ಜಿಎಸ್‍ಟಿ ಅಡಿ ಪೆಟ್ರೋಲ್ ಬಂದ್ರೆ ಬೆಂಗ್ಳೂರಿನಲ್ಲಿ ಪ್ರತಿ ಲೀಟರ್‍ಗೆ 40 ರೂ.ಅಷ್ಟೇ!

Public TV
2 Min Read

ಬೆಂಗಳೂರು: ಪೆಟ್ರೋಲ್ ಬೆಲೆ 2014ರ ನಂತರ ಭಾರೀ ಏರಿಕೆಯಾಗಿದೆ. ಆದರೆ ಪೆಟ್ರೋಲ್, ಡೀಸೆಲ್ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ವ್ಯಾಪ್ತಿಗೆ ತಂದರೆ ಬೆಂಗಳೂರಿನಲ್ಲಿ 40 ರೂ. ಆಗಬಹುದು.

ಹೌದು. Factly.in ವೆಬ್‍ಸೈಟ್ ಈ ವರದಿ ಪ್ರಕಟಿಸಿದ್ದು ಒಂದು ವೇಳೆ ಪೆಟ್ರೋಲ್‍ಗೆ ಶೇ.18 ರಷ್ಟು ತೆರಿಗೆ ವಿಧಿಸಿದರೆ ಬೆಲೆ 40 ರೂ. ಆಗುತ್ತದೆ ಎಂದು ಹೇಳಿದೆ. ಪ್ರಸ್ತುತ ಭಾರತದಲ್ಲಿ ವಸ್ತುಗಳ ಮೇಲೆ ಶೇ.5, ಶೇ.12, ಶೇ.18, ಶೇ.28 ಜಿಎಸ್‍ಟಿ ತೆರಿಗೆ ವಿಧಿಸಲಾಗುತ್ತದೆ. ಹೀಗಾಗಿ ಈ ಪೆಟ್ರೋಲ್ ಗೆ ಎಷ್ಟು ಜಿಎಸ್‍ಟಿ ಹಾಕಿದ್ರೆ ಎಷ್ಟು ರೂ. ಆಗಬಹುದು ಎನ್ನುವ ವಿವರಣೆಯಲ್ಲಿ ಈ ವೆಬ್‍ಸೈಟ್ ಪ್ರಕಟಿಸಿದೆ.

ಎಷ್ಟು ತೆರಿಗೆ ಆದ್ರೆ ಎಷ್ಟು ರೂ.?
ಈಗ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 71.17 ರೂ. ಇದೆ. ಒಂದು ವೇಳೆ ಜಿಎಸ್‍ಟಿ ವ್ಯಾಪ್ತಿಗೆ ತಂದು ಶೇ.12 ತೆರಿಗೆ ವಿಧಿಸಿದರೆ 38.01 ರೂ., ಶೇ.18 ತೆರಿಗೆ ವಿಧಿಸಿದರೆ 40.05 ರೂ., ಶೇ.28 ತೆರಿಗೆ ವಿಧಿಸಿದರೆ 43.44 ರೂ. ಆಗಬಹುದು. ಒಂದು ವೇಳೆ ಜಿಎಸ್‍ಟಿ ಶೇ. 28 ಮತ್ತು ಹೆಚ್ಚುವರಿಯಾಗಿ ಶೇ.22 ಜಿಎಸ್‍ಟಿ ಸೆಸ್ ವಿಧಿಸಿದರೂ ಬೆಲೆ 50.91 ರೂ. ಆಗಲಿದೆ.

ಬೆಂಗಳೂರಿನಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆ 58.82 ರೂ. ಇದೆ. ಜಿಎಸ್‍ಟಿ ಅಡಿಯಲ್ಲಿ ಡೀಸೆಲ್ ಬಂದರೆ ಶೇ.12 ತೆರಿಗೆ ಹಾಕಿದ್ರೆ 36.65 ರೂ. ಆಗುತ್ತದೆ. ಒಂದು ವೇಳೆ ಶೇ.18ರಷ್ಟು ತೆರಿಗೆ ವಿಧಿಸಿದರೆ 38.61 ರೂ. ಆದರೆ ಶೇ.28 ತೆರಿಗೆ ವಿಧಿಸಿದರೆ 41.88 ರೂ. ಆಗುತ್ತದೆ. ಜಿಎಸ್‍ಟಿ ಶೇ.28 ಜೊತೆಗೆ ಹೆಚ್ಚುವರಿ ಸೆಸ್ 22 ಹಾಕಿದ್ರೆ ಡೀಸೆಲ್ ಬೆಲೆ 49.8 ಆಗಬಹುದು.

