ನೆಲಮಂಗಲ: ಎರಡು ನಿಮಿಷ ಟೋಲ್ ಸಿಬ್ಬಂದಿ ಬಸ್ ಬಿಡದಿದ್ದಕ್ಕೆ 35ಕ್ಕೂ ಹೆಚ್ಚು ಕಿಡಿಗೇಡಿಗಳು ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 4ರ ಟೋಲ್ ಆಪರೇಟರ್ ಮೇಲೆ ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಘಟನೆಯು ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಜಾಸ್ ಟೋಲ್‍ನಲ್ಲಿ ನಡೆದಿದ್ದು, ಟೋಲ್ ಆಪರೇಟರ್ ಮೇಲೆ ಹಲ್ಲೆ ಮಾಡಿ ಟೋಲ್ ಬೂತ್‍ನಲ್ಲಿದ್ದ ಯಂತ್ರೋಪಕರಣಗಳನ್ನ ಧ್ವಂಸ ಮಾಡಿ ಕಿಡಿಗೇಡಿಗಳು ದಾಂಧಲೆ ನಡೆಸಿದ್ದಾರೆ. ಸುಮಾರು 35 ಜನರ ತಂಡ ಟೋಲ್ ಆಪರೇಟರ್ ನಾಗರಾಜು ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಎಲ್ಲಾ ದೃಶ್ಯಗಳು ಟೋಲ್‍ನ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಶನಿವಾರ ಸಂಜೆ 7.30ರ ಸುಮಾರಿಗೆ ಘಟನೆ ಸಂಭವಿಸಿದೆ. ದಾಂಧಲೆ ನಡೆಸಿದ ಗುಂಪಿನಲ್ಲಿದ್ದ ಎಲ್ಲರೂ ಹಿಂದಿ ಭಾಷೆ ಮಾತಾನಾಡುತ್ತಿದ್ದು, ಸ್ಥಳೀಯ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಘಟನೆಯ ವೇಳೆ ಟೋಲ್ ಬೂತ್ ನಂ. 1ರಿಂದ ಆಪರೇಟರ್‍ನನ್ನು ಹೊರದಬ್ಬಲು ಕಿಡಿಗೇಡಿಗಳು ಯತ್ನಿಸಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಗೂಂಡಾ ವರ್ತನೆ ತೋರಿದ ಎಲ್ಲಾ ಕಾರ್ಮಿಕರು ಸದ್ಯ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.