಾಗುತ್ತೆ ಅಂತ ಜೆಸಿಬಿಯಲ್ಲಿ ಗುಂಡಿ ತೆಗೆದು ಶವವನ್ನು ಹೂತಿಟ್ಟಿರುವುದಾಗಿ ಬಾಯ್ಬಿಟ್ಟಿದ್ದಾರೆ.
ವಿಡಿಯೋದಲ್ಲಿ ಏನಿತ್ತು?
ಸೆಪ್ಟೆಂಬರ್ 12ರಂದು ಕೆಂಗೇರಿಯ ಉಳ್ಳಾಲದ ನಿವಾಸಿಯಾದ ಐಟಿ ಅಧಿಕಾರಿ ನಿರಂಜನ್ ಕುಮಾರ್ ಪುತ್ರ ಶರತ್ ಹೊಸ ರಾಯಲ್ ಎನ್ಫೀಲ್ಡ್ ಬೈಕ್ ಸ್ನೇಹಿತರಿಗೆ ತೋರಿಸುವುದಾಗಿ ಹೋಗಿದ್ದನು. ಅಂದೇ ದುಷ್ಕರ್ಮಿಗಳಿಂದ ಕಿಡ್ನಾಪ್ ಆಗಿದ್ದನು. ಬಳಿಕ `ಶರತ್ ತನ್ನನ್ನು ಕಿಡ್ನಾಪ್ ಮಾಡಿದ್ದಾರೆ, 50 ಲಕ್ಷ ರೂಪಾಯಿ ಕೊಟ್ಟು ಬಿಡಿಸಿಕೊಳ್ಳುವಂತೆ ತಂದೆಗೆ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದ. `ನಿನ್ನ ಕಿರುಕುಳದಿಂದ ತೊಂದರೆ ಅನುಭವಿಸಿದವರು ನನ್ನನ್ನು ಕಿಡ್ನಾಪ್ ಮಾಡಿದ್ದಾರೆ ಹಾಗೂ ಕಿಡ್ನಾಪ್ ಮಾಡಿದವರಿಗೆ ನಮ್ಮ ಕುಟುಂಬದ ಬಗ್ಗೆ ಎಲ್ಲವೂ ಗೊತ್ತಿದೆ. ಅವರು ನನ್ನ ಸಹೋದರಿಯನ್ನು ಕೂಡಾ ಅಪಹರಣ ಮಾಡಬಹುದು’ ಎಂದು ವಿಡಿಯೋದಲ್ಲಿ ಹೇಳಿದ್ದನು. ವೀಡಿಯೋ ಕಳುಹಿಸಿದ್ದ ಬಳಿಕ ಶರತ್ ಮೊಬೈಲ್ ಸ್ವಿಚ್ ಆಫ್ ಆಗಿತ್ತು.