ಪೆಟ್ರೋಲ್ ಜಿಎಸ್‍ಟಿಯಲ್ಲಿ ಬರಲ್ಲ:
ಅಡುಗೆ ಅನಿಲ (ಎಲ್‍ಪಿಜಿ), ಸೀಮೆಎಣ್ಣೆ, ನಾಫ್ತಾ ಗಳಿಗೆ ಜಿಎಸ್‍ಟಿ ಅನ್ವಯವಾಗುತ್ತಿದೆ. ಆದರೆ ಡೀಸೆಲ್, ಪೆಟ್ರೋಲ್, ನೈಸರ್ಗಿಕ ಅನಿಲ, ಕಚ್ಚಾ ತೈಲ ಮತ್ತು ವಿಮಾನ ಇಂಧನವನ್ನು ಸದ್ಯಕ್ಕೆ ಜಿಎಸ್‍ಟಿಯಿಂದ ಹೊರಗೆ ಇಡಲಾಗಿದೆ. ರಾಜ್ಯ ಸರ್ಕಾರಗಳು ಮದ್ಯ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರವನ್ನು ಬಿಟ್ಟುಕೊಡಲು ಮುಂದಾಗದ ಹಿನ್ನೆಲೆಯಲ್ಲಿ ಇವುಗಳು ಜಿಎಸ್‍ಟಿ ವ್ಯಾಪ್ತಿಗೆ ಸೇರ್ಪಡೆಯಾಗಿಲ್ಲ.

ಜಿಎಸ್‍ಟಿ ವ್ಯಾಪ್ತಿಗೆ ಪೆಟ್ರೋಲ್ ಬರುತ್ತಾ?
ಕೇಂದ್ರ ಹಣಕಾಸು ಸಚಿವರು, ರಾಜ್ಯಗಳ ಹಣಕಾಸು ಸಚಿವರು ಇರುವ ಜಿಎಸ್‍ಟಿ ಮಂಡಳಿಯಲ್ಲಿ ಒಪ್ಪಿಗೆ ಸಿಕ್ಕಿದರೆ ಪೆಟ್ರೋಲ್ ಬೆಲೆ ಕಡಿಮೆಯಾಗಬಹುದು. ಈಗಾಗಲೇ ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿಗೆ ತಂದರೆ ದೇಶಾದ್ಯಂತ ಏಕರೂಪದ ದರ ವಿಧಿಸಬಹುದು ಎಂದು ಹೇಳಿದ್ದಾರೆ. ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿರುವ ಕಾರಣ ಎಲ್ಲ ರಾಜ್ಯಗಳು ಒಪ್ಪಿಗೆ ನೀಡಿದರೆ ಬೆಲೆ ಕಡಿಮೆಯಾಗಬಹುದು.

ಬೆಲೆ ಯಾಕೆ ಜಾಸ್ತಿ?
ಪ್ರವೇಶ ತೆರಿಗೆ, ವ್ಯಾಟ್, ಅಬಕಾರಿ ಸುಂಕ, ಅಕ್ಟ್ರಾಯ್, ಪೆಟ್ರೋಲ್ ಪಂಪ್ ಮಾಲೀಕರ ಕಮಿಷನ್ ಸೇರಿ ಪೆಟ್ರೋಲ್, ಡೀಸೆಲ್ ದರ ನಿಗದಿಯಾಗುತ್ತದೆ. 2014ರಿಂದ ಈವರೆಗೆ ಲೀಟರ್ ಪೆಟ್ರೋಲ್ ಮೇಲೆ 11.77 ರೂ. ಮತ್ತು ಡೀಸೆಲ್ ಮೇಲೆ 13.47 ರೂ. ರಷ್ಟು ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಹೇರಿದೆ. ಇದರಿಂದ 99,000 ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಜಿಎಸ್‍ಟಿಯಲ್ಲಿ ಪೆಟ್ರೋಲ್ ಬೆಲೆ

ಜಿಎಸ್‍ಟಿಯಲ್ಲಿ ಡೀಸೆಲ್ ಬೆಲೆ

Share This Article
Leave a Comment

Leave a Reply

Your email address will not be published. Required fields are marked *