ಶೌಚಾಲಯ ನಿರ್ಮಿಸಲು ವಿರೋಧ- ತಾನೇ ಸಲಿಕೆ ಹಿಡಿದು ಗುಂಡಿ ತೆಗೆಯಲು ಮುಂದಾದ ದಾವಣಗೆರೆ ಸಿಇಓ

Public TV
1 Min Read

ದಾವಣಗೆರೆ: ಗ್ರಾಮದಲ್ಲಿ ಶೌಚಾಲಯ ಕಟ್ಟಿಕೊಳ್ಳಲು ವಿರೋಧ ವ್ಯಕ್ತಪಡಿಸುತ್ತಿದ್ದರಿಂದ ಸ್ವತಃ ಸಿಇಓ ಅವರೇ ಸಲಿಕೆ ಹಿಡಿದು ಶೌಚಾಲಯ ಗುಂಡಿ ತೆಗೆಯಲು ಯತ್ನಿಸಿದ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅಕ್ಟೋಬರ್ 2ರ ಒಳಗೆ ಬಯಲು ಬಹಿರ್ದೆಸೆ ಜಿಲ್ಲೆಯನ್ನಾಗಿ ಮಾಡಬೇಕೆಂದು ಪಣತೊಟ್ಟಿದ್ದರಿಂದ ದಾವಣಗೆರೆ ಜಿಲ್ಲಾ ಪಂಚಾಯತ್ ಸಿಇಓ ಅಶ್ವಥಿ, ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಜನರಲ್ಲಿ ಶೌಚಾಲಯದ ಬಗ್ಗೆ ಅರಿವು ಮೂಡಿಸುತ್ತಿದ್ದರು. ಅದೇ ರೀತಿ ಚನ್ನಗಿರಿ ತಾಲೂಕಿನ ದೇವರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಆದ್ರೆ ಗ್ರಾಮದ ಕುಟುಂಬವೊಂದು ಶೌಚಾಲಯ ಕಟ್ಟಲು ವಿರೋಧ ವ್ಯಕ್ತಪಡಿಸಿತ್ತು. ಈ ವೇಳೆ ಸಿಇಓ ಆ ಕುಟುಂಬವನ್ನು ಮನವೊಲಿಸಲು ಪ್ರಯತ್ನಿಸಿದ್ದಾರೆ. ಇದು ಫಲಪ್ರದವಾಗದಾಗ ಸ್ವತಃ ತಾವೇ ಸಲಿಕೆ ಹಿಡಿದು ಮಣ್ಣನ್ನು ಬಗೆದು ಪಕ್ಕಕ್ಕೆ ಹಾಕಲು ಶುರು ಮಾಡಿದ್ರು.

ಉನ್ನತ ಮಟ್ಟದ ಮಹಿಳಾ ಉದ್ಯೋಗಿಯೊಬ್ಬರು ಸಲಿಕೆ ಹಿಡಿದು ಕೆಲಸ ಪ್ರಾರಂಭಿಸಿದ್ದನ್ನು ನೋಡಿ ಸ್ಥಳೀಯರಿಗೆ ಮುಜುಗರ ಉಂಟಾಯಿತು. ಅಲ್ಲದೇ ನೆರೆದಿದ್ದವರು ಸಿಇಓ ಅವರನ್ನು ಪರಿಪರಿಯಾಗಿ ಬೇಡಿಕೊಂಡರು. ಆದ್ರೆ ಅಶ್ವಥಿ ಮಾತ್ರ ತಮ್ಮ ಕೆಲಸ ನಿಲ್ಲಿಸಿಲ್ಲ. ಇದರಿಂದ ಮುಜುಗರಗೊಂಡ ಕುಟುಂಬದ ಯಜಮಾನ ತಾವೇ ಶೌಚಾಲಯಕ್ಕೆ ಗುಂಡಿ ತೋಡುವುದಾಗಿ ಭರವಸೆ ನೀಡಿದ್ರು. ಆದ್ರೆ ಇದರಿಂದ ಅನುಮಾನಗೊಂಡ ಸಿಇಓ ಶೌಚಾಲಯ ನಿರ್ಮಾಣ ಹಂತದ ಪ್ರತಿ ಫೋಟೋಗಳನ್ನು ಕಳುಹಿಸುವಂತೆ ಹೇಳಿ ಅಲ್ಲಿಂದ ತೆರಳಿದ್ರು.

Share This Article
Leave a Comment

Leave a Reply

Your email address will not be published. Required fields are marked